ಚಾಮರಾಜನಗರ: ಸಂವಿಧಾನದ ಮೂಲಕ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವಜನಾಂಗದ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಜನ್ನೂರು ಗ್ರಾಮದಲ್ಲಿ ವಿಶ್ವ ರತ್ನ, ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಪ್ರಯುಕ್ತ ನಡೆದ ಭೀಮೋತ್ಸವ -2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬುದ್ದ, ಬಸವ ಅಂಬೇಡ್ಕರ್ ಅವರ ಭಾವಚಿತ್ರವನ್ನು ಒಂದೆಡೆ ಇಟ್ಟು ಪುಷ್ಪ ನಮನ ಸಲ್ಲಿಸಿದ ಗ್ರಾಮಸ್ಥರ ಪ್ರೌಢಿಮೆ ಮೆಚ್ಚುವಂತಾಗಿದೆ. ಮೈಸೂರಿನ ಜಕ್ಕಹಳ್ಳಿಯಲ್ಲಿ ಎಲ್ಲಾ ಜಾತಿಯ ಜನರು ಸೇರಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿ, ಹಬ್ಬದ ಮಾದರಿಯಲ್ಲಿ ಎಲ್ಲಾ ಸಮುದಾಯದವರು ಸೇರಿ ಆಚರಣೆ ಮಾಡಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಜಾತಿಯ ನಾಯಕರಲ್ಲ. ಎಲ್ಲಾ ವರ್ಗದವರಿಗೂ ಸಂವಿಧಾನವನ್ನು ನೀಡಿ, ಎಲ್ಲರಿಗೂ ಸಮಾನವಾದ ಅವಕಾಶ ನೀಡಿದ್ದಾರೆ. ಇಂಥ ಮಹಾಪುರುಷರ ಜಯಂತಿ ಎಲ್ಲ ವರ್ಗದವರು ಸ್ವಾಭಿಮಾನದ ದಿನವಾಗಿ ಆಚರಣೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಅನುದಾನದ ಜೊತೆಗೆ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ದನಾಗಿದ್ದೇನೆ. ಅದೇ ರೀತಿ ಜನ್ನೂರು ಗ್ರಾಮದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ೧.೭೫ ಕೋಟಿ ರೂ.ಗಳನ್ನು ನೀಡಿದ್ದೇವೆ. ನಮ್ಮ ತಂದೆ ಬಿ. ರಾಚಯ್ಯ ಅವರು ಈ ಹಿಂದೆ ಈ ಗ್ರಾಮದಲ್ಲಿ ನಿವೇಶನ ನೀಡಿದ್ದರು. ನಾನು ಶಾಸಕನಾಗಿ ಈ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. ಅದೇ ರೀತಿ ಈ ಗ್ರಾಮದ ಕೆರೆಯ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಗ್ರಾಮಸ್ಥರ ಮನವಿಯಂತೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ. ನೀಡುತ್ತೇನೆ. ಇನ್ನುಳಿದ ಅನುದಾನವನ್ನು ಸಮಾಜ ಕಲ್ಯಾಣ ಸಚಿವರು ಸಂಸದರಿಂದ ಬಿಡುಗಡೆ ಮಾಡಿಸಿಕೊಂಡು, ಸುಸಜ್ಜಿತವಾದ ಭವನವನ್ನು ನಿರ್ಮಿಸಿಕೊಳ್ಳಿ ಎಂದು ಹೇಳಿದರು.
ಸರ್ವವರಿಗೂ ಸಮ ಬಾಳ್ವೆಯನ್ನು ನೀಡುವ ಜೊತೆಗೆ ನೆಮ್ಮದಿಯಿಂದ ಜೀವನ ಮಾಡಲು ಸಂವಿಧಾನ ಕಾರಣವಾಗಿದೆ. ಪ್ರತಿ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳುಗಳಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಸ್ವಾಭಿಮಾನದಿಂದ ನಡೆಯುವ ಜಯಂತಿ ಕಾರ್ಯಕ್ರಮಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗಬೇಕು. ಅವರ ಸ್ಮರಣೆಯೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಬೇಕು. ಇಂಥ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರ ಸಾಧನೆಗೆ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದರು.
ತಿ. ನರಸೀಪುರದ ನಳಂದ ಬುದ್ದ ವಿಹಾರದ ಪೂಜ್ಯ ಬೋಧಿರತ್ನ ಬಂತೇಜಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಭೌದ್ದ ಧರ್ಮವನ್ನು ಸ್ವೀಕಾರ ಮಾಡಿದರು. ಅಲ್ಲದೇ ಅವರು ನನ್ನ ಜನರು ಸಹ ಭೌದ್ದ ಧರ್ಮದತ್ತ ಸಾಗಿ ಸಮಾನತೆಯನ್ನು ಹೊಂದಬೇಕು. ಸ್ವಾಭಿಮಾನದ ಜೀವನ ನಡೆಸುವಂತಾಗಬೇಕು ಎಂಬ ಆಶಯವನ್ನು ಹೊಂದಿದ್ದರು. ಹೀಗಾಗಿ ತಾವೆಲ್ಲರೂ ಜಾತಿ ವ್ಯವಸ್ಥೆ, ಕಂದಾಚಾರ ಹಾಗೂ ಅನಿಷ್ಠ ಪದ್ದತಿಗಳನ್ನು ಬಿಟ್ಟು ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು ಎಂದರು.
ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಬಿಪಿನ್ ನಾಗರಾಜು ಅವರು ಮುಖ್ಯ ಭಾಷಣ ಮಾಡಿ, ದೇಶಕ್ಕೆ ಸರ್ವ ಶೇಷ್ಠವಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ನಮಗೆ ಮೊದಲ ದೇವರು. ಅವರ ತತ್ವ ಸಿದ್ದಾಂತಗಳನ್ನು ಓದಿಕೊಂಡು ಅದರಂತೆ ನಡೆದುಕೊಂಡರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಸಾಗಲು ಸಾಧ್ಯವಿದೆ. ಮೌಢ್ಯ ಮತ್ತು ಮದ್ಯಪಾನವನ್ನು ತ್ಯಜಿಸಿ, ಪ್ರಮೃದ್ದ ಭಾರತ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಅಧಿಕಾರಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಗೋವಿಂದರಾಜು, ಮಹದೇವಸ್ವಾಮಿ, ತಮ್ಮಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷೆ ರತ್ನಮ್ಮ, ಪರಶಿವಮೂರ್ತಿ, ನಾಗಯ್ಯ, ಓಡಿಪಿ ನಾಗರಾಜು, ಅಬಕಾರಿ ಶಿವಣ್ಣ, ಜನ್ನೂರು ರೇವಣ್ಣ, ಶಿವು, ನಾಗರಾಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.