ಕರ್ನಾಟಕದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಎಡವಿದ್ದೆಲ್ಲಿ?

ಮಣಿಕಂಠ ಜನತಾ ರಾಯಭಾರಿ
2 Min Read

ಮೈಸೂರು: ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಏ.9 ರಂದು ಮತದಾನ ನಡೆದು, ಮೇ 4 ರಂದು ಫಲಿತಾಂಶ ಪ್ರಕಟವಾಯಿತು. ಬಿಜೆಪಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲೂ ಸೋಲನ್ನು ಅನುಭವಿಸಿದ್ದಾರೆ. ಎರಡು ಕ್ಷೇತ್ರದ ಮಟ್ಟದಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತು ಪ್ರಚಾರದ ವೈಖರಿಯನ್ನು ಗಮನಿಸಿದರೆ ಬಿಜೆಪಿ ಎದುರಿಸಿದ ಪ್ರಮುಖ ಸವಾಲುಗಳನ್ನು ಹೀಗೆ ಗುರುತಿಸಬಹುದಾಗಿದೆ.

*ಅನುಕಂಪದ ಅಲೆ ಎದುರಿಸುವಲ್ಲಿ ವಿಫಲ: ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಮೃತರ ಕುಟುಂಬಕ್ಕೆ ಅಥವಾ ಅವರ ಪಕ್ಷಕ್ಕೆ ಅನುಕಂಪದ ಮತಗಳು ಹರಿದು ಬರುತ್ತವೆ. ಬಿಜೆಪಿ ಈ ಅನುಕಂಪದ ಅಲೆಯನ್ನು ತಡೆಯಲು ಪರಿಣಾಮಕಾರಿ ಪ್ರತಿತಂತ್ರ ರೂಪಿಸುವಲ್ಲಿ ಹಿಂದೆ ಬಿದ್ದಿತು.

*ಅಭ್ಯರ್ಥಿ ಆಯ್ಕೆಯ ಗೊಂದಲ: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡಿತ್ತು. ಕೊನೆಯ ಕ್ಷಣದವರೆಗೂ ಟಿಕೆಟ್ ಘೋಷಣೆ ವಿಳಂಬವಾಗುವುದು, ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ. ಉಪಚುನಾವಣೆಯಲ್ಲೂ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕರಿಗೆ ಟಿಕೆಟ್ ತಪ್ಪಿದ್ದು, ಬಂಡಾಯದ ಭೀತಿ ಸೃಷ್ಟಿಸಿತು. ಇದು ಒಗ್ಗಟ್ಟಿನ ಕೊರತೆ ಮತ ವಿಭಜನೆಗೆ ದಾರಿ ಮಾಡಿಕೊಟ್ಟಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

*ಸ್ಥಳೀಯ ಸಮೀಕರಣ vs ರಾಷ್ಟ್ರೀಯ ವಿಷಯಗಳು: ಉಪಚುನಾವಣೆಗಳು ಹೆಚ್ಚಾಗಿ ಸ್ಥಳೀಯ ವಿಷಯಗಳ ಮೇಲೆ ನಡೆಯುತ್ತವೆ. ರಸ್ತೆ, ನೀರು, ಉದ್ಯೋಗ, ಜಾತಿ ಸಮೀಕರಣಗಳು ಇಲ್ಲಿ ನಿರ್ಣಾಯಕ. ಆದರೆ ಬಿಜೆಪಿ ಪ್ರಚಾರದಲ್ಲಿ ರಾಷ್ಟ್ರೀಯ ನಾಯಕತ್ವ ಮತ್ತು ಕೇಂದ್ರದ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದ್ದು, ಕ್ಷೇತ್ರದ ಜ್ವಲಂತ ಸಮಸ್ಯೆಗಳ ಚರ್ಚೆ ಹಿಂದೆ ಬಿದ್ದಿತು ಎಂಬ ಆರೋಪ ಕೇಳಿಬಂದಿತು. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಪ್ರಬಲವಾಗಿರುವ ಸ್ಥಳೀಯ ಜಾತಿ ಲೆಕ್ಕಾಚಾರವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ಎಡವಿತು

*ಸಂಘಟನಾತ್ಮಕ ಕೊರತೆ ಮತ್ತು ಒಳಜಗಳ:ಚುನಾವಣಾ ವೇಳಾಪಟ್ಟಿ ಮಾ.16ರಿಂದ ಆರಂಭವಾಗಿ ಏ.9ರಂದು ಮತದಾನ ನಡೆಯಿತು. ಕೇವಲ 24 ದಿನಗಳ ಪ್ರಚಾರ ಅವಧಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಮುಖ್ಯವಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಹಳೆಯ ಮತ್ತು ಹೊಸ ಕಾರ್ಯಕರ್ತರ ನಡುವೆ ಸಮನ್ವಯದ ಕೊರತೆ, ಟಿಕೆಟ್ ಆಕಾಂಕ್ಷಿಗಳ ಮುನಿಸು ಬಿಜೆಪಿಯ ಮನೆ-ಮನೆ ಪ್ರಚಾರದ ವೇಗಕ್ಕೆ ತಡೆಯಾಯಿತು.

*ಆಡಳಿತ ವಿರೋಧಿ ಅಲೆ ಮೀರುವ ತಂತ್ರದ ಕೊರತೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ, ಉಪಚುನಾವಣೆಯನ್ನು ಆಡಳಿತ ಪಕ್ಷ ತನ್ನ ಜನಪ್ರಿಯ ಯೋಜನೆಗಳ ಜನಾದೇಶವೆಂದು ಬಿಂಬಿಸಿತು. ಬಿಜೆಪಿ ಇದಕ್ಕೆ ಪ್ರತಿಯಾಗಿ ಬಲವಾದ ಪರ್ಯಾಯ ನಿರೂಪಣೆಯನ್ನು ಮತದಾರರ ಮುಂದಿಡುವಲ್ಲಿ ಯಶಸ್ವಿಯಾಗಲಿಲ್ಲ. ಕೇವಲ ಆಡಳಿತ ವೈಫಲ್ಯವನ್ನು ಟೀಕಿಸಿದರೆ ಸಾಲದು, ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗಲಿಲ್ಲ.

*ಕೊನೆಯ ಮಾತುಗಳು: ಉಪಚುನಾವಣೆಗಳು ಪಕ್ಷಗಳಿಗೆ ಜನಾಭಿಪ್ರಾಯ ಅಳೆಯುವ ಒಂದು ಪೂರ್ವ ಸಿದ್ಧತಾ ಪರೀಕ್ಷೆ ಎಂದು ಕರೆಯಬಹುದಾಗಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದ ಫಲಿತಾಂಶ ಬಿಜೆಪಿಗೆ 2028ರ ಸಾರ್ವತ್ರಿಕ ಚುನಾವಣೆಗೆ ಪಾಠವಾಗಲಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಸ್ಥಳೀಯ ನಾಡಿಮಿಡಿತ ಅರಿಯುವುದು, ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಬಲಪಡಿಸುವುದು ಮತ್ತು ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡುವುದು ಮುಂದಿನ ದಿನಗಳಲ್ಲಿ ಬಿಜೆಪಿಯ ಮುಂದಿರುವ ದೊಡ್ಡ ಸವಾಲುಗಳಾಗಿವೆ.

Share this Article
Leave a comment