ಚಾಮರಾಜನಗರ ತಾಲೂಕಿನ ಹೊಂಗನೂರು ಕುಗ್ರಾಮದಲ್ಲಿ ಜನಿಸಿದ ಪ್ರೊ.ಎಂ.ನಂಜಯ್ಯ ಹೊಂಗನೂರಿನ ಮೊದಲ ತಲೆಮಾರಿನ ಅಕ್ಷರಸ್ಥರಾಗಿ ರಾಜ್ಯದ ಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿ.ವಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಅದಕ್ಕೆ ಘನತೆ ತುಂಬುವ ಎತ್ತರಕ್ಕೆ ಬೆಳೆದು ನಿಂತಿರುವುದು ಶ್ಲಾಘನೀಯವಾದುದು.
ಪ್ರೊ.ನಂಜಯ್ಯ ಹೊಂಗನೂರು ಜನಾನುರಾಗಿಯಾಗಿ, ವಿದ್ಯಾರ್ಥಿಗಳ ಕಣ್ಮಣಿಯಾಗಿ ನಾಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗುವ ಹೊಸ್ತಿಲಲ್ಲಿರುವ ಹಳೆ ಮೈಸೂರು ಭಾಗದ ಮೊದಲ ದಲಿತ ಸಮುದಾಯವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿರುವರು. ಅವರ ಈ ಸಾಧನೆಯ ಹಿಂದೆ ಜೀವನ ಸಂಘರ್ಷದ ಘನವಾದ ಪರಿಶ್ರಮ ಮತ್ತು ತ್ಯಾಗವಿದೆ. ಸಾಧನೆ ಮಾಡುವುದು ಸೋಮಾರಿಯ ಸ್ವತ್ತಲ್ಲ ಎಂದರಿತು ಅಹರ್ನಿಶಿಯಾಗಿ ಬದ್ಧತೆಯಿಂದ, ನಿರಂತರ ಜಾಗೃತೆಯಿಂದ, ಸ್ವಾಭಿಮಾನದಿಂದ, ದಕ್ಷತೆಯಿಂದ ಇನ್ನೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲವೇ ಅವರನ್ನು ಈ ಮಟ್ಟಕ್ಕೆ ತಂದಿದೆ. ಈ ಒಂದು ಪ್ರೇರಣೆಯು ‘ಶತಮಾನ ಕಂಡ ಶ್ರೇಷ್ಠ ರಾಜಕಾರಣಿ ಬಿ.ರಾಚಯ್ಯ’ನವರ ಅತೀಯಾದ ಒಡನಾಟದಿಂದ ಬಂದಿದೆ ಎಂದರೆ ಅತಿಶಯೋಕ್ತಿ ಅಲ್ಲ. ಬಿ.ರಾಚಯ್ಯನವರ ಸುತ್ತಮುತ್ತಲಿದ್ದ ಪರಿಸರದ ಜನರೇ ಸಜ್ಜನರು.

ನೆಲಮೂಲ ಸಂಸ್ಕೃತಿಯ ಮಕ್ಕಳ ನೋವು-ನಲಿವು, ಧೈರ್ಯ-ಸ್ಥೈರ್ಯ, ಶಿಸ್ತು-ಶ್ರದ್ಧೆ, ದಕ್ಷತೆ-ಉದಾರತೆ, ಸ್ವಾಭಿಮಾನ-ಅಭಿಮಾನಗಳಿಗೆ ತಮ್ಮದೆಯಾದ ಕನ್ನಡ ಮತ್ತು ಜಾನಪದ ಸೊಗಡಿನ ಗಟ್ಟಿತನವನ್ನು ಅವರ ಬಹುಮುಖಿ ನೆಲೆಯಲ್ಲಿ ಅಭಿವ್ಯಕ್ತಿಸಿದ ಅಪರೂಪದ ಗ್ರಾಮೀಣ ಪ್ರತಿಭೆ. ಜಾನಪದದಲ್ಲೇ ಅಚಲವಾದ ನಂಬಿಕೆ ಇಟ್ಟು ಕುಶಾಗ್ರಮತಿಯಾಗಿ ತಪಸ್ಸಿನಂತೆ ಒಂದೇ ಉಸಿರಿನಲ್ಲಿ ಧ್ಯಾನಿಸಿ ಸಾಧನೆಯ ಉತ್ತುಂಗಕ್ಕೇರುವ ಅವರ ಉತ್ಸಾಹಕ್ಕೆ ಅವರೇ ಸಾಟಿ.
ಜಾನಪದ ಮತ್ತು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚನೆಗೊಂಡಿರುವ ಅವರ ಸೃಜನಶೀಲತೆ, ಪರಿಪೂರ್ಣತೆ ಎಲ್ಲರಿಗೂ ಅಚ್ಚರಿ ಮೂಡಿಸುವಂತಹದ್ದು. ಅವರ ಈ ಸಾಹಿತ್ಯಾಸಕ್ತಿ ಮತ್ತು ಪಾರಂಪರಿಕ ಪ್ರಜ್ಞೆ ಇವುಗಳೆಲ್ಲಕ್ಕೂ ಕಾರಣವಾಗಿದೆ. ಇದಕ್ಕೆ ಕಳಶಪ್ರಾಯದಂತೆ ತಮ್ಮ ದಿನನಿತ್ಯದ ಅಗತ್ಯ ವಸ್ತುಗಳಿಗಿಂತ ಅವರ ಸುತ್ತಮುತ್ತ ಅಪರೂಪದ ಪಾರಂಪರಿಕ ಪರಿಕರಗಳು ಮತ್ತು ಸಾವಿರಾರು ಪುಸ್ತಕಗಳೇ ಆವರಿಸಿವೆ. ಅವರೊಬ್ಬ ಪಾರಂಪರಿಕ ಮತ್ತು ಪುಸ್ತಕ ಪ್ರೇಮಿಯಾಗಿ ಸಾಹಿತ್ಯಾಸಕ್ತರ ಕಣ್ಮನಗಳನ್ನು ತಣಿಸಿದ್ದಾರೆ. ಅವರ ಜೀವನವೇ ಒಂದು ಆದರ್ಶಪ್ರಾಯವಾದುದಾರೆ, ಅವರ ಬರಹ ಮತ್ತು ಆಡಳಿತ ವಿಶಿಷ್ಟವಾದ ಅಪರೂಪದ ಮಾದರಿ. ಅವರ ಅದರ್ಶಮಯ ಬದುಕಿನೊಂದಿಗೆ ಹಲವು ನೆಲೆಯಲ್ಲಿ ನೊಂದವರ, ಅಲಕ್ಷಿತರ, ಶೋಷಿತರ ಸ್ಪಂದನೆಯಿಂದಾಗಿ ಅವರು ಅಲಂಕರಿಸಿರುವ ಹಲವು ಪ್ರಶಸ್ತಿಗಳು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿವೆ. ಸಾಂಸಾರಿಕ ವಿಮುಖಿಯಾಗಿ ಬಂಧು-ಬಳಗವನ್ನೇ ಮತ್ತು ವಿದ್ಯಾರ್ಥಿಗಳನ್ನೇ ತನ್ನ ಲೋಕವೆಂದರಿತು ಧೃತಿಗೆಡದೆ ಸ್ಫೂರ್ತಿದಾಯಕವಾಗಿ ಬದುಕಿ ಇತರರು ಸದಾ ಅನುಕರಿಸಬಹುದಾದ ಮೌಲ್ಯಗಳಿಗೆ ಪಾತ್ರರಾಗಿದ್ದಾರೆ.

ನಗರ ಪ್ರದೇಶಕ್ಕೆ ಅತ್ಯಂತ ದೂರದಲ್ಲಿರುವ ಕಾಡಂಚಿನ ಗ್ರಾಮದಲ್ಲಿ ಒಬ್ಬ ಸಾಮಾನ್ಯನಂತೆ ಕಳೆದು ಹೋಗಬೇಕಿದ್ದ ಶ್ರೀಯುತರು ಸಾಧನೆಗಾಗಿ ಸವೆಸಿದ ಮಾರ್ಗ, ಗುರಿಮುಟ್ಟುವಲ್ಲಿ ತೋರುವ ದಿಟ್ಟತನದ ಆತ್ಮವಿಶ್ವಾಸ, ಸುವ್ಯವಸ್ಥೆಗಾಗಿ ನಡೆಸುವ ಸಂಘರ್ಷಗಳೆಲ್ಲವೂ ಅದರ್ಶನೀಯವಾಗಿ ಮುಂದಿನ ಪೀಳಿಗೆಗೆ ಮತ್ತು ಪ್ರಸ್ತುತಕ್ಕೂ ಸ್ಫೂರ್ತಿಸೆಲೆಯಾಗಬಲ್ಲವು ಎಂಬುದು ಅತಿಶಯೋಕ್ತಿಯಲ್ಲ. ಸಮಾಜಸೇವೆಗೆ ಕೇವಲ ಅಧಿಕಾರದಿಂದ ಮಾತ್ರ ಸಾಧ್ಯವೆಂಬುದನ್ನು ಮಿಥ್ಯಗೊಳಿಸುವಂತೆ ವ್ಯಯಕ್ತಿಕವಾದ ನೆಲೆಯಲ್ಲಿಯೂ ಸಾಧಿಸಿ ತೋರಿಸಿರುವುದು ಅವರ ಶಿಷ್ಯ ಬಳಗಕ್ಕೆ ಮಾರ್ಗದರ್ಶಿಯಾದುದು. ಪ್ರಮಾಣಕ್ಕಿಂತ ಪರಿಣಾಮ ಮಹತ್ವದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಯೋಜಿತ ರೀತಿಯಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಿದವರಾಗಿದ್ದಾರೆ. ಪ್ರಸಾರಾಂಗ ಕಟ್ಟಿದ ಕುವೆಂಪುರವರ ಆಲೋಚನೆಗಳನ್ನು ಹಲವು ಬಗೆಯಲ್ಲಿ ಸಾಕಾರಗೊಳಿಸುವುದರ ಮೂಲಕ ಅವರನ್ನು ಮನನಮಾಡಿಕೊಂಡಿದ್ದಾರೆ. ಇವರು ನಡೆಸಿಕೊಟ್ಟ ಸರಣಿ ಪ್ರಚಾರೋಪನ್ಯಾಸ ಮಾಲೆಯ ವಿಚಾರಗಳು ಜನಸಾಮಾನ್ಯರ ಮತ್ತು ಆಸಕ್ತರ ಜ್ಞಾನದಾಹ ತಣಿಸಿದೆ, ಪ್ರಸಾರಾಂಗದ ಪುಸ್ತಕೋತ್ಸವ ಕಾರ್ಯಕ್ರಮಕ್ಕೆ ಮೈಸೂರು ವಿ.ವಿ ನೀಡಿದ್ದ ಒಂದು ಲಕ್ಷ ರೂಪಾಯಿಗಳಲ್ಲಿ ೭೨ ಸಾವಿರ ಖರ್ಚು ಮಾಡಿ ೨೮ ಸಾವಿರ ಉಳಿಸಿ ಅದನ್ನು ಮೈಸೂರು ವಿ.ವಿಗೆ ಹಿಂದಿರುಗಿಸಿದ್ದಾರೆ. ಇಂತಹ ವಿದ್ಯಾಮಾನವನ್ನು ನಾನು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ನೋಡಿಯೇ ಇಲ್ಲ. ಈ ಪ್ರಮಾಣಿಕ ಪ್ರಯತ್ನದ ಫಲವಾಗಿಯೇ ಪುಸ್ತಕೋತ್ಸವದಲ್ಲಿ ಪ್ರಸಾರಾಂಗದ ಪುಸ್ತಕಗಳಿಗೆ ವಿವಿಧ ರೀತಿಯ ರಿಯಾತಿಗಳನ್ನು ನೀಡಿ ಪುಸ್ತಕಗಳನ್ನು ಮಾರಾಟ ಮಾಡುವುದರ ಮೂಲಕ ಸುಮಾರು ೩೦ ಲಕ್ಷಕ್ಕಿಂತ ಅಧಿಕ ಮೊತ್ತದ ಹಣವನ್ನು ವಿ.ವಿಗೆ ಹರಿದು ಬಂದಿದೆ. ವಯಕ್ತಿಕ ನೆಲೆಯಲ್ಲಿಯೂ ಪ್ರಮಾಣಿಕವಾಗಿ ರೂಪಿಸಿದ ಸಣ್ಣ ಕಾರ್ಯಕ್ರಮಗಳಿಗೂ ಮಾನ್ಯ ಕುಲಪತಿಗಳು ಬಂದು ಹಿತನುಡಿಗಳನ್ನಾಡುವುದರ ಮೂಲಕ ಪ್ರೋತ್ಸಾಹಿಸಿದ್ದಾರೆ. ಸರ್ಕಾರಿ ಕೆಲಸವಾಗಲೀ, ಸಮಾಜ ಸೇವೆಯಾಗಲಿ ಅದರ ಛಾಯೆ ಜ್ಞಾನದ ಕಲೆಯ ಮೇಲಿರಬೇಕೆ ಹೊರತು ಶಿಲೆಯ ಮೇಲಲ್ಲ ಎಂದು ಪ್ರಸಾರಾಂಗದ ಏಳಿಗೆಗೆ ದಣಿವರಿಯದೇ ದುಡಿದಿದ್ದಾರೆ. ಇವರ ಸೇವೆಯಲ್ಲಿ ದಾನಿಗಳ ನೆರವಿನಿಂದ ಬಂದ ‘ಕರ್ಣಾಟ ಭಾರತ ಕಥಾಮಂಜರಿ’ ಸಾವಿರ ಕೃತಿಗಳು ಮುದ್ರಣಗೊಂಡ ೪೦ ದಿನದಲ್ಲೇ ಮಾರಾಟಗೊಂಡವು. ಇದೊಂದು ಚಾರಿತ್ರಿಕ ದಾಖಲೆಯೇ ಸರಿ. ಮತ್ತೊಬ್ಬ ಮಹಾನೀಯರ ದಾನದಿಂದ ಇದೀಗ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಕೃತಿ ಮತ್ತೊಂದು ದಾಖಲೆಗೆ ಸಿದ್ಧವಾಗುತ್ತಿದೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗ ಮುಚ್ಚಿಹೋಗುವ ಹಂತದಲ್ಲಿದ್ದಾಗ ಮರುಜೀವ ಕೊಟ್ಟು ಅನೇಕ ವಿದ್ಯಾರ್ಥಿಗಳ ಏಳಿಗೆಗೆ ಕಾರಣೀಕರ್ತರಾಗಿದ್ದಾರೆ. ಜಾನಪದ ವಿಭಾಗದಲ್ಲಿ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರೆ, ಇವರ ಮಾರ್ಗದರ್ಶನದಲ್ಲಿಯೇ ೨೨ ವಿದ್ಯಾರ್ಥಿಗಳು ಪಿಎಚ್,ಡಿ ಪದವಿ ಪಡೆದಿದ್ದಾರೆ. ಇನ್ನೂ ಅನೇಕ ವಿದ್ಯಾರ್ಥಿಗಳು ಪಿಎಚ್,ಡಿ ಪದವಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. ನನ್ನಂತಹ ಅನೇಕ ವಿದ್ಯಾಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿಗಳಿಂದ ಒಂದು ಟೀ ಯನ್ನು ಅಪೇಕ್ಷಿಸದ ಜೀವ ಅದು, ತನ್ನೂರಿನ ಮಕ್ಕಳಿಗಾಗಿ ಅವರು ಮಾಜಿ ರಾಜ್ಯಪಾಲರಾಗಿದ್ದ ದಿವಂಗತ ಬಿ.ರಾಚಯ್ಯ ಅವರ ಹೆಸರಿನಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆದು ಅಕ್ಷರದಾತರಾಗಿದ್ದಾರೆ. ಶಾಲೆಯಿಂದ ವಿದ್ಯಾರ್ಥಿಗಳಿಗೆ ಒಳಿತಾದರೆ ಸಾಕು ಎಂದು ಬಯಸಿ ಶಾಲೆಯನ್ನು ಉದ್ಯಮವಾಗಿ ನೋಡದೆ ಸೇವೆ ಎಂದು ಔದಾರ್ಯ ಮೆರೆದಿದ್ದಾರೆ. ಯಾವುದೇ ಪ್ರತಿಫಲಾಕ್ಷೆಯನ್ನು ಬಯಸದೇ ತಾನೂಮಾಡುವ ಕೆಲಸ ಅಚ್ಚುಕಟ್ಟಾಗಿದ್ದರೆ ಸಾಕು ಎಂದು ಭಾವಿಸಿ ಬದುಕಿದವರು ನಮ್ಮ ಪ್ರೊ.ಎಂ.ನಂಜಯ್ಯ ಹೊಂಗನೂರು ಗುರುಗಳು. ಅನೇಕ ವೇಳೆ ಅವರು ದಿಟ್ಟತನಕ್ಕಾಗಿ ಮತ್ತು ಮೈತ್ರಿಗಾಗಿ ಅಧಿಕಾರ ಬಿಟ್ಟಿದ್ದಷ್ಟೆ ಅಲ್ಲದೆ ತ್ಯಾಗವನ್ನು ಮಾಡಿದ್ದಾರೆನ್ನುವುದನ್ನು ಸಂಬಂಧಪಟ್ಟವರು ಸ್ಮರಿಸಲಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅವರು ಮಾಡಹೊರಟಿರುವ ಕೆಲಸಗಳು ಸಾಕಾರಗೊಳ್ಳಲಿ, ಗುರುಗಳಿಗೆ ಅಭಿನಂದನೆಗಳು.
ಲೇಖಕರು: ಕಲ್ಲಹಳ್ಳಿ ಕುಮಾರ
ಸಂಶೋಧಕರು, ಜಾನಪದ ವಿಭಾಗ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.