ಕರ್ನಾಟಕದ ದಲಿತ ಚಳವಳಿ ಮತ್ತು ಸಾಹಿತ್ಯ ಲೋಕದಲ್ಲಿ ‘ಮುಳ್ಳೂರು’ ಎಂಬ ಹೆಸರು ಒಂದು ಹೋರಾಟದ ಸಂಕೇತ. ಮುಳ್ಳೂರು ನಾಗರಾಜ್ ಕೇವಲ ಕವಿಯಲ್ಲ, ದಲಿತರ ನೋವು–ನಲಿವು, ಪ್ರತಿರೋಧ–ಸಂಘರ್ಷಗಳಿಗೆ ದನಿಯಾದ ಚಳವಳಿಗಾರ, ಪತ್ರಕರ್ತ ಮತ್ತು ಪ್ರಖರ ಅಂಬೇಡ್ಕರ್ವಾದಿ. ಇವರ ಬರಹ ಮತ್ತು ಬದುಕು ದಲಿತ ಸಾಹಿತ್ಯದ ಆಶಯವನ್ನು ವಿಸ್ತರಿಸಿ, ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸೈದ್ಧಾಂತಿಕ ಆಯಾಮ ನೀಡಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ‘ಮುಳ್ಳೂರು’ ಗ್ರಾಮದಲ್ಲಿ ಜನಿಸಿದ ನಾಗರಾಜ್ ಅವರ ಊರಿನ ಹೆಸರೇ ಅನ್ವರ್ಥನಾಮವಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಧರಣಿ, ಸತ್ಯಾಗ್ರಹ, ಜಾಥಾ, ಭೂ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಇವರು ನಂಜನಗೂಡಿನ ತಗಡೂರು ಭೂ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹುಮುಖ್ಯವಾಗಿ ಬದನವಾಳು ದಲಿತ ಹತ್ಯಾಕಾಂಡವನ್ನು ಖಂಡಿಸಿ ಬೃಹತ್ ಹೋರಾಟ ಕಟ್ಟಿದ ಪ್ರಮುಖರಲ್ಲಿ ಒಬ್ಬರು. ರಾಜ್ಯದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ಇವರು ‘ಹೋರಾಟದ ಪಂಜು’ ಆಗುತ್ತಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
ದೇಶದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬರೆದ ಇವರ ಕವಿತೆ ಇಂಗ್ಲಿಷ್ಗೆ ಅನುವಾದಗೊಂಡು ಅಮೆರಿಕದ ‘ವಾಯ್ಸ್ ಆಫ್ ಎಮರ್ಜೆನ್ಸಿ’ ಸಂಕಲನದಲ್ಲಿ ಪ್ರಕಟವಾಗಿದೆ. ಹೌದು ಮುಳ್ಳೂರು ನಾಗರಾಜ್ ಅವರ ಬರಹಗಳು ದಲಿತರ ಆದಿಮ ಸಂಕಟ, ಅವಮಾನದ ಪರಂಪರೆ ಮತ್ತು ಪ್ರತಿರೋಧದ ನೆಲೆಗಳನ್ನು ದಾಖಲಿಸಿವೆ. ಪುರಾಣ–ಮಿಥ್ಗಳನ್ನು ದಲಿತ ದೃಷ್ಟಿಕೋನದಿಂದ ‘ಮುರಿದು ಕಟ್ಟುವ’ ಪ್ರಯತ್ನ ಇವರ ವೈಶಿಷ್ಟ್ಯವಾಗಿತ್ತು ಎಂಬುದು ಅವರ ಸಾಹಿತ್ಯದಲ್ಲಿ ನಾವು ಕಾಣಬಹುದಾಗಿದೆ.
ದಲಿತ ಸಾಹಿತ್ಯಕ್ಕೆ ಇವರ ವಿಶಿಷ್ಟ ಕೊಡುಗೆಗಳು: ಪುರಾಣಗಳ ವಿಮರ್ಶಾತ್ಮಕ ಮರು-ಓದು, ಏಕಲವ್ಯನ ಹೆಬ್ಬೆರಳು, ಶಂಭೂಕನ ವಧೆ – ಇವುಗಳನ್ನು ದಲಿತರ ಮೇಲೆ ನಡೆದ ಸಾಂಸ್ಕೃತಿಕ ಹಿಂಸೆಯ ಸಂಕೇತಗಳಾಗಿ ವ್ಯಾಖ್ಯಾನಿಸಿ, ‘ದಲಿತ ಪುರಾಣ’ವನ್ನು ಕಟ್ಟಿದರು. ಇದು ದಲಿತ ಸಾಹಿತ್ಯದಲ್ಲಿ ‘ಪ್ರತಿ-ನಿರೂಪಣೆ’ಯ ಪರಂಪರೆಗೆ ಬುನಾದಿ ಹಾಕಿತು. ಮುಳ್ಳೂರು ನಾಗರಾಜ್ ಅವರ ಬರಹಗಳು ಚಳವಳಿ ಮತ್ತು ಸಾಹಿತ್ಯದ ಸಮ್ಮಿಲನವಾಗಿತ್ತು. ಅವರು ಹೋರಾಟದ ಬೀದಿಯಲ್ಲಿ ನಿಂತು ಬರೆದರೇ ಹೊರತು, ಕುರ್ಚಿಯಲ್ಲಿ ಕುಳಿತು ಬರೆಯಲಿಲ್ಲ ಎಂಬ ಹಲವರ ನುಡಿಗಳು ಮುಳ್ಳೂರು ಸಾಹಿತ್ಯದ ಸ್ವಾಭಿಮಾನ ಮತ್ತು ಸತ್ವವನ್ನು ತೋರಿಸುತ್ತದೆ.
ತಗಡೂರು ಭೂ ಹೋರಾಟ, ಬದನವಾಳು ದುರಂತದಂತಹ ನೈಜ ಘಟನೆಗಳೇ ಇವರ ಸಾಹಿತ್ಯದ ವಸ್ತುವಾಗಿದೆ. ಹೀಗಾಗಿ ಇವರ ಬರಹ ‘ಸಾಕ್ಷಿಪ್ರಜ್ಞೆ’ಯ ಸಾಹಿತ್ಯವಾಯಿತು. ‘ಜಾತಿ ಪದ್ಧತಿಯನ್ನು ಪೋಷಿಸುವ ಶಕ್ತಿ ಹಳ್ಳಿಗಳಲ್ಲಿ ಗಟ್ಟಿಗೊಂಡಿದೆ’ ಎಂದು ಆತಂಕ ವ್ಯಕ್ತಪಡಿಸುತ್ತ, ಗಾಂಧಿ ಕಂಡ ಗ್ರಾಮ ಭಾರತದ ಪರಿಕಲ್ಪನೆಯನ್ನು ಬದನವಾಳು ಘಟನೆಯ ಮೂಲಕ ವ್ಯಂಗ್ಯ ಮಾಡಿದರು. ಹೊಲದ ಒಡೆಯರಾಗಿದ್ದ ದಲಿತ ಸಮುದಾಯ ಭೂ ವಂಚನೆಗೆ ಒಳಗಾದದ್ದನ್ನು ಇವರ ಕೃತಿಗಳು ದಾಖಲಿಸುತ್ತವೆ.
ಹೋರಾಟ, ಸಾಹಿತ್ಯದ ಮೂಲಕವಲ್ಲದೇ ಪತ್ರಿಕೋದ್ಯಮದ ಮೂಲಕ ವೈಚಾರಿಕ ಜಾಗೃತಿ ಮೂಡಿಸುವ ಕೆಲಸವನ್ನು ಮುಳ್ಳೂರು ನಾಗರಾಜ್ ಅವರು ಮಾಡಿದ್ದಾರೆ. ‘ಪಂಚಮ’, ‘ಮುಳ್ಳೂರು’ ಪತ್ರಿಕೆಗಳ ಸಂಪಾದಕರಾಗಿ; ‘ಸುದ್ದಿ ಸಂಗಾತಿ, ಮುಂಜಾನೆ, ನಿಜದನಿ, ಮಾರ್ದನಿ, ಭುವನ ಸಂಗಾತಿ ಪತ್ರಿಕೆಗಳ ವರದಿಗಾರರಾಗಿ ತೀಕ್ಷ್ಣ ಬರಹಗಳ ಮೂಲಕ ಮುಳ್ಳೂರು ನಾಗರಾಜ್ ನಾಡಿನಲ್ಲಿ ವೈಚಾರಿಕ ಜಿಜ್ಞಾಸೆ ಮೂಡಿಸಿದ್ದರು. ಕನ್ನಡ ಭಾಷೆಗೆ ಹೊಸ ಒಗರು ನೀಡಿದ ಅವರು ದಲಿತ ಕೇರಿಯ ಆಡುಮಾತು, ಗೋಳು, ಆಕ್ರೋಶವನ್ನು ಯಥಾವತ್ತಾಗಿ ಕಾವ್ಯಕ್ಕೆ ತಂದರು. ‘ನೆಲದ ಜೋಗುಳ’ದಂತಹ ಶೀರ್ಷಿಕೆಗಳೇ ದಲಿತರ ನೋವಿಗೆ ಲಾಲಿ ಹಾಡುವ ರೂಪಕಗಳಾದವು.
ಮುಳ್ಳೂರು ನಾಗರಾಜ್ ಅವರ ಸಾಹಿತ್ಯಕ ಮತ್ತು ಸಾಮಾಜಿಕ ಕೊಡುಗೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ. ಅದರಂತೆ 2007 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, 2008 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, 2009 ರಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ ಲಭಿಸಿದೆ. ಇವರ ಹೆಸರಿನಲ್ಲಿ ಚಾಮರಾಜನಗರದ ಸಿ.ಎಂ.ನರಸಿಂಹಮೂರ್ತಿ ಅವರ ‘ರಂಗವಾಹಿನಿ’ ಸಂಸ್ಥೆ ಕಳೆದ 13 ವರ್ಷಗಳಿಂದ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ಯನ್ನು ಯುವ ಕವಿಗಳಿಗೆ ನೀಡುತ್ತಾ ಬಂದಿರುವುದು ವಿಶೇಷವಾಗಿದೆ.
ಮುಳ್ಳೂರು ನಾಗರಾಜ್ ಅವರ ಬರಹಗಳು 70-80ರ ದಶಕದ ದಲಿತ ಚಳವಳಿಯ ಅಧಿಕೃತ ದಾಖಲೆಗಳಾಗಿವೆ. ಈ ಕಾರಣಕ್ಕೆ ನಾಗರಾಜ್ ಅವರ ಸಾಹಿತ್ಯ ಇತಿಹಾಸವನ್ನು ‘ಕೆಳಗಿನಿಂದ’ ನೋಡುವ ದೃಷ್ಟಿ ನೀಡುತ್ತವೆ. ಹಾಗಾಗಿಯೇ ಮುಳ್ಳೂರು ನಾಗರಾಜ್ ಇಂದಿಗೂ ಪ್ರಸ್ತುತವಾಗಿದ್ದು, ನಿಜವಾದ ಸಾಕ್ಷಿಪ್ರಜ್ಞೆ ಎಂದು ದಲಿತ ಲೋಕ ಅವರನ್ನು ಗುರುತಿಸುತ್ತದೆ. ನೋವನ್ನು ಕೇವಲ ಗೋಳಾಗಿಸದೇ, ಪ್ರತಿರೋಧದ ಕಾವ್ಯವಾಗಿ ಕಟ್ಟಿಕೊಟ್ಟರು. ‘ಏಕಾಂಗಿ ಏಕಲವ್ಯ’ ಇಂದಿಗೂ ದಲಿತ ಯುವಜನರಿಗೆ ಸ್ಫೂರ್ತಿಯಾಗಿದೆ.
ಮುಳ್ಳೂರು ನಾಗರಾಜ್ ದಲಿತ ಸಾಹಿತ್ಯವನ್ನು ಕೇವಲ ‘ಅನುಭವ ಕಥನ’ದ ಹಂತದಿಂದ ‘ವೈಚಾರಿಕ ಹೋರಾಟದ ಅಸ್ತ್ರ’ವನ್ನಾಗಿ ರೂಪಿಸಿದರು. ಇವರ ಪಾಲಿಗೆ ಸಾಹಿತ್ಯ ಬಿಡುವಿನ ವೇಳೆಯ ಹವ್ಯಾಸವಾಗಿರಲಿಲ್ಲ; ಅದು ಉಸಿರಾಟವಾಗಿತ್ತು, ಹೋರಾಟವಾಗಿತ್ತು. ‘ಮುಳ್ಳೂರು’ ಎಂಬುದು ಒಂದು ಊರಿನ ಹೆಸರಷ್ಟೇ ಅಲ್ಲ, ಅದು ದಲಿತ ಅಸ್ಮಿತೆಯ ಮುಳ್ಳಿನ ಹಾದಿಯಲ್ಲಿ ಅರಳಿದ ಕೆಂಪು ಹೂವು ಎಂದು ಗಣ್ಯರು ಹೇಳುತ್ತಾರೆ. ವ್ಯಕ್ತಿ ಪೂಜೆಯನ್ನು ನಿರಾಕರಿಸಿ, ನೇರ-ನಿಷ್ಠುರ ವಿಮರ್ಶೆಯನ್ನು ಮಾಡಿದ ಮುಳ್ಳೂರು ನಾಗರಾಜ್ ಅವರ ಸಾಹಿತ್ಯ ನಮಗೆಲ್ಲರಿಗೂ ಇಂದು ಆದರ್ಶವಾಗಬೇಕಿದೆ. ತಳ ಸಮುದಾಯಗಳ ಯುವಕರು ಮುಳ್ಳೂರು ನಾಗರಾಜ್ ಅವರ ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕಿದೆ. ಈ ಮೂಲಕ ಮುಳ್ಳೂರು ನಾಗರಾಜ್ ಅವರ ಸಾಹಿತ್ಯಿಕ ಕೊಡುಗೆಯನ್ನು ನಾವೆಲ್ಲರೂ ಗೌರವಿಸಲು ಸಾಧ್ಯವಾಗುತ್ತದೆ.