ದಳಪತಿ ವಿಜಯ್: ಬಾಲ್ಯದಿಂದ ಬದುಕಿನ ಯಶೋಗಾಥೆ

ಮಣಿಕಂಠ ಜನತಾ ರಾಯಭಾರಿ
3 Min Read

ಮೈಸೂರು: ತಮಿಳು ಚಿತ್ರರಂಗದ ‘ಇಳಯದಳಪತಿ’ಯಿಂದ ‘ತಳಪತಿ’ ಆಗಿ, ಈಗ ರಾಜಕೀಯದ ನಾಯಕನಾಗಿ ಹೊರಹೊಮ್ಮಿರುವ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ಜೀವನ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ. ಬಾಲ್ಯದ ನೋವು, ಸಿನಿಮಾ ಕುಟುಂಬದ ಹಿನ್ನೆಲೆ, ಸತತ ಪರಿಶ್ರಮ ಮತ್ತು ಜನಪ್ರಿಯತೆಯ ಉತ್ತುಂಗ ಹಾಗೂ ಈಗ ರಾಜಕಾರಣದ ಯಶಸ್ಸು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ವಿಚಾರವಾಗಿದೆ.

ಹೌದು ವಿಜಯ್ ಅವರು 1974 ಜೂ.22 ರಂದು ಮದ್ರಾಸ್, ಈಗಿನ ಚೆನ್ನೈನಲ್ಲಿ ಜನಿಸಿದರು. ತಂದೆ ಎಸ್.ಎ.ಚಂದ್ರಶೇಖರ್ ಖ್ಯಾತ ತಮಿಳು ಚಿತ್ರ ನಿರ್ದೇಶಕ, ತಾಯಿ ಶೋಭಾ ಚಂದ್ರಶೇಖರ್ ಹಿನ್ನೆಲೆ ಗಾಯಕಿ ಮತ್ತು ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರು. ವಿಜಯ್ ಅವರಿಗೆ ವಿಧ್ಯಾ ಎಂಬ ಹೆಸರಿನ ತಂಗಿ ಇದ್ದಳು, ಆದರೆ ಆಕೆ ಕೇವಲ 2 ವರ್ಷದವಳಿದ್ದಾಗ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಂಗಿಯ ಅಗಲಿಕೆ ಬಾಲಕ ವಿಜಯ್‌ನನ್ನು ತುಂಬಾ ಅಂತರ್ಮುಖಿಯನ್ನಾಗಿ ಮಾಡಿತ್ತು. ಬಹಳ ತುಂಟ ಮತ್ತು ಮಾತುಗಾರನಾಗಿದ್ದ ಹುಡುಗ ಈ ಕಾರಣದಿಂದಲೇ ತುಂಬಾ ಮೌನಿಯಾದ ಎಂದು ಹೇಳಲಾಗುತ್ತದೆ.

ವಿಜಯ್ ಅವರು ಪ್ರಾಥಮಿಕ ಶಿಕ್ಷಣವನ್ನು ಕೊಡಂಬಾಕ್ಕಂನ ಫಾತಿಮಾ ಶಾಲೆಯಲ್ಲಿ ಆರಂಭಿಸಿ, ನಂತರ ವಿರುಗಂಬಾಕ್ಕಂನ ಬಾಲಲೋಕ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಚೆನ್ನೈನ ಲಯೋಲಾ ಕಾಲೇಜ್ ನಲ್ಲಿ ವಿಷುವಲ್ ಕಮ್ಯುನಿಕೇಷನ್ ಪದವಿಗೆ ಸೇರಿದರು. ಆದರೆ ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ನಟನೆಯತ್ತಾ ಸಂಪೂರ್ಣ ಗಮನ ಹರಿಸಿದರು.

ಸಿನಿಮಾ ಕುಟುಂಬದ ಹಿನ್ನೆಲೆಯಿಂದಾಗಿ ವಿಜಯ್‌ಗೆ ಬಾಲ್ಯದಲ್ಲೇ ಅವಕಾಶಗಳು ಬಂದವು. 10ನೇ ವಯಸ್ಸಿನಲ್ಲಿ, ತಂದೆ ನಿರ್ದೇಶನದ ‘ವೆಟ್ರಿ’ (1984) ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಆ ನಂತರ ಕುಡುಂಬಂ (1984), ನಾನ್ ಸಿಗಪ್ಪು ಮನಿತನ್ (1985), ವಸಂತ ರಾಗಂ (1986), ಸಟ್ಟಂ ಒರು ವಿಲಯಾಟ್ಟು (1987) ಮುಂತಾದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರು. ತಂದೆಯ ಸೆಟ್‌ನಲ್ಲೇ ಬೆಳೆದಿದ್ದರಿಂದ ಸಿನಿಮಾ ತಂತ್ರಜ್ಞಾನ, ನಟನೆ ಎಲ್ಲವೂ ಸಹಜವಾಗಿ ರಕ್ತಗತವಾಯಿತು. ಅದರಂತೆ 18ನೇ ವಯಸ್ಸಿನಲ್ಲಿ, 1992ರಲ್ಲಿ ತಂದೆ ನಿರ್ದೇಶನದ ‘ನಾಳೈಯ ತೀರ್ಪು’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ಆದರೆ ಚಿತ್ರ ಯಶಸ್ಸು ಕಾಣಲಿಲ್ಲ. ಇದರಿಂದ ಹಿಂಜರಿಯದೆ, 1993ರ ‘ಸೆಂದೂರಪಾಂಡಿ’ ಚಿತ್ರದಲ್ಲಿ ವಿಜಯಕಾಂತ್ ಜೊತೆ ನಟಿಸಿ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

‘ರಸಿಗನ್’ (1994) ಚಿತ್ರದಿಂದ ಅವರಿಗೆ ‘ಇಳಯದಳಪತಿ’ ಎಂಬ ಬಿರುದು ಮೊದಲ ಬಾರಿಗೆ ದೊರೆಯಿತು. ‘ಪೂವೇ ಉನಕ್ಕಾಗ’ (1996) ಚಿತ್ರ ವಿಜಯ್ ಅವರ ವೃತ್ತಿಜೀವನದ ಮೊದಲ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಯುವಕರ ಮನಗೆದ್ದರು. ‘ಕಾದಲುಕ್ಕು ಮರಿಯಾದೈ’ (1997), ‘ತುಳ್ಳಾದ ಮನಮುಂ ತುಳ್ಳುಂ’ (1999), ‘ಕುಶಿ’ (2000), ‘ಫ್ರೆಂಡ್ಸ್’ (2001) ಚಿತ್ರಗಳು ವಿಜಯ್‌ರನ್ನು ಕುಟುಂಬ ಪ್ರೇಕ್ಷಕರ ನೆಚ್ಚಿನ ನಟನನ್ನಾಗಿ ಮಾಡಿದವು.

2003ರ ‘ತಿರುಮಲೈ’ ಚಿತ್ರದ ಮೂಲಕ ಆಕ್ಷನ್ ಹೀರೋ ಆಗಿ ಬದಲಾದರು. ನಂತರ ‘ಗಿಲ್ಲಿ’ (2004), ‘ತಿರುಪಾಚಿ’ (2005), ‘ಪೋಕ್ಕಿರಿ’ (2007), ‘ತುಪ್ಪಾಕಿ’ (2012), ‘ಮೆರ್ಸಲ್’ (2017), ‘ಸರ್ಕಾರ್’ (2018) ಮುಂತಾದ ಚಿತ್ರಗಳು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದವು. ತಮಿಳುನಾಡಿನಲ್ಲಿ ಮಾತ್ರವಲ್ಲ, ಕೇರಳ, ಕರ್ನಾಟಕ, ವಿದೇಶಗಳಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಯಿತು. ವಿಜಯ್ ಒಟ್ಟು 69 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದು, ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ ಎಂಬುದು ಕೂಡ ವಿಶೇಷವಾಗಿದೆ.

ಬಹುಮುಖ್ಯವಾಗಿ ವಿಜಯ್ ತಮ್ಮ ಅಭಿಮಾನಿ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ’ ಮೂಲಕ ಶಿಕ್ಷಣ, ಆರೋಗ್ಯ ಮತ್ತು ವಿಪತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡರು. 2024ರಲ್ಲಿ ಸಿನಿಮಾ ರಂಗಕ್ಕೆ ವಿದಾಯ ಹೇಳಿ, ‘ತಮಿಳಗ ವೆಟ್ರಿ ಕಳಗಂ’ (TVK) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 233 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದರು. ‘ಜನ ನಾಯಗನ್’ 2026 ರಲ್ಲಿ ಬಿಡುಗಡೆಯಾಗಿ, ನಟನೆಯಿಂದ ಜನಸೇವೆಗೆ ಸೇತುವೆಯಾಯಿತು. ಅದರಂತೆ ಈಗ ತಮಿಳುನಾಡಿನ ರಾಜಕಾರಣದಲ್ಲಿ ವಿಜಯ್ ಹೊಸದೊಂದು ಇತಿಹಾಸವನ್ನು ಬರೆದಿದ್ದಾರೆ.

ಬಾಲನಟನಾಗಿ ತಂದೆಯ ನೆರಳಲ್ಲಿ ಬೆಳೆದು, ಸೋಲುಗಳನ್ನು ಮೆಟ್ಟಿನಿಂತು, ‘ತಳಪತಿ’ಯಾಗಿ ಕೋಟ್ಯಂತರ ಹೃದಯಗಳನ್ನು ಗೆದ್ದು, ಈಗ ಜನನಾಯಕನಾಗಲು ಹೊರಟಿರುವ ವಿಜಯ್ ಅವರ ಜೀವನ ನಿಜಕ್ಕೂ ಸಿನಿಮೀಯ. ತಂಗಿಯ ಅಗಲಿಕೆಯ ನೋವಿನಿಂದ ಮೌನಿಯಾದ ಹುಡುಗ, ಇಂದು ಲಕ್ಷಾಂತರ ಜನರ ಧ್ವನಿಯಾಗಲು ಸಜ್ಜಾಗಿದ್ದಾರೆ. ಅವರ ಪಯಣ “ಕಠಿಣ ಪರಿಶ್ರಮ ಮತ್ತು ಅದೃಷ್ಟದಲ್ಲಿ ನಂಬಿಕೆ ಇಡಿ”ಎಂಬ ಅವರ ಮಾತಿಗೆ ಸಾಕ್ಷಿಯಾಗಿದೆ.

Share this Article
Leave a comment