ಎಮ್ಮೆಲ್ಲೆ ಸಾಹೇಬ್ರು ಎಲೆಕ್ಷನ್ ಸೋತುಹೋಗಿ ಗೆದ್ದ ಅಭ್ಯರ್ಥಿಗೆ ಶುಭಾಶಯ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಾಕಿ ಮತ ಎಣಿಕೆ ಕೇಂದ್ರದಿಂದ ಹೊರಗೆ ಬಂದು ಇನೋವಾ ಕ್ರಿಸ್ಟಾ ಕಾರು ಹತ್ತಿದರು. ಅವರ ಪಕ್ಷದ ಕಾರ್ಯಕರ್ತರು ಕಾರಿನ ಹತ್ತಿರ ಜಮಾಯಿಸಿ ಕಣ್ಣೀರು ಹೊರೆಸಲು ಪ್ರಯತ್ನಿಸುತ್ತ ಸಮಾಧಾನ ಮಾಡುತ್ತಿದ್ದರು. ಅವರಿಗೆ ಗೆದ್ದ ಅಭ್ಯರ್ಥಿ ಪಕ್ಷದವರು ಬದ್ಧ ವೈರಿಗಳಾಗಿ ಕಾಣಿಸಿ ಅವರ ಸಂಭ್ರಮವನ್ನು ಜರಿಯುತ್ತ ಪರಾಜಿತ ಅಭ್ಯರ್ಥಿಗೆ ಜಯಕಾರ ಹಾಕುತ್ತ ದುಃಖ ಮರೆಮಾಚಲು , ಗೆದ್ದ ಪಕ್ಷದವರು ಖುಷಿಯನ್ನು ಬೆಂಕಿಯ ಉರಿಯಂತೆ ತೋರಿಸಿದರು. ಮತ ಎಣಿಕೆ ಕೇಂದ್ರದ ಸುತ್ತ ಪೋಲೀಸ್ ಬಿಗಿ ಬಂದೋಬಸ್ತ್ ಇದ್ದದ್ದರಿಂದ ಅಲ್ಲಿ ಸಣ್ಣಪುಟ್ಟ ತಳ್ಳಾಟ ನಡೆಯಿತೇ ಹೊರತು ಅಹಿತಕರ ಗಲಾಟೆಗಳು ನಡೆಯಲಿಲ್ಲ. ಗೆದ್ದ ಪಕ್ಷದ ಬಾವುಟಗಳು ರಾರಾಜಿಸಿದವು. ಬೇರೆ ಬಾವುಟಗಳು ಕಳೆಗುಂದಿದಂತೆ ತೋರಿತು. ಚುನಾವಣೆಗೆ ಅಕ್ಕಪಕ್ಕದ ಮನೆಯವರು, ಗೆಳೆಯರು, ಸಂಬಂಧಿಗಳು ಇವಾವು ಸೊಪ್ಪು ಹಾಕುವುದಿಲ್ಲ. ನಿಷ್ಠುರ ಆಗಬಾರದು ಎಂದು ನಯವಾಗಿ ಮಾತನಾಡಿ ಕಳಿಸಬಹುದು. ನೇರವಾದಿಗಳು ʼನನ್ನ ಸಿದ್ಧಾಂತವೇ ಬೇರೆʼ ಎಂದು ಉಗಿದಂತೆ ಹೇಳಲುಬಹುದು. ಇವೆಲ್ಲ ಮಾಮೂಲು ಅಲ್ಲವೇ? ವಿಜಯ ಪ್ರಸಾದ ಸತತವಾಗಿ ಹತ್ತು ವರ್ಷಗಳಿಂದ ಸಮಾಜವಾದಿ ಪಕ್ಷದ ರಾಮಣ್ಣನ ಜೊತೆಗೆ ಗುರುತಿಸಿಕೊಂಡಿದ್ದರೂ ರಾಮಣ್ಣನ ಸೋಲು ಅವನಿಗೆ ಬೇಕಿತ್ತು. ಬಹಳ ಸಂತಸ ಪಟ್ಟ ಕೂಡ. ಅದ್ಯಾಕೆ ಅವನು ಅಷ್ಟು ಹಿಗ್ಗಿದ್ದು? ವಿಜಯ ಪ್ರಸಾದ ಕಾಲೇಜು ಓದುವಾಗಿನಿಂದ ಸಭೆ, ಸಮಾರಂಭಗಳಲ್ಲಿ ರಾಮಣ್ಣನ ಭಾಷಣಕ್ಕೆ ಅಪಾರವಾಗಿ ಒಳಗಾಗಿದ್ದ. ರಾಮಣ್ಣ ʼಪ್ರಾಮಾಣಿಕತೆ, ನ್ಯಾಯ, ಧರ್ಮನಿರಪೇಕ್ಷ, ನಿಷ್ಠೆ ಇತ್ಯಾದಿಗಳ ಬಗ್ಗೆ ಹೇಳುತ್ತ ಒಂದು ಸಿದ್ಧಾಂತಕ್ಕೆ ತಕ್ಕುದಾಗಿ ರಾಜಕೀಯ ಮಾಡಬೇಕು. ಜನರ ಸೇವೆಯನ್ನು ಸ್ವಹಿತಾಶಕ್ತಿ ಬದಿಗಿಟ್ಟು ದೇಶದ ಕಾನೂನಿಗೆ ತಲೆಬಾಗಿ ಆಡಳಿತ ನಡೆಸಬೇಕು. ಅಂಥ ಪ್ರಜಾಪ್ರಭುತ್ವ ನಮಗೆ ಬೇಕುʼ ಎಂದು ನುಡಿಯುತ್ತಿದ್ದರೆ ಯುವಕನಾಗಿದ್ದ ವಿಜಯಪ್ರಸಾದನಿಗೆ ಮೈಯಲ್ಲಿ ವಿದ್ಯುತ್ ಪ್ರವಹಿಸಿದಂತೆ ಆಗುತ್ತಿತ್ತು.ʼ ಇತಿಹಾಸವನ್ನು ತಿಳಿದುಕೊಳ್ಳಿ ಯಾರೋ ಹೇಳಿದ್ದನ್ನು ನಂಬಬೇಡಿ.ʼ ಎಂದು ಹೇಳುತ್ತ ಒಂದಷ್ಟು ಯುವಕರನ್ನು ಓದಿಗೆ ಅಂಟಿಸಿ ಚಳುವಳಿ ದಿಕ್ಕಿಗೆ ತಿರುಗಿಸಿದ್ದು ಇದೇ ರಾಮಣ್ಣ. ಕೊನೆಗೆ ಸಮಾಜದ ವ್ಯವಸ್ಥೆಯನ್ನು ಬದಲಿಸಲು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಕಟ್ಟಿದ. ರಾಮಣ್ಣನ ಭಾಷಣ ಕೇಳಿದ್ದ ಅನೇಕ ಯುವಕರು ಅವನನ್ನೆ ನಂಬಿ ಅವನೊಟ್ಟಿಗೆ ನಿರಂತರವಾಗಿ ʼಕಾಯ ವಾಚಾ ಮನಸʼ ನಿಲ್ಲಲು ರಡಿಯಾದರು. ಅಂದಿನಿಂದ ಸಮಾಜವಾದಿ ಪಕ್ಷ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತ ಅನೇಕ ಚಳುವಳಿ, ಹೋರಾಟಗಳ ಮುಖಾಂತರ ಜನರಿಗೆ ಪರಿಚಯವಾಗುತ್ತ ಬಂದಿತು. ರಾಜ್ಯದ ಮೂಲೆ ಮೂಲೆಗೆ ತಲುಪಬೇಕೆಂದು ರಾಮಣ್ಣ ಜಿಲ್ಲೆಗಳಲ್ಲಿ ಸಂಚರಿಸಿದ. ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪುಗಳನ್ನು ಟೀಕಿಸಿದ. ಅದರ ಬಗ್ಗೆ ಪತ್ರಿಕೆಗಳಲ್ಲಿ ಬರೆದ. ಜನರ ನಡುವೆ ಬಂದು ಚಳುವಳಿಗೆ ಕೂತ. ಬಿಸಿಲಲ್ಲಿ ಬೀದಿಗಿಳಿದು ಹೋರಾಟ ನಡೆಸಿದ. ಒಂದು ಹೆಜ್ಜೆ ಸಾವಿರ ಆದಂತೆ ಹೋರಾಟದ ಕಿಚ್ಚು ಈಗ ಕರ್ನಾಟಕದ ಪೂರ್ತಿ ರುದ್ರಭಯಂಕರವಾಗಿ ಜ್ವಾಲೆಯಾಗಿತ್ತು. ಚೊಚ್ಚಲ ಚುನಾವಣೆಯಲ್ಲಿ ರಾಮಣ್ಣ ಠೇವಣಿ ಉಳಿಸಿಕೊಂಡು ಜನರ ವಿಶ್ವಾಸಗಳಿಸುವಲ್ಲಿ ಮೊದಲ ಬಾರಿಗೆ ಯಶಶ್ವಿಯಾದ. ನಂತರದ ದಿನಗಳಲ್ಲಿ ವಿಜಯ ಪ್ರಸಾದ ರಾಮಣ್ಣನ ಅನುಯಾಯಿ ಆಗಿ ಪಕ್ಷ ಸೇರಿಕೊಂಡಿದ್ದ.
***
ಸಿದ್ರಾಮಣ್ಣ ಹಾಲಿ ಶಾಸಕ. ಅವನು ಕ್ಷೇತ್ರದ ಜನರ ಕೈಗೆ ಸಿಕ್ಕಾಗ ಬಹಳ ಅಚ್ಚುಕಟ್ಟಾಗಿ ಮಾತನಾಡಿ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದ. ಸದ್ಯಕ್ಕೆ ಊರಿನ ಸಮೀಪದ ಗದ್ದೆಮಾಳದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ನಿಲ್ಲಿಸಬೇಕೆಂದು ಗ್ರಾ,ಮಸ್ಥರು ಮನವಿ ನೀಡಿದ್ದರು. ಜನರಿಗೆ ತಿಳುವಳಿಕೆ ನೀಡಿ ಅದನ್ನು ಮನವಿ ಕೊಡುವ ಮಟ್ಟಕ್ಕೆ ಎಳೆತಂದದ್ದು ವಿಜಯಪ್ರಸಾದನೇ. ಅದನ್ನು ರಾಮಣ್ಣ ಬೆಂಬಲಿಸಿ ಮಾಡಿಸಿದ್ದ. ಊರುಕೇರಿ ಒಳಿತಿಗೆ ರಾಮಣ್ಣ ಮನ್ನಣೆ ನೀಡುತ್ತಿದ್ದ. ಅದರ ವಿರುದ್ಧವಾಗಿ ರಂಗುದಾಸ ಕಾರ್ಯತಂತ್ರಗಳನ್ನು ಮಾಡಿದ. ಅದು ಫಲ ನೀಡಲಿಲ್ಲ. ಅವನು ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿದ್ದು ರಾಮಣ್ಣನಿಗು ಅವನ ಹಿಂಬಾಲಕ ವಿಜಯಪ್ರಸಾದನಿಗು ಶಾಶ್ವತ ಶತ್ರುವಾಗಿದ್ದನು. ಅವರು ಯಾವುದೇ ಒಳ್ಳೆಯ ಕೆಲಸಮಾಡಿದರು ಅದನ್ನು ವಿರೋಧ ಮಾಡುವುದಕ್ಕೆಂದೆ ತಮ್ಮ ಪಕ್ಷದ ಜೊತೆಗೆ ತಾನಿರುವುದೆಂದು ರಂಗುದಾಸ ವರ್ತಿಸುತ್ತಿದ್ದ.
ಕರಿಕಲ್ಲು ಕ್ವಾರೆಯ ಮಾಲೀಕ ರಾಜನ್ ಬೆಂಗಳೂರಿನವನು. ಸರ್ಕಾರದ ಸಚಿವನ ಸಂಬಂಧಿ. ಎಮ್ಮೆಲ್ಲೆ ಆದನಂತರ ಸಿದ್ರಾಮಣ್ಣ ಕೂಡ ಕ್ವಾರಿಯ ಸಹಭಾಗಿತ್ವ ಪಡೆದು ನಿಂತು ಹೋಗಿದ್ದ ಇನ್ನೊಂದು ಕ್ವಾರೆಯಲ್ಲಿ ಗಣಿಕಾರಿಕೆ ಶುರುಮಾಡಿಸಿದ. ಇದರಿಂದ ಕೆರೆಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಿತ್ತು. ದನಕರು ಮೇಯಲು, ಗದ್ದೆಮಾಳಕ್ಕೆ ಹೋಗಲು ದಾರಿಯೇ ಮುಚ್ಚಿಹೋಗುವ ಅಪಾಯ ಎದುರಾಯಿತು. ಕ್ವಾರಿಯನ್ನು ನಿಲ್ಲಿಸಬೇಕೆಂದು ತೀರ್ಮಾಮಿಸಿದ್ದ ಜನರಿಗೆ ಇನ್ನೊಂದು ಕ್ವಾರಿ ಪ್ರಾರಂಭವಾಗಿದ್ದು ಬಹಳ ನೋವಾಯಿತು. ಇದೆಲ್ಲವನ್ನು ಸುಳ್ಳೆಂದು ಸಾಧಿಸಲು ರಂಗುದಾಸ ಹೇಸಿಗೆ ತಿನ್ನುವ ಅನೇಕ ಕೆಲಸಗಳನ್ನು ವಿರ್ವಹಿಸಿದ. ವಿಜಯಪ್ರಸಾದನ ಹೋರಾಟಕ್ಕೆ ಸ್ವಲ್ಪ ಹಿನ್ನಡೆಯಾಯಿತು. ರಾಜಕೀಯ ಅಧಿಕಾರದ ಕಪಿಮುಷ್ಠಿಗೆ ಸಿಕ್ಕಿದ್ದರಿಂದ ಕ್ವಾರಿಯಲ್ಲಿ ಕಳ್ಳತನಕದ ಆಪಾದನೆಗೆ ಸಿಕ್ಕಿಸಿ ಜೈಲಿಗೆ ಹಾಕಿಸಿದರು. ಹೆದರಿಸುವ ಮೊದಲ ಪ್ರಯತ್ನ ವಿಜಯಪ್ರಸಾದನ ಮೇಲೆ ನಡೆಯಿತು. ರಂಗುದಾಸ ʼಅವನನ್ನು ಜೈಲಿಗೆ ಕಳಿಸಿದ್ದು ನಾನೆʼ ಎಂದು ಹೇಳಿಕೊಳ್ಳುತ್ತ ಊರಿನ ಜನರ ಬಳಿ ಎಲ್ಲಿಲ್ಲದ ಬುರುಡೆ ಬಿಡುತ್ತ ತನ್ನ ಶೌರ್ಯವನ್ನು ಹೊಗಳಿಕೊಳ್ಳುತ್ತಿದ್ದ. ಜನರು ಸ್ವಲ್ಪ ಹಿಂಜರಿದರು. ರಾಮಣ್ಣ ವಿಜಯಪ್ರಸಾದನ ಜೊತೆಗಿದ್ದು ಅವನನ್ನು ಜೈಲಿನಿಂದ ಬಿಡಿಸಿದ. ಯಾವಾಗಲೂ ತಾನು ನೊಂದವರ ಪರ ಎಂಬುದನ್ನು ತೋರಿಸಿದ.
ಮಹಿಳಾ ಸಂಘದ ಮುಂದಾಳು ಗಿರಿಜಮ್ಮ ವಿಜಯಪ್ರಸಾದನ ಅಕ್ಕ. ಊರಿನ ಹೆಂಗಸರ ವಿಶ್ವಾಸ ಗಳಿಸಿ ಸಹಾಯಧನ ಪಡೆದು ವ್ಯಾಪಾರ ಶುರುಮಾಡಿದ್ದಳು. ಅವಳ ಬಳಿ ಮೂವತ್ತು ಹೆಂಗಸರು ಕೆಲಸ ಮಾಡುತ್ತಿದ್ದರು. ಅದಕ್ಕೆ ನೆರವಾಗಿ ಸರ್ಕಾರದ ಸವಲತ್ತು ಸಿಗುವಂತೆ ರಾಮಣ್ಣ ಸಹಾಯ ಮಾಡಿದ್ದ. ಸಮಾಜಮುಖಿ ಕೆಲಸಕ್ಕೆ ಸದಾ ಬೆಂಬಲ ನೀಡುತ್ತಿದ್ದ ರಾಮಣ್ಣನನ್ನು ಕಂಡರೆ ಹೆಂಗಸರಿಗೆ ಅಪಾರ ಗೌರವ, ಅಭಿಮಾನ ಹೆಚ್ಚಾಗಿತ್ತು. ಊರಿನಲ್ಲಿ ಕ್ವಾರಿಯಿಂದ ಆಗುತ್ತಿದ್ದ ಅನಾಹುತಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ಆರಂಭಿಸಿ ಅದು ಪ್ರಸರಣ ಆಯಿತು. ಅದೇ ಸಂಧರ್ಭದಲ್ಲಿ ಮೇಯಲು ಹೋಗಿದ್ದ ಎರಡು ದನ ಕಲ್ಲು ಸಿಡಿಸಲು ಇಟ್ಟಿದ್ದ ಸಿಡಿಮದ್ದಿಗೆ ಬಾಯಾಕಿ ಗಾಯ ಮಾಡಿಕೊಂಡಿದ್ದವು. ಒಂದು ಕರು ಕ್ವಾರಿಯ ಹಳ್ಳಕ್ಕೆ ಬಿದ್ದು ಸತ್ತುಹೋಗಿತ್ತು. ಗದ್ದೆಬಯಲೆಲ್ಲ ಯಾವಾಗಲು ಅಪಾರ ಸದ್ದಿನಿಂದ ಕೂಡಿರುತ್ತಿದ್ದರಿಂದ ಗದ್ದೆ ಕೆಲಸ ನಿರ್ವಹಿಸಲು ತೊಂದರೆ ಆಗುತ್ತಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ ಮಹಿಳಾ ಸಂಘದವರು ಮತ್ತು ಊರಿನ ಅನೇಕ ಹೆಂಗಸರು, ಯುವಕರು ಸೇರಿ ವಿಜಯ ಪ್ರಸಾದ, ರಾಮಣ್ಣ ಕೂಡಿ ತಹಸಿಲ್ದಾರರಿಗೆ ಮನವಿ ಕೊಟ್ಟರು. ಬೇಡಿಕೆ ಪತ್ರ ಪಡೆದ ಅಧಿಕಾರಿ ʼಅದಕ್ಕೆ ಪರವಾನಗಿ ಇದೆ, ನಾವು ಏನು ಮಾಡಲು ಆಗದು. ಜಿಲ್ಲಾಧಿಕಾರಿ ನೋಡಿʼ ಎಂದು ಬಚಾವಾದರು. ರಾಮಣ್ಣ ಸಹ ಕಾನೂನು ಮಾತನಾಡಿ ʼಸರಿ ಬಿಡಿ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೀವಿʼ ಎಂದು ಅಲ್ಲಿಂದ ಚದುರಿದರು. ಸಿದ್ರಾಮಣ್ಣನ ಪಿಎ ಗಣೇಶ ಒಳಗೆ ಕಾರ್ಯ ಮುಗಿಸಿದ್ದ.
***
ಎಲೆಕ್ಷನ್ನು ಅನೌನ್ಸ್ ಆಗಿ ಪ್ರಕ್ರಿಕೆಗಳು ಆರಂಭವಾಗಿದ್ದವು. ರಾಮಣ್ಣ ಸತತವಾಗಿ ಮೂರು ಚುನಾವಣೆಗಳಲ್ಲಿ ಸೋತು ಕ್ಷೇತ್ರದ ಜನರಿಗೆ ಪರಿಚಯ ಆಗಿ ಚುನಾವಣೆಯಿಂದ ಚುನಾವಣೆಗೆ ಮತಗಳನ್ನು ಹೆಚ್ಚಿಸಕೊಂಡೇ ಬಂದಿದ್ದ. ಕ್ರಮೇಣವಾಗಿ ಇಪ್ಪತ್ತು, ಇಪ್ಪತ್ತೈದು, ಮೂವತ್ತು ಸಾವಿರ ಮತಗಳಿಕೆ ಪಡೆದಿದ್ದ. ಊರಿನಲ್ಲಿ ಒಬ್ಬನಾದರು ಲೀಡರ್ ಎನ್ನುವಂತ ಕಾರ್ಯಕರ್ತನನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಂದಿದ್ದ. ಯುವಕರು, ಸರ್ಕಾರಿ ನೌಕರರು, ಮಹಿಳೆಯರು, ವಿದ್ಯಾರ್ಥಿಗಳು ಸಹ ರಾಮಣ್ಣ ಎಂದರೆ ಸ್ವಯಂ ಪ್ರೇರಿತರಾಗಿ ಅವನನ್ನು ಮಾತನಾಡಿಸಲು, ಕಾರ್ಯಕ್ರಮಗಳಿಗೆ ಮುಂದಾಗುತ್ತಿದ್ದರು. ಧನ ಸಹಾಯವನ್ನು ಮಾಡುವಷ್ಟು ವಿಶ್ವಾಸವನ್ನು ರಾಮಣ್ಣ ಉಳಿಸಿಕೊಂಡಿದ್ದ. ರಾಮಣ್ಣನ ಅಲೆಯೇ ಉಂಟಾಗುವಷ್ಟು ಬದಲಾವಣೆ ಆಗಿತ್ತು.
ಪ್ರಚಾರ ಆರಂಭವಾಗಿ ವಿವಿಧ ಪಕ್ಷದ ಅಭ್ಯರ್ಥಿಗಳು ಮತ್ತವರ ಹಿಂಬಾಲಕರು ಪಕ್ಷದ ಹಿರಿಯರು ಇತರರು ಪ್ರಣಾಳಿಕೆ ಹಿಡಿದು ಮತಯಾಚನೆ ಮಾಡುತ್ತಿದ್ದರು. ಪ್ರಚಾರದಲ್ಲಿ ಇತರ ಪಕ್ಷದ ತಪ್ಪುಗಳನ್ನು, ಭ್ರಷ್ಟಾಚಾರ, ಇತರ ಅಸಹ್ಯಗಳನ್ನು ಹೇಳುತ್ತ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಇದಕ್ಕೆ ವಿರುದ್ಧ ಇನ್ನೋರ್ವ ಅಭ್ಯರ್ಥಿಯ ಪ್ರಚಾರ. ವ್ಯತಿರಿಕ್ತ ನುಡಿಗಳು, ಆರೋಪ ಇಷ್ಟೆ ನಡೆಯುತ್ತ ಅಭಿವೃದ್ಧಿ ಮಾತುಗಳು ಮುಚ್ಚಲ್ಪಟ್ಟಿದ್ದವು. ಅದಾದ ನಂತರ ಪ್ರಚಾರಕ್ಕೆ ಬಂದಿದ್ದವರಿಗೆ ಹಣ, ಹೆಂಡ, ಇತರ ಆಮಿಷಗಳು ತಲುಪಿದವು. ಅವರೆಲ್ಲ ಬಾವುಟ, ಟೋಪಿ, ಪ್ರಣಾಳಿಕೆ, ಬ್ಯಾನರ್ ಇತ್ಯಾದಿಗಳನ್ನು ಬಿಸಾಕಿ ಎತ್ತಗೋ ನಡೆದರು. ಇಂತದು ಎಲೆಕ್ಷನ್ ಮುಗಿಯೋವರೆಗೆ ಅನೇಕ ಕಡೆಗಳಲ್ಲಿ ನಡೆಯುತ್ತದೆ. ಇಂಥದನ್ನು ಯಾರಾದರೂ ಖಂಡಿಸಿದರೆ ಅವನ ಮೇಲೆ ಎಲ್ಲಿಲ್ಲದ ಆಕ್ರಮಣಗಳು ವಿವಿಧ ರೂಪಗಳಲ್ಲಿ ನಡೆದು ಅಲ್ಲಿಗೆ ಸಮಾಪ್ತಿ ಆಗುತ್ತಿತ್ತು. ಪ್ರತಿಭಟನೆಯ ಧ್ವನಿ ಹೆಚ್ಚಿಗೆ ಕೇಳಲು ಯಾರು ಬಿಡುವುದಿಲ್ಲ. ಇದೆಲ್ಲದರ ನಡುವೆಯು ಪ್ರಾಮಾಣಿಕ ನಡೆ ಇದೆ. ಅದು ಕೂಡ ಇಷ್ಟೆಲ್ಲ ಅಪವಿತ್ರ ವ್ಯವಸ್ಥೆ ಮಧ್ಯೆ ಬಹಳ ಕಷ್ಟವಾಗಿ ಉಸಿರಾಡುತ್ತಿದೆ. ಆದರೆ ಸತ್ತಿಲ್ಲ.

ಸಿದ್ರಾಮಣ್ಣನ ವಿರುದ್ಧ ಪ್ರತಿಭಟನೆ ನಡೆಸಿದ್ದ ಜನರೇ ಇಂದು ಅವನೊಟ್ಟಿಗೆ ಸೇರಿದ್ದರು. ಮೊದಲೆಲ್ಲ ಅವನ ಅನ್ಯಾಯ ಕಾಣಿಸಿತು. ಈಗ ಜಾತಿಯಷ್ಟೆ ಕಾಣಿಸುತ್ತ ಒಂದು ಬಗೆಯ ಅಸಹ್ಯವಾಗಿತ್ತು. ಸ್ವಜಾತಿಯ ಒಂದು ಗುಂಪು ಅವನ ವಿರುದ್ಧವಾಗಿ ಕೆಲಸ ಮಾಡುತ್ತಿತ್ತು. ಅದಕ್ಕೆ ತಕ್ಕಂತೆ ಬೇರೆ ಜಾತಿಯ ಗುಂಪು ಇವನ ಕೆಲಸಕ್ಕೆ ಸದಾ ಓಡಾಡುತ್ತಿತ್ತು. ಇವೆಲ್ಲ ವಿಚಿತ್ರಗಳಿಗೆ ಸ್ಪಷ್ಟ ಕಾರಣ ಗುರುತಿಸುವುದು ಎಂದಿಗೂ ಕಷ್ಟವೇ.
ವಿಜಯ ಪ್ರಸಾದ ಜಿಲ್ಲಾ ಅಧ್ಯಕ್ಷ ಆಗಿ ಪಕ್ಷ ಸಂಘಟನೆಗೆ ಅಪಾರ ಕೊಡುಗೆ ನೀಡಿ ಎಲ್ಲರ ಬಾಯಿಯಲ್ಲು ತನ್ನ ಹೆಸರು ಕುಣಿಯುವಂತೆ ಮಾಡಿದ್ದ. ಸಂಘಟನೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜವಾದಿ ಪಕ್ಷದ ರೂಪುರೇಷೆಗಳನ್ನು ಜನರ ಮುಂದಿಟ್ಟಿದ್ದ. ರಾಮಣ್ಣ ಸಹ ಬಹಳ ಖುಷಿಯಾಗಿ ಅವನ ಕಾರ್ಯವೈಖರಿ ಮೆಚ್ಚಿಕೊಂಡಿದ್ದನು.
ಸಿದ್ರಾಮಣ್ಣ ಅತ್ಯಧಿಕ ಜನಸಂಖ್ಯೆಯೊಂದಿಗೆ ಜಿಲ್ಲಾಕಛೇರಿಗೆ ತಲುಪಿ ನಾಮಪತ್ರ ಸಲ್ಲಿಸಿ ಪತ್ರಿಕೆ ವರದಿಗಾರರಿಗೆ ವಿಜಯದ ಸಂಕೇತ ತೋರಿಸಿ ಹಲ್ಲುಬಿಟ್ಟ. ಜೊತೆಗಿರುವವರು ಸಹ ಅದೇತರ ನಕ್ಕರು. ರಂಗುದಾಸ ಸಿದ್ರಾಮಣ್ಣ ಪಕ್ಕದಲ್ಲಿ ಅವನ ಕೈಹಿಡಿದುಕೊಂಡು ನಿಂತಿದ್ದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ʼನಿಮ್ಮ ಮತ ಅಭಿವೃದ್ಧಿಗೆʼ ಎಂಬ ಟ್ಯಾಗ್ಲೈನ್ ಹಾಕಿದ್ದನು. ಕಡೆ ಹಟ್ಟಿ ನಿಂಗಮ್ಮಳಿಗೆ ವೃದ್ಧಾಪ್ಯ ವೇತನ ಬರಿಸುವಂತೆ ನಂಬಿಸಿ ಮುದುಕಿಯ ಹತ್ತಿರ ಮೂರು ಸಾವಿರ ದುಡ್ಡು ಪೀಕಿದ್ದು ಅವನ ಸೇವೆಗೆ ಸಾಕ್ಷಿ. ಅಲ್ಲಿ ಇಲ್ಲಿ ನಿಂತಿದ್ದ ಕೆಲವರು ಅವನ ಕಿತಾಪತಿ, ಹಣಕ್ಕಾಗಿ ಏನಾದರು ಮಾಡುತ್ತಿದ್ದ ನೀತಿಹೀನ ಕೃತ್ಯಗಳನ್ನು ನೆನಸಿಕೊಂಡರು. ಸಿದ್ರಾಮಣ್ಣ ಕೂಡ ಸಮಾಜಮುಖಿ ಕೆಲಸಗಳನ್ನು ನಿಗಾವಹಿಸಿ ಮಾಡುತ್ತಿರಲಿಲ್ಲ. ಯೋಜನೆಗಳನ್ನು ಅನುದಾನ ಬಳಸುವುದಕ್ಕಾಗಿ ಕಳಪೆ ಗುಣಮಟ್ಟದಲ್ಲಿ ನಿರ್ವಹಿಸಿ ಅಧಿಕಾರಾವಧಿ ಮುಗಿಯುವ ಕೊನೆಯ ವರ್ಷಕ್ಕೆ. ಉಧ್ಘಾಟನೆ ಮಾಡುತ್ತಿದ್ದರು. ಚುನಾವಣೆಗೆ ಅದನ್ನೆ ಹೇಳಿ ಮತ ಕೇಳುವುದು. ಭೂಮಿ ತಿರುಗುವಂತೆ ಇಂಥವೇ ಕೆಲಸಗಳು ನಡೆಯುತ್ತಿವೆ. ಹೇಳುವವರು ಯಾರು ಇಲ್ಲ. ಕೇಳುವವರು ಯಾರು ಇಲ್ಲ.
ಮತದಾನದ ದಿನ ಬಂದೇ ಬಿಟ್ಟಿತು. ವಿಜಯ ಪ್ರಸಾದ ಮತಗಟ್ಟೆ ಬಳಿ ಕಾರ್ಯಕರ್ತರ ಜೊತೆಗೆ ನಿಂತಿದ್ದ. ಬರುವ ಜನಗಳಿಗೆ ನಗುವಿನಿಂದ ಮಾತನಾಡಿಸಿ ಜ್ಞಾಪಿಸುತ್ತಿದ್ದ. ಇನ್ನೊಂದು ಕಡೆ ರಂಗುದಾಸ ಕೂಡ ನಿಂತಿದ್ದ. ಜನರಿಗೆ ಓಟು ಹಾಕುವುದು ಹೊಸದೇನಲ್ಲ. ಯಾರು ಕರೆದರು ಮಾತನಾಡುತ್ತ ತಲೆಯಾಡಿಸುತ್ತ ಮತಗಟ್ಟೆಯ ಬಳಿಗೆ ಹೋಗುತ್ತಿದ್ದರು. ಪೋಲಿಸ್ ಪೇದೆಗಳು ಸುರಕ್ಷತೆಗೆ ಆದ್ಯತೆ ಕೊಟ್ಟು ಹದ್ದಿನ ಕಣ್ಣಾಗಿದ್ದರು. ಅದ್ಯಾವ ಮಾಯದಲ್ಲಿ ರಂಗುದಾಸ ವಿಜಯ ಪ್ರಸಾದನ ಬಳಿ ಬಂದನೋ? ಮಾತುಗಳು ಆರಂಭವಾಗಿದ್ದವು. ನೋಡುನೋಡುತ್ತಿದ್ದಂತೆ ಇಬ್ಬರು ಕೈಕೈ ಮಿಲಾಯಿಸಿ ಹೊಡೆದಾಟ ಆರಂಭವಾಗಿ ಅದು ಕಾರ್ಯಕರ್ತರಿಗು ಪಸರಿಸಿ ಗಲಾಟೆ ಜೋರಾಯಿತು. ಪೋಲಿಸ್ ಸಿಬ್ಬಂದಿ ತಕ್ಷಣ ಅಲ್ಲಿಗೆ ಓಡಿ ಲಾಠಿಯನ್ನು ಕುಣಿಸಿದರು. ಪೋಲಿಸ್ ಜೀಪು ಬಂದಿತು. ರಂಗುದಾಸ, ವಿಜಪ್ರಸಾದ ಇಬ್ಬರನ್ನು ಜೀಪಿಗೆ ಹತ್ತಿಸಿದ ಸಮಯಕ್ಕೆ ಪೋಲಿಸ್ಗೆ ಕರೆಬಂತು. ಆಮೇಲೆ ಇಬ್ಬರನ್ನು ಇಳಿಸಿದರಾದರು ಪೋಲೀಸ್ ಮಾತ್ರ ವಿಜಪ್ರಸಾದನನ್ನು ತಪ್ಪಿತಸ್ಥನಂತೆ ಬೈದ. ಅವನನ್ನೆ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದುದು ಅಲ್ಲಿದ್ದ ಜನಕ್ಕೆಲ್ಲ ಸ್ಪಷ್ಟವಾಗಿ ಗೊತ್ತಾಗಿತ್ತು. ರಾಮಣ್ಣ ಇದೇ ವಿಷಯಕ್ಕೆ ಎಸ್ಪಿ ಯವರಿಗೆ ಕರೆಮಾಡಿದ್ದ. ಅಷ್ಟೊತ್ತಿಗೆ ಎಲ್ಲವೂ ತಿಳಿಯಾಗಿತ್ತು.
ಸಂಜೆಗೆ ಎಲ್ಲಾ ಮತಗಟ್ಟೆಗಳಿಂದಲೂ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಭದ್ರವಾಗಿ ಸ್ಟ್ರಾಂಗ್ರೂಮಿಗೆ ಸಾಗಿಸುವ ಕೆಲಸ ಪ್ರಾರಂಭಿಸಿದರು. ಪೋಲಿಸ್ ರಕ್ಷಣೆಯೊಟ್ಟಿಗೆ ಯಾವುದೇ ವಿಘ್ನವಿಲ್ಲದೆ ನೆರವೇರಿತು. ಅಲ್ಲಿಗೆ ಸೂರ್ಯನು ಮುಳುಗಿದ. ಚುನಾವಣೆ ಪ್ರಯುಕ್ತ ಎಲ್ಲರೆದೆಯಲ್ಲು ಉರಿಯುತ್ತಿದ್ದ ಉರಿ ಆರಿ ಕೆಂಡವಷ್ಟೆ ಉಳಿದು ಅದು ಎಣಿಕೆಯತ್ತ ಹೊಗೆ ಸೂಸುತ್ತಿತ್ತು.
ಜನರ ನುಡಿಗಳಲ್ಲಿ ರಾಮಣ್ಣ ಬರುತ್ತಿದ್ದ. ಸಿದ್ರಾಮಣ್ಣನು ಬರುತ್ತಿದ್ದ. ಕೆಲವರು ʼಒಬ್ಬನೇ ಆಗ್ಬಾರದು ಸುಮ್ನಿರಿʼ ಎಂದರೆ ಇನ್ನೊಂದಷ್ಟು ಮಂದಿ ʼರಾಮಣ್ಣನಿಗು ಒಂದ್ ಅವಕಾಶ ಕೊಡಮು ಬುಡಿʼ ಎನ್ನುತ್ತಿದ್ದರು. ಇವೆಲ್ಲವನ್ನು ಟೀವಿ, ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ನೋಡುತ್ತಿದ್ದ ಅದೇ ಜನರಿಗು ಕುತೂಹಲ ಇತ್ತು. ಒಂದೊಂದು ಭಾಗದಲ್ಲಿ ಒಂದೊಂದು ಮಾತು ಕೇಳಿಬರುತ್ತಿತ್ತು. ಸತ್ಯವಾದ ಫಲಿತಾಂಶ ತಿಳಿಯುವ ದಿನಕ್ಕೆ ಎಲ್ಲರೂ ಕಾದಿದ್ದರು.
ಎಣಿಕೆ ಪ್ರಾರಂಭವಾಗಿ ರಾಜಕೀಯ ಆಸಕ್ತರು, ಅಭಿಮಾನಿಗಳು ಜಿಲ್ಲಾ ಕೇಂದ್ರಕ್ಕೆ ತೆರಳಿದ್ದರೆ ಮಾಮೂಲು ಜನ ಮೊಬೈಲ್, ಟೀವಿಗಳಿಗೆ ಲಕ್ಷ್ಯ ನೀಡಿದ್ದರು. ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳ ಪಲಿತಾಂಶದ ನೇರಪ್ರಸಾರ ಎಲ್ಲಾ ದೃಶ್ಯ ಮಾಧ್ಯಮಗಳಲ್ಲು ನಡೆಯುತ್ತ ಹಿನ್ನಡೆ, ಮುನ್ನಡೆ , ಗೆಲುವು, ಸೋಲು, ಮತಗಳ ಅಂತರ ಇತ್ಯಾದಿ ವಿವರಗಳು ರಾರಾಜಿಸುತ್ತಿದ್ದವು.

ಸಿದ್ರಾಮಣ್ಣ ಅಂಚೆ ಮತಗಳಲ್ಲಿ ಭಾರಿ ಹಿನ್ನಡೆ ಪಡೆದು ಕೊಂಡು ಐದನೇ ಸುತ್ತಿನವರೆಗೂ ಮುಂದೆ ಬರಲಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಪ್ರಾಣಸಂಕಟದ ನೋವಲ್ಲಿ ಇದ್ದರು. ಕೆಲವರಿಗೆ ವಿಪರೀತ ಕಾತರವಿತ್ತು. ಜೂಜುಗಳು ಸಹ ಒಳಗೊಳಗೆ ನಡೆದವು. ಕೆಲವು ಕಡೆ ಗಲಾಟೆ ಆಗುವ ಮಟ್ಟಕ್ಕೂ ತಲುಪಿತ್ತು. ರಾಮಣ್ಣ ʼಎಲ್ಲರೂ ಶಾಂತವಾಗಿರಿ, ಸೋಲು ಗೆಲುವು ಸಹಜʼ ಎಂದು ಹೇಳುತ್ತಲೇ ಇದ್ದ. ಅವನಿಗೆ ತಾನು ಗೆಲ್ಲುವ ವಿಶ್ವಾಸ ಇತ್ತು. ಹನ್ನೆರಡು ಸುತ್ತಿನಲ್ಲಿ ಹತ್ತು ಸಾವಿರ ಮತಗಳ ಅಂತರದಿಂದ ರಾಮಣ್ಣ ಮುಂದಿದ್ದ. ಎರಡು ಸುತ್ತು ಭಾಕಿ ಇದ್ದುದರಿಂದ ಆಗಲೇ ರಾಮಣ್ಣ ಗೆದ್ದನೆಂದು ಎಲ್ಲರೂ ಸಂಭ್ರಮ ಪಟ್ಟರು. ಅದು ಪ್ರಸರಣ ಆಗಿ ʼಅಭಿನಂದನೆಗಳ ಮಹಾಪೂರ ರಾಮಣ್ಣನಿಗೆ ಪರೋಕ್ಷವಾಗಿ ಸಹ ವ್ಯಕ್ತವಾಯಿತು. ಸಿದ್ರಾಮಣ್ಣ ಮತಎಣಿಕೆ ಕೇಂದ್ರದಿಂದ ಹೊರಕ್ಕೆ ಬಂದ. ಅವನೊಟ್ಟಿಗೆ ಹಲವಾರು ಜನರು ಆಚೆಗೆ ಬಂದರು. ರಂಗುದಾಸನ ಮುಖ ಎರೆಮಣ್ಣಿನಂತೆ ಭಾರಿ ಕಪ್ಪಾಗಿತ್ತು. ಗೆದ್ದ ಅಭ್ಯರ್ಥಿಯ ಕಾರ್ಯಕರ್ತರ ಸಂಭ್ರಮ ಎಲ್ಲರಿಗೂ ಕಿರಿಕಿರಿ ಎನಿಸಿ ಅಲ್ಲಿಂದ ಕಾಲ್ಕಿತ್ತರು. ರಾಮಣ್ಣನ ಕೊರಳಿಗೆ ಹೂವಿನ ಹಾರಗಳು ಹೆಚ್ಚಾದವು. ಗೆದ್ದ ಖುಷಿಯಲ್ಲಿ ಹಾರಗಳ ತೂಕ ಅವನಿಗೆ ಹಗುರವಾಗಿತ್ತು. ಮೆರವಣಿಗೆ ಸಹ ಹೊರಟ. ಅವನೊಟ್ಟಿಗೆ ಪೋಲಿಸ್ ಜೀಪು ಮತ್ತು ಎಸ್ಪಿ ಕೂಡ ಇದ್ದರು.
ಹೆಚ್ಚಿನ ಜನರ ಆಸೆ ರಾಮಣ್ಣ ಗೆಲುವು ಪಡೆಯಬೇಕೆಂಬುದಾಗಿತ್ತು. ಅವರವರ ಮಾತುಗಳಲ್ಲೆ ಅದು ವ್ಯಕ್ತವಾಗುತ್ತ ʼಅವನನ್ನು ನೋಡವು ಬುಡಿʼ ಎಂಬ ವಾಕ್ಯ ಇಡೀ ಕ್ಷೇತ್ರದ ವ್ಯಾಪ್ತಿಗೆ ಮುಟ್ಟಿತು. ವಿಜಯಪ್ರಸಾದನಿಗೆ ತಾನೆ ಗೆದ್ದಷ್ಟು ಆನಂದವಾಯಿತು. ಜನರ ಸಹಕಾರ ನಿರೀಕ್ಷೆ ಮಟ್ಟಕ್ಕೂ ಮೀರಿ ಸಿಕ್ಕಿದ್ದು ಅವನಿಗೆ ಆಶ್ಚರ್ಯ ಎನಿಸಿತು. ಜನಸೇವೆಗೆ ಮುಡಿಪಾಗಿದ್ದ ರಾಮಣ್ಣನಿಗೆ ಇದು ದೇವರೇ ಕೊಟ್ಟ ವರವೆಂದು ತಿಳಿದ. ತನ್ನ ಕಾರ್ಯಯೋಜನೆಗಳನ್ನು ರೂಪಿಸತೊಡಗಿದ. ಮತ್ತೆ ಭೇಟಿಯಾಗುತ್ತೆನೆಂದು ತಿಳಿಸಿ ರಾಮಣ್ಣ ಬೆಂಗಳೂರಿಗೆ ಪಯಣ ಬೆಳಿಸಿದ್ದ.
ಸರ್ಕಾರವು ರಚನೆಯಾಗಿ ರಾಮಣ್ಣನಿಗೆ ಒಂದು ಅಭಿವೃದಿ ನಿಗಮದ ಅಧ್ಯಕ್ಷನು ಆದ. ಅವನ ಕ್ಷೇತ್ರದ ಜನಕ್ಕೆ ಇದು ಅಪಾರ ಗೌರವದ ಜೊತೆಗೆ ಖುಷಿಯು ಆಗಿ ಹಿಗ್ಗಿ ಹಿಪ್ಪೆಯಾದರು. ವಿಜಯಪ್ರಸಾದನಿಗೆ ಕರೆಮಾಡಿ ʼನಾನು ಆಡಿದ ಮಾತಿನಂತೆ ಮಾಡುತ್ತಿನಿ. ನೀನು ನನ್ನ ಜೊತೆಗಿರುʼ ಎಂದೇಳಿ ರಾಮಣ್ಣ ಜನತೆಗೆ ಕೃತಜ್ಞತೆ ಸಲ್ಲಿಸಲು ಬರುವವನಿದ್ದ. ವಿಜಯಪ್ರಸಾದ ಅಮೋಘಗಳಿಗೆ ಎಂದು ಹಾಲಿ ಎಂಎಲ್ಎ ಬರುವಿಕೆಗೆ ಕೊಳ್ಳೆಗಾಲದಲ್ಲಿ ಕಾರ್ಯಕರ್ತರೊಟ್ಟಿಗೆ ಕಾದು ಹೂಹಾರ, ಹೂಗುಚ್ಛಗಳ ಮಿನಿ ದಾಸ್ತಾನು ಮಾಡಿಕೊಂಡು ಕಾಯುತ್ತಿದ್ದ. ಬಿಸಿಲು ನೆತ್ತಿಗೇರಿತ್ತು. ಇನೋವಾ ಕ್ರಿಸ್ಟಾ ಕಾರಿನಲ್ಲಿ ರಾಮಣ್ಣ ಬಂದಿಳಿದಾಗ ಅಲ್ಲಿ ಸೇರಿದ್ದವರ ಖುಷಿ ಡಬ್ಬಲ್ ಆಗಿ ಕೇಕೆ, ಶಿಳ್ಳೆ, ಹರ್ಷೋದ್ಘಾರದಿಂದ ರಾಮಣ್ಣನ ಬಳಿ ಧಾವಿಸಿದರು. ಹೂವಿನ ಸುರಿಮಳೆಯೇ ಅಲ್ಲಿ ನಡೆಯಿತು. ಇನೋವಾ ಕ್ರಿಸ್ಟಾ ಕಾರ್ ಮೇಲೆಲ್ಲ ಹೂವಿನ ರಾಶಿ ಚೆಲ್ಲಿತ್ತು. ಅಲ್ಲಿಂದ ಕಾರು ಪಟ್ಟಣದ ಬೀದಿ ಬೀದಿಗಳಿಗೆ ನುಗ್ಗಿತು. ಅದರ ಹಿಂದೆ ಮುಂದೆ ಕಾರ್ಯಕರ್ತರಿದ್ದರು. ವಿಜಯಪ್ರಸಾದ ಒಂದು ಕಾರಿನೊಳಗೆ ರಾಮಣ್ಣನೊಟ್ಟಿಗೆ ಖುಷಿಯ ಅಮಲ್ಲಿನಲ್ಲಿ ತೇಲುತ್ತಿದ್ದ.
ಹೀಗೆ ಕಾಲಕಳೆಯುತ್ತ ಒಂದಷ್ಟು ಕೆಲಸಗಳು ಆದವು. ವಿಜಯಪ್ರಸಾದನ ಮಾತಿಗೆ ರಾಮಣ್ಣ ಬೆಲೆಕೊಟ್ಟಿದ್ದ. ಗ್ರಾಮೀಣ ಭಾಗದಲ್ಲಿ ಆಗಲೇಬೇಕಾದ ತುರ್ತುಕೆಲಸಗಳ ಕಡೆಗೆ ಗಮನವಿಟ್ಟಿದ್ದ ರಾಮಣ್ಣ. ಕೆಲವು ಕಾರ್ಯಕ್ರಮಗಳಲ್ಲಿ ಮಾಜಿ, ಹಾಲಿ ಎಂಎಲ್ಎಲ ಗಳು ಒಂದೇ ವೇದಿಕೆ ಹಂಚಿಕೊಂಡು ಮಾತನಾಡಿದರು. ರಂಗುದಾಸ ಸಹ ಹಾಜರಿದ್ದ. ರಾಜಕೀಯದಲ್ಲಿ ಟೀಕೆ, ರಾಜಿ ಇವೆಲ್ಲ ಮಾಮೂಲು. ತಿಳಿದವರು ತಲೆಕೆಡಿಸಿಕೊಳ್ಳಲಿಲ್ಲ. ನಂತರದ ದಿನಗಳಲ್ಲಿ ʼಕರಿಕಲ್ಲು ಕ್ವಾರಿಯ ರೂವಾರಿಗಳುʼ ಎಂಬ ಶೀರ್ಷಿಕೆಯಲ್ಲಿ ಇಬ್ಬರ ಫೋಟೋ ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ಒಂದಷ್ಟು ಜನ ಬರೆದರು. ಇದು ಹೆಚ್ಚಾಗಿ ಪ್ರಸಾರವಾಗಿ ಸುದ್ದಿ ಕ್ಷೇತ್ರದ ಜನರಿಗು ಮುಟ್ಟಿತು. ವಿಜಯಪ್ರಸಾದನಂತು ಕೆಂಡಾಮಂಡಲವಾಗಿ ರಾಮಣ್ಣನನ್ನೆ ಕೇಳಿಬಿಟ್ಟ. ರಾಮಣ್ಣ ʼಇದೆಲ್ಲವೂ ಊಹಾಪೋಹ. ಖಂಡಿತ ನಾನು ಕ್ವಾರಿಯನ್ನು ನಿಲ್ಲಿಸುತ್ತೇನೆʼ ಎಂದು ಸಮಜಾಯಿಸಿ ನೀಡಿದ್ದ. ವಿಜಯಪ್ರಸಾದ ಕ್ವಾರಿಯನ್ನು ನಿಲ್ಲಿಸುವುದಾಗಿ ಊರವರಿಗೆ ಮಾತುಕೊಟ್ಟಿದ್ದ. ರಂಗುದಾಸನ ಬಳಿ ಇದೇ ಮಾತನ್ನು ಮೀಸೆ ತಿರುವಿ ಹೇಳಿದ್ದ. ಅದಕ್ಕೆ ರಾಮಣ್ಣನೇ ರೂವಾರಿಯಾಗಿದ್ದ. ಆದರೀಗ ಒಂದಷ್ಟು ಗಾಳಿಸುದ್ದಿಗಳು ಓಡಾಡುತ್ತ ಜನರ ಲಕ್ಷ್ಯ ಸೆಳೆದಿದ್ದವು.
ರಾಮಣ್ಣ ಹಲವು ಶಾಸಕರ ಪರಿಚಯದಲ್ಲಿ ಕೆಲವು ಈವೆಂಟ್ಗಳಿಗೆ ಭೇಟಿನೀಡಿದ್ದ. ಬೆಂಗಳೂರು ಮತ್ತಿತರ ಸಿಟಿಗಳಲ್ಲಿ ಓಡಾಡಿ ಉಧ್ಯಮಿಗಳಿಗೆ ಪರಿಚಯವಾದ. ರಾಜನ್ ಕೂಡ ರಾಮಣ್ನನಿಗೆ ನಮಸ್ಕಾರ ಮಾಡಿ ʼಏನ್ರಿ ಗೆದ್ಬಿಟ್ರಿʼ ಅನ್ನುತ್ತ ತನ್ನ ಕಿಚಾಯಿಸಿದ. ಕರಿಕಲ್ಲು ಕ್ವಾರಿಯ ಬಗೆಗು ಮಾತನಾಡಿದ. ಅಲ್ಲಿ ಮಾಜಿ ಎಂಎಲ್ಎ ಸಿದ್ರಾಮಣ್ಣ ಕೂಡ ಇದ್ದ. ಇನ್ನಿತರ ಮಾತುಕತೆಗಳು ಅಲ್ಲಿ ನಡೆದು ರಾಮಣ್ಣನ ಮನಸ್ಥಿತಿ ಅಲುಗಾಡಲು ಶುರುವಾಯಿತು. ಸಿದ್ಧಾಂತಕ್ಕೆ ಅಂಟಿಕೊಂಡಿದ್ದ ಅವನು ಈಗ ಮಾತುತಪ್ಪಲು ಹೆದರಿದ. ಸಮಯ ಕೇಳಿ ಅವರಿಂದ ಬೀಳ್ಗೊಟ್ಟು ವಾಪಸ್ಸು ಕ್ಷೇತ್ರಕ್ಕೆ ಬಂದ
ವಿಜಯಪ್ರಸಾದ ಕ್ವಾರಿಯ ವಿಷಯವಾಗಿ ಮಾತನಾಡಲು ಅದರಿಂದ ಆಗುತ್ತಿದ್ದ ಪ್ರತಿಕೂಲಗಳ ಬಗ್ಗೆ ಜನರ ಅಭಿಪ್ರಾಯಗಳು, ಇನ್ನಿತರ ವೈಜ್ಞಾನಿಕ ಕಾರಣ ಪತ್ರಗಳನ್ನು ಸಿದ್ಧಪಡಿಸಿಕೊಂಡು ರಾಮಣ್ಣನ ಬಳಿ ಮಾತನಾಡಲು ಕಾತುರದಿಂದಿದ್ದ. ಕ್ವಾರಿಯನ್ನು ನಿಲ್ಲಿಸುವುದು ಶತಸಿದ್ಧʼ ಎಂದೇ ತಿಳಿದು ಉತ್ಸಾಹದಿಂದ ಓಡಾಡುತ್ತಿದ್ದ.
ರಾಮಣ್ಣನೇ ವಿಜಪ್ರಸಾದನಿಗೆ ಕರೆಮಾಡಿ ಭಾನುವಾರ ಐಬಿಗೆ ಬರಬೇಕೆಂದು ತಿಳಿಸಿದ. ಕ್ವಾರಿಯ ವಿಷಯದ ಬಗ್ಗೆಯೇ ಚರ್ಚೆ ಎಂದು ಇಬ್ಬರಿಗೂ ತಿಳಿದಿತ್ತು. ತನ್ನ ಮಾತನ್ನು ಮೀರುವುದಿಲ್ಲ ಎಂಬ ನಂಬಿಕೆ ರಾಮಣ್ಣನಿಗು, ವಿಜಪಪ್ರಸಾದನಿಗು ಇತ್ತು. ರಾಮಣ್ಣ ತನ್ನ ಸಿದ್ಧಾಂತ ಬಿಟ್ಟು ಹೇಗೆ ನುಡಿಯುವುದೆಂದು ಬಹಳ ಚಿಂತೆ ಮಾಡಿದ್ದ. ಕಡೆಗೆ ಅವನ ಮನಸ್ಸು ಇಳಿಜಾರಿಗೆ ಧುಮಿಕಿದಂತೆ ತೀರ ಕೆಳಕ್ಕೆ ಹೋಗಿಬಿಟ್ಟಿತು. ʼಏನಾದರು ಆಗಲಿʼ ಎಂಬ ಸಾಮಾನ್ಯ ಮಾತಿಗೆ ನಿಂತಿದ್ದ ರಾಮಣ್ಣ. ವಿಜಯಪ್ರಸಾದನೊಟ್ಟಿಗೆ ಇದ್ದ ಯುವಕರು ಒಳಿತೇ ಆಗುವುದೆಂದು ನಂಬಿದ್ದರು.
ಶನಿವಾರ ಮಧ್ಯಾಹ್ನ ಸಿದ್ರಾಮಣ್ಣ, ರಂಗುದಾಸ ಮತ್ತು ಕಾರ್ಯಕರ್ತರು ರಾಮಣ್ಣನ ಭೇಟಿಗೆ ಹೋಗಿದ್ದರು. ಆ ವಿಷಯ ವಿಜಯಪ್ರಸಾದನ ಕಿವಿಗೂ ಬಿದ್ದಿತ್ತು. ಆದರವನು ʼರಾಮಣ್ಣ ಬಗ್ಗೊಲ್ಲ ಬಿಡುʼ ನಿಟ್ಟುಸಿರು ಬಿಟ್ಟು ʼವೈರಿಗಳೇ ತಮ್ಮ ಬಳಿಗೆ ಬರುತ್ತಾರೆʼ ಎಂದು ಖುಷಿಪಟ್ಟಿದ್ದ.
ಭಾನುವಾರದ ಸಭೆಯಲ್ಲಿ ರಾಮಣ್ಣ ನಯವಾಗಿ ಮಾತನಾಡುತ್ತ ಕೈಗಾರಿಕಾ ಪ್ರದೇಶ ಮಾಡುವ ಆಸೆ ವ್ಯಕ್ತಪಡಿಸಿ ಅದಕ್ಕೆಲ್ಲ ಕಚ್ಚಾ ವಸ್ತುಗಳನ್ನು ಪೂರೈಸುವಂತೆ ನೀವು ಆಗಬೇಕು ಎಂದು ಕೊನೆಗೆ ಕ್ವಾರಿಯ ವಿಷಯಕ್ಕೆ ಬಂದ. ʼಅದನ್ನು ನಿಲ್ಲಿಸೋದು ಬೇಡ. ಇನ್ನೆರಡು ವರುಷ ಪರ್ಮಿಟ್ ಮುಗಿದ ಮೇಲೆ ಅವರೆ ನಿಲ್ಲಿಸುತ್ತಾರೆʼ ಎಂದಾಗ ವಿಜಯಪ್ರಸಾದ ಬಹಳ ಕೋಪಮಾಡಿಕೊಂಡು ಎತ್ತರದ ಧ್ವನಿಯಲ್ಲಿ ಮಾತನಾಡಿದ. ತತ್ವ, ಸಿದ್ಧಾಂತ ಅಂತೆಲ್ಲ ಜಾಸ್ತಿ ನುಡಿಯುತ್ತಿದ್ದಾಗ ರಾಮಣ್ಣ ʼಬದುಕೋ ದಾರಿ ಮುಖ್ಯ, ನೀನೆ ಅಲ್ಲಿಗೆ ಮ್ಯಾನೇಜರ್ರು ಆಗುʼ ಎಂದುಬಿಟ್ಟ. ಒಂದಷ್ಟು ಯುವಕರು ʼಇದು ಭಾರಿ ಅನ್ಯಾಯ, ನೀವು ಮಾರಾಟ ಆಗಿದ್ದೀರಿʼ ಎಂದುಬಿಟ್ಟರು. ಅಲ್ಲಿ ಮನಸ್ತಾಪಗಳು ಉಗ್ರವಾಗಿ ರಾಮಣ್ಣನೇ ಶಾಂತವಾಗಿ ʼಈ ವಿಷಯ ಇನ್ನೊಂದಿನ ಮಾತನಾಡೋಣ, ಈಗ ಊಟ ಮಾಡಿʼ ಎಂದು ಊಟ ತರಿಸಿದರು. ವಿಜಯ ಪ್ರಸಾದನ ಸಮೇತ ಯಾರು ಉಣ್ಣದೇ ಅಲ್ಲಿಂದ ಕಾಲ್ಕಿತ್ತರು. ಐಬಿಯೊಳಗೆ ಇದ್ದವರು ʼಅಯ್ಯೋ ಬಿಡಿ ಸಾರ್ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿʼ ಎಂದು ಹೇಳುತ್ತಿದ್ದಾದ ಅಲ್ಲಿಗೆ ರಂಗುದಾಸ ಬಂದ. ಅವನು ಹೋದ ವಿಷಯ ವಿಜಯಪ್ರಸಾದನಿಗೆ ತಿಳಿದು ವಾಪಸ್ಸು ಅಲ್ಲಿಗೆ ಹೋದ. ರಾಮಣ್ಣನ ಜೊತೆ ಮಾತುಕತೆಯಲ್ಲಿದ್ದ ರಂಗುದಾಸನ ನೋಡಿ ʼಅಣ್ಣಾ ಏನಿದುʼ ಅಂದ. ರಾಮಣ್ಣ ಮತ್ತೆ ಮೆಲ್ಲನೆ ಧ್ವನಿಯಲ್ಲಿ ʼನೀನು ಬಾ ಇಲ್ಲಿ ಕೂತ್ಕೊʼ ಅಂದು ಸಮದಾನದ ನುಡಿಗಳಾಡುತ್ತಿರಲು ʼಮಾರಾಟ ಆಗಬಾರದು ಅಂತ ಹೇಳಿದ ನೀವೇ …ʼ ಅನ್ನುತ್ತ ಮಾತುಗಳನ್ನು ನುಂಗಿಕೊಂಡ ವಿಜಯಪ್ರಸಾದ. ರಂಗುದಾಸನ ಮುಖ ಫಳಫಳ ಹೊಳೆಯುತ್ತಿತ್ತು. ಅವನೆದುರಿಗೆ ನಿಲ್ಲಲಾಗದೇ ವಿಜಯಪ್ರಸಾದ ಐಬಿಯಿಂದ ಹೊರಕ್ಕೆ ಬಂದ. ರಾಮಣ್ಣ ಕೂಗಿದರು ನಿಲ್ಲನಿಲ್ಲ. ಐಬಿ ಗೋಡೆಮೇಲಿದ್ದ ಅಂಬೇಡ್ಕರ್ ಫೋಟೋ ದಪ್ಪನೆ ನೆಲಕ್ಕೆ ಬಿತ್ತು.
ನಡೆದ ವಿಷಯ ಜನರಿಗೆ ತಳಿಯಿತು. ಹಾಗೇ ಪ್ರಸಾರ ಆಗುತ್ತ ಕ್ಷೇತ್ರದ ವ್ಯಾಪ್ತಿಗು ಮುಟ್ಟಿತು. ಕೆಲವರು ಬಾಯಿಗೆ ಬಂದಂತೆ ಬೈದರು. ಅವಾಚ್ಯ ಶಬ್ದಗಳು ಮಾತುಗಳಾದವು. ವಿಜಯ ಪ್ರಸಾದನ ಮುಖ ಕಪ್ಪಾಗತೊಡಗಿತು. ನಂತರದ ದಿನಗಳಲ್ಲಿ ಕ್ವಾರಿಗೆ ಎರಡು ಕಲ್ಲು ಕೊರೆಯುವ ಯಂತ್ರ, ದೊಡ್ಡ ಬಕೆಟ್ನ ಹಿಟಾಚಿ ಬಂದಿಳಿಯಿತು. ಮೈನಿಂಗ್ ಜೋರಾಗಿ ನಡೆಯುತ್ತ ಅಲ್ಲಿ ಏಳುವ ಸದ್ದು ಇದ್ದಷ್ಟು ಜೋರಾಯಿತು. ವಿಜಯಪ್ರಸಾದನ ಕಣ್ಣು ರಾಮಣ್ಣನ ನಡತೆ ಬದಲಾದದ್ದನ್ನು ಒಪ್ಪಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಕಡೆಗೂ ಸಿದ್ಧಾಂತ ಬದಿಗೆ ತಳ್ಳಿ ಮೆಲ್ಲಗೆ ರಾಮಣ್ಣ ಇತರರ ಜೊತೆಗೆ ಹೊಂದಿಕೊಂಡದ್ದು ಅವನೇ ಹೇಳುತ್ತಿದ್ದ ʼಉಂಡಮನೆಗೆ ದ್ರೋಹ ಬಗೆದವನು ಸತ್ತಹಾಗೇʼ ಎಂಬುದು ಅವನಿಗೆ ನಿಜವಾಗಿ ಇದ್ದ ಮಾನಮರ್ಯಾದೆಯನ್ನು ಅವನೇ ಜಗಜ್ಜಾಹೀರಾಗುವಂತೆ ಕಳೆದುಕೊಂಡಿದ್ದ. ಅವನೊಟ್ಟಿಗೆ ತನು ಮನ ಧನ ಧಾರೆ ಎಳೆದು ಭವಿಷ್ಯವನ್ನು ಕಡೆಗಣಿಸಿ ನಿಂತುಕೊಂಡಿದ್ದ ಯುವಸಮೂಹ ಕಂಗಾಲಾಗಿ ʼಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲʼ ಎಂಬ ಗಾದೆಮಾತು ಹೇಳಿಕೊಂಡು ಸಮಧಾನದ ಉಸಿರು ಬಿಡುತ್ತಿದ್ದರು.
ವಿಜಯಪ್ರಸಾದನು ಬಲಿಯಾಗಿಹೋಗಿದ್ದ. ಓದು, ಶ್ರಮ, ಕೆಲಸ, ವ್ಯರ್ಥವಾಗಿ ಕೊನೆಗೆ ಬದುಕಿಗೆ ದಾರಿ ಕಾಣದೆ ದಿಗಿಲಾಗಿ ಪರಿತಪಿಸಿದ.
***
ರಾಮಣ್ಣನ ಸೋಲು ವಿಜಯಪ್ರಸಾದನಿಗೆ ಅತೀವ ಖುಷಿ ಕೊಟ್ಟಿತು. ಅವನು ಗೆದ್ದಾಗ ಆದ ಖುಷಿಗಿಂತ ಅವನು ಸೋತಿದ್ದಕ್ಕಾದ ಸಂತಸ ಅಪರಿಮಿತವಾಗಿ ಹೃದಯ ಹಗುರಾಯಿತು.
ಕಥೆಗಾರ-ಅಜಯ್ ಕುಮಾರ್ ಎಂ.ಗುಂಬಳ್ಳಿ