ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾರಾಸಗಟಾಗಿ ನಿರಾಕರಿಸಿದ್ದಾರೆ. “ನಾನು ಸೋತಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಹೇಳುವ ಮೂಲಕ ಅವರು ಸಾಂವಿಧಾನಿಕ ಬಿಕ್ಕಟ್ಟಿಗೆ ನಾಂದಿ ಹಾಡಿದ್ದಾರೆ.
ಇತ್ತೀಚಿನ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದೆ. ಸಂಪ್ರದಾಯದಂತೆ ಸೋತ ಪಕ್ಷದ ಮುಖ್ಯಮಂತ್ರಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬೇಕು. ಆದರೆ ಮಮತಾ ಬ್ಯಾನರ್ಜಿ ಅವರು, “ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ, ಇದು ನೈತಿಕವಾಗಿ ನಮ್ಮದೇ ಗೆಲುವು” ಎಂದು ಪ್ರತಿಪಾದಿಸಿ ರಾಜಭವನಕ್ಕೆ ಹೋಗಲು ನಿರಾಕರಿಸಿದ್ದಾರೆ.
ಸಂವಿಧಾನದ ನಿಯಮಗಳ ಪ್ರಕಾರ ಒಬ್ಬ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ ಸಂವಿಧಾನದಲ್ಲಿ ಈ ಕೆಳಗಿನ ಆಯ್ಕೆಗಳಿವೆ. ರಾಜ್ಯಪಾಲರ ಅಧಿಕಾರ (ವಿಧಿ 164): ಸಂವಿಧಾನದ 164ನೇ ವಿಧಿಯ ಪ್ರಕಾರ, ಮುಖ್ಯಮಂತ್ರಿಯು ರಾಜ್ಯಪಾಲರ ‘ವಿಶ್ವಾಸ ಇರುವವರೆಗೆ’ (During the pleasure of the Governor) ಮಾತ್ರ ಅಧಿಕಾರದಲ್ಲಿರಲು ಸಾಧ್ಯ. ಅಂದರೆ, ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಖಚಿತವಾದರೆ ರಾಜ್ಯಪಾಲರು ಮುಖ್ಯಮಂತ್ರಿಯನ್ನು ವಜಾಗೊಳಿಸುವ ಅಧಿಕಾರ ಹೊಂದಿದ್ದಾರೆ.
ವಿಧಾನಸಭೆಯ ಅವಧಿ (ವಿಧಿ 172): ಪ್ರಸ್ತುತ ವಿಧಾನಸಭೆಯ ಐದು ವರ್ಷಗಳ ಅವಧಿ ಮುಕ್ತಾಯಗೊಂಡ ತಕ್ಷಣ ಅದು ತಾನಾಗಿಯೇ ವಿಸರ್ಜನೆಯಾಗುತ್ತದೆ. ಹೊಸದಾಗಿ ಆಯ್ಕೆಯಾದ ಶಾಸಕರು ಸರ್ಕಾರ ರಚಿಸಲು ಹಕ್ಕು ಮಂಡಿಸಿದಾಗ ಹಳೆಯ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ.
ರಾಷ್ಟ್ರಪತಿ ಆಳ್ವಿಕೆ (ವಿಧಿ 356): ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಾಂಗ ವಿಫಲವಾಗಿದೆ ಎಂದು ರಾಜ್ಯಪಾಲರು ವರದಿ ನೀಡಿದರೆ, ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಬಹುದು
ಮುಂದಿನ ಹಾದಿ ಏನು?ಪಶ್ಚಿಮ ಬಂಗಾಳದ ಈಗಿನ ವಿಧಾನಸಭೆಯ ಅವಧಿಯು ಮೇ 7 ಕ್ಕೆ ಕೊನೆಗೊಳ್ಳಲಿದೆ. ಅಲ್ಲಿಯವರೆಗೆ ಅವರು ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ. ಬಿಜೆಪಿಯ ಸುವೇಂದು ಅಧಿಕಾರಿಯವರು ಈಗಾಗಲೇ ರಾಜ್ಯಪಾಲರ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ.