ಮೈಸೂರು: ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳ ಒಮ್ಮತದ ಮೇರೆಗೆ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಜನಗಣತಿ ಜಾರಿಯಾದ ಬಳಿಕ ನಂತರ ಚರ್ಚಿಸೋಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಒಳಮೀಸಲಾತಿ ಹಂಚಿಕೆಯಾಗಬೇಕು ಎಂಬ ಭೋವಿ ಸಮುದಾಯದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಒಳಮೀಸಲಾತಿ ಹಂಚಿಕೆಯಲ್ಲಿ ನಾವು ಸಾಕಷ್ಟು ಮುಂದೆ ಹೋಗಿದ್ದೇವೆ. ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯದ ಸಚಿವರು ಒಳಮೀಸಲಾತಿ ಹಂಚಿಕೆಗೆ ಸಮ್ಮತಿ ಸೂಚಿಸಿದ್ದಾರೆ ಎಂದರು.
ಸಮ ಸಮಾಜ ನಿರ್ಮಾಣದ ಮೇಲೆ ನಮ್ಮ ಸರ್ಕಾರ ನಂಬಿಕೆ ಇಟ್ಟಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸಂಪತ್ತು ಸಮಾನ ಹಂಚಿಕೆಯಾಗಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂದೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.