ಚಾಮರಾಜನಗರ : ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ ನೀಡುವ 15ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಎಸ್ ಮಂಜುನಾಥ ಅವರ – ಹೆಬ್ಬಿರುಳಿನ ನಿಬ್ಬೆರಗು – ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು 10 ಸಾವಿರ ರೂಪಾಯಿ ಮೊತ್ತ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಜೂ. 28ರಂದು ಮೈಸೂರಿನಲ್ಲಿ ಏರ್ಪಡಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ತಿಳಿಸಿದ್ದಾರೆ.
ಎಸ್ ಮಂಜುನಾಥ ಕೋಲಾರ ಜಿಲ್ಲೆಯ ಲಕ್ಕೂರಿನವರು. ಕಾವ್ಯ ಮತ್ತು ಸಾಮಾಜಿಕ ಬದ್ಧತೆಯಿಂದ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಂವೇದನಾಶೀಲ ಕವಿ. ಈಗಾಗಲೇ ಮನುಷ್ಯ ಯುದ್ಧದ ಬಣ್ಣಗಳು, ಚಾಟಿಗೆ ಕಟ್ಟಿದ ಗೆಜ್ಜೆ, ಹೆಬ್ಬೆರುಳಿನ ನಿಬ್ಬೆರಗು ಕವನ ಸಂಕಲನ ಪ್ರಕಟಿಸಿದ್ದಾರೆ. ಫಲಿತಾಕ್ಷರ, ವಿಷಘಮ್ಮಲು, ಕೀಯ ಕೀಯ ರಾಜಕೀಯ, ಪುಟ್ಟಿ, ಗುಲಾಬಿ ಗ್ಯಾಂಗ್, ಟೈಮ್ ಲೈನ್ ,ಫ್ರಿಡ್ಜ್ ನಲ್ಲೇನಿದೆ, ಏಕತಂತಿ ಏಕನಾದ ಎಂಬ ಬೀದಿ ನಾಟಕಗಳನ್ನು ರಚನೆ ಮಾಡಿದ್ದಾರೆ. ಕೌದಿ ಚಲನಚಿತ್ರಕ್ಕೆ ಗೀತ ರಚನೆ, ಡಿಎನ್ಎ ಮತ್ತು ಚೆಲುವಿನ ಪರಂಗಿ ಗಿಡಗಳು ಚಲನಚಿತ್ರಕ್ಕೆ ಸಂಭಾಷಣೆ ರಚಿಸಿದ್ದಾರೆ.