ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಜೀತದಾಳುಗಳ ನೆರವಿಗೆ ಧಾವಿಸಿದ ಕಾರ್ಮಿಕ ಇಲಾಖೆ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಗುಡ್ಡದ ತಪ್ಪಲಿನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ 30 ಕೂಲಿ ಕಾರ್ಮಿಕರ ನೆರವಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.

ತಮಿಳುನಾಡು, ಬಿಹಾರ ಮತ್ತು ಆಂಧ್ರಪ್ರದೇಶ ಮೂಲದ ಸುಮಾರು 30 ಬಡ, ಅನಾಥ ಮತ್ತು ಅಂಗವಿಕಲ ಕಾರ್ಮಿಕರನ್ನು ಕಳೆದ ಒಂದು ವರ್ಷದಿಂದ ಅಕ್ರಮವಾಗಿ ಬಂಧನದಲ್ಲಿಟ್ಟು, ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಅಮ್ಜದ್ ಖಾನ್ ಕಾರ್ಮಿಕರು ಇದ್ದ ಸ್ಥಳಕ್ಕೆ ಧಾವಿಸಿ, ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ “ಜನತಾ ರಾಯಭಾರಿ” ಮಾಧ್ಯಮ ಮೊಟ್ಟ ಮೊದಲಿಗೆ ಸುದ್ದಿಯನ್ನು ಪ್ರಸಾರ ಮಾಡಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾರ್ಮಿಕರು ಇದ್ದ ಸ್ಥಳಕ್ಕೆ ಧಾವಿಸಿ, 30 ಕಾರ್ಮಿಕರನ್ನು ಹನೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸ್ಥಳಾಂತರ ಮಾಡಿದರು.

ಏನಿದು ಪ್ರಕರಣ: ಆರೋಪಿ ಷಣ್ಮುಗಂ ಮೇಸ್ತ್ರಿ ಎಂಬಾತ ತಮಿಳುನಾಡಿನ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ನಿರ್ಗತಿಕರು, ಕೈ-ಕಾಲು ಊನವಿರುವ ಅಂಗವಿಕಲರು ಮತ್ತು ಅನಾಥರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹನೂರಿಗೆ ಕರೆತಂದಿದ್ದನು. ಕಳೆದ ಒಂದು ವರ್ಷದಿಂದ 30 ಜನರಿಗೆ ಯಾವುದೇ ಕೂಲಿ ನೀಡದೆ, ಸರಿಯಾಗಿ ಊಟ ನೀಡದೆ ಗುಡ್ಡದ ತುದಿಯಲ್ಲಿ ಬಂಧಿಸಿ ಕೆಲಸ ಮಾಡಿಸಲಾಗುತ್ತಿತ್ತು.‌ ಈ ಅಮಾನವೀಯ ಕೃತ್ಯದ ಬಗ್ಗೆ ತಿಳಿದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಬಂಧನದಲ್ಲಿರುವ 30 ಅಮಾಯಕರನ್ನು ರಕ್ಷಿಸಿ, ಅವರಿಗೆ ಸೂಕ್ತ ಆಹಾರ, ಆಶ್ರಯ ಮತ್ತು ವೈದ್ಯಕೀಯ ನೆರವು ಒದಗಿಸಬೇಕು. ಜೊತೆಗೆ ಮುಖ್ಯ ಆರೋಪಿ ಷಣ್ಮುಗಂ ಮೇಸ್ತ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದರು.

Share this Article
Leave a comment