ಶಿಕ್ಷಣ ಇಲಾಖೆ ವತಿಯಿಂದಲೇ ಮೊಟ್ಟೆ ವಿತರಣೆ ಮಾಡುವಂತೆ ಮನವಿ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನ ಬಿಸಿಯೂಟಕ್ಕೆ ಇಲಾಖೆಯಿಂದ ಆಹಾರ ಸಾಮಾಗ್ರಿಗಳು ಸರಬರಾಜು ಆಗುವ ರೀತಿ, ಮೊಟ್ಟೆ ವಿತರಣೆಯನ್ನು ಇಲಾಖೆಯಿಂದ ಅಥವಾ ಯಾವುದಾರು ಏಜೆನ್ಸಿಯಿಂದ ವಿತರಿಸಿ, ಮುಖ್ಯ ಶಿಕ್ಷಕರ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನ ಮುಂಭಾಗ ಜಿಲ್ಲಾ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಸಂಘದ ಪದಾಧಿಕಾರಿಗಳು ಹಾಗು ಮುಖ್ಯ ಶಿಕ್ಷಕರು, ಪ್ರಭಾರ ಮುಖ್ಯ ಶಿಕ್ಷಕರು ಕೆಲ ಕಾಲ ಮೌನ ಪ್ರತಿಭಟನೆ ನಡೆಸಿ, ಸ್ಥಳಕ್ಕಾಗಮಿಸಿ ಜಿ.ಪಂ. ಸಿಇಓ ಮೋನಾ ರೋತ್ ಅವರು ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಮಧ್ಯಾಹ್ನ ಬಿಸಿ. ಊಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಪ್ರಸ್ತುತ ದೈನಂದಿನ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ಸುಮಾರು ೮ ರೂ. ಇದ್ದು, ಸರ್ಕಾರ ಪ್ರತಿ ಮೊಟ್ಟೆಗೆ ೫.೨೦ ರೂ. ಮಾತ್ರ ಅನುದಾನ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ೨.೮೦ ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಭರಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಇಂತಹ ಪರಿಸ್ಥಿತಿಯಿಂದ ಮಧ್ಯಾಹ್ನ, ಬಿಸಿ ಊಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ ಅಲ್ಲದೆ ಶಿಕ್ಷಕರಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತಿದೆ, ಶಾಲಾ ಶಿಕ್ಷಣದ ಜೊತೆಗೆ ಯೋಜನೆಯ ನಿರ್ವಹಣೆಯಲ್ಲಿಯೂ ಹೆಚ್ಚುವರಿ ಭಾರವನ್ನು ಹೊರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಾಲಾ ಶೈಕ್ಷಣಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ .ಆದ್ದರಿಂದ ಬಿಸಿಯೂಟ ಯೋಜನೆಗೆ ಈಗಾಗಲೇ ಆಹಾರ ಸಾಮಾಗ್ರಿಗಳನ್ನು ಶಾಲೆಗೆ ಸರಬರಾಜು ಮಾಡುತ್ತಿರುವ ಹಾಗೆ, ಮೊಟ್ಟೆಯನ್ನು ಶಾಲೆಗಳಿಗೆ ಸರಬರಾಜು ಮಾಡಿಕೊಡಬೇಕಾಗಿ ಅಥವಾ ಯಾವುದಾರೂ ಏಜೆನ್ಸಿಗೆ ವಹಿಸಿ, ಮುಖ್ಯ ಶಿಕ್ಷಕರ ಒತ್ತಡ ಕಡಿಮೆಗೊಳಿಸಿ, ಬೋಧನೇತರ ಚಟುವಟಿಕೆಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ, ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸಿ ಕೊಡಬೇಕು. ಅಲ್ಲಿಯವರೆಗೆ ಮೊಟ್ಟೆಯ ಮಾರುಕಟ್ಟೆ ದರದಂತೆ ಅನುದಾನ ಒದಗಿಸಿಕೊಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಿಇಓ ಅವರು ಜಿಲ್ಲಾ ಮಟ್ಟದ ಸಮಸ್ಯೆಯನ್ನು ಇಲ್ಲಿಯೇ ಬಗೆಹರಿಸಿಕೊಳ್ಳೋಣ. ರಾಜ್ಯ ಮಟ್ಟದ ಸಮಸ್ಯೆಗಳ ಮೇಲಾಧಿಕಾರಿಗಳಿಗೆ ತಿಳಿಸಿ, ಕ್ರಮ ವಹಿಸುವಂತೆ ನಾನು ಸಹ ನಿಮ್ಮೆಲ್ಲರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ. ಮುಖ್ಯ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಸದ್ಯದಲ್ಲಿಯೇ ಇಲಾಖೆಯ ಮುಖ್ಯಸ್ಥರ ಸಭೆ ನಡೆಸಿ, ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಸಿಯೂಟದ ಜಿಲ್ಲಾ ಅಧಿಕಾರಿ ರೇವಣ್ಣ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ, ತಾಲೂಕು ಅಧ್ಯಕ್ಷರಾದ ಚಾ.ನಗರದ ಸಿ.ಕೆ. ರಾಮಸ್ವಾಮಿ, ಯಳಂದೂರು ಸೋಮಣ್ಣ, ಕಾರ್ಯದರ್ಶಿ ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಮಹದೇವಮೂರ್ತಿ, ಹಿರಿಯ ಉಪಾಧ್ಯಕ್ಷ ಎಂ.ಡಿ. ಮಹದೇವಯ್ಯ, ಕುಮಾರ್, ದಾಕ್ಷಾಯಿಣ , ಪದಾಧಿಕಾರಿಗಳಾದ ಸುಶೀಲಾ, ಶ್ವೇತಾ, ಕೃಷ್ಣಮೂರ್ತಿ, ನಟರಾಜು, ಧನಂಜಯ, ಪುಟ್ಟಸ್ವಾಮಿ ಮೊದಲಾದವರು ಇದ್ದರು.

Share this Article
Leave a comment