ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ- ಡಿ.ಕೆ.ಶಿವಕುಮಾರ್ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಧಾರ್ಮಿಕ, ಪ್ರಾಕೃತಿಕ ಸಂಪತ್ತು ಹೊಂದಿರುವ ಕಾವೇರಿ ನದಿ ತೀರದಲ್ಲಿರುವ ಚಾಮರಾಜನಗರ ಪುಣ್ಯಭೂಮಿ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಮಲೆ ಮಾದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸೂರ್ಯಮುಳುಗುವ ವೇಳೆಗೆ ಶ್ರೀರಂಗಪಟ್ಟಣ (ಆದಿರಂಗ), ಮಧ್ಯರಂಗ ಹಾಗೂ ಅಂತ್ಯರಂಗ ದೇವಾಲಯಗಳಿಗೆ ಭೇಟಿ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಈ ದೇವಾಲಯದ ಜೀರ್ಣೋದ್ಧಾರದ ಕೆಲಸ ಮಾಡುತ್ತಿದ್ದೇವೆ. ಇಂದು ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿದಂತೆ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ಪುಣ್ಯಕ್ಷೇತ್ರ ಯಾತ್ರಿಕರಿಗೆ ಪ್ರಸಿದ್ಧವಾಗಿದೆ. ಇದು ಪ್ರಕೃತಿಯ ಕೊಡುಗೆ. ನಮ್ಮ ಸರ್ಕಾರ ಕೂಡ ಎಲ್ಲೆಡೆ ಅನೇಕ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಇದು ಇತಿಹಾಸ ಪುಟಕ್ಕೆ ಹೋಗುವ ಕೆಲಸವನ್ನು ನಮ್ಮ ಸಚಿವರಾದ ವೆಂಕಟೇಶ್ ಅವರು ಮಾಡಿದ್ದಾರೆ ಎಂದು ತಿಳಿಸಿದರು.

ಜಿಬಿಎ ಚುನಾವಣೆ ಬಗ್ಗೆ ಕೇಳಿದಾಗ, ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲು ಸಿದ್ಧವಾಗಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.

 

ನೀವು ಯಾವಾಗ ಸಿಎಂ ಆಗುತ್ತೀರಿ ಎಂದು ಕೇಳಿದಾಗ, ಅದನ್ನು ಕಾಲ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

Share this Article
Leave a comment