ಮೈಸೂರು: ಈ ರಾಜ್ಯವೊಂದರಲ್ಲಿ “ಮಹಾತ್ಮ ಗಾಂಧಿ ಮೂರ್ತಿ ರಕ್ಷಣಾ ಕಾಯ್ದೆ” ಎಂಬ ಕಠಿಣ ಕಾನೂನು ಜಾರಿಯಲ್ಲಿದ್ದು, ಅದರಂತೆ ಅಂಬೇಡ್ಕರ್ ಅವರ ಹೆಸರಿನಲ್ಲೂ ಕಠಿಣ ಕಾನೂನು ರೂಪಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲಿನ ಅಪಮಾನಕ್ಕೆ ಕಡಿವಾಣ ಹಾಕಬಹುದಾಗಿದೆ.
ಹೌದು ಸ್ನೇಹಿತರೇ, ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ, ಮೂರ್ತಿಗಳ ಮೇಲೆ ಕಿಡಿಗೇಡಿಗಳು ನಿರಂತರವಾಗಿ ಅಪಮಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇರಳ ಸರ್ಕಾರ 2021ರಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಿದ “ಮಹಾತ್ಮ ಗಾಂಧಿ ಮೂರ್ತಿ ಸಂರಕ್ಷಣಾ ಕಾಯ್ದೆ” ಕುರಿತು ನಾವೆಲ್ಲರೂ ತಿಳಿದುಕೊಳ್ಳಲೇ ಬೇಕಾಗಿದೆ. ಕೇರಳದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆ, ಭವನ ಹಾಗೂ ಭಾವಚಿತ್ರಗಳಿಗೆ ನಿರಂತರವಾಗಿ ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದರು. ಸಾಮಾನ್ಯ IPC ಅಡಿ ಕೇಸ್ ದಾಖಲಿಸಿ 2 ವರ್ಷ ಜೈಲು ಕೊಟ್ಟರೂ ಅಪಮಾನ ನಿಲ್ಲಲಿಲ್ಲ. ಹಾಗಾಗಿ ಈ ದುಷ್ಕೃತ್ಯವನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರ 2021 ಆಗಸ್ಟ್ 10 ರಂದು ಕೇರಳ ವಿಧಾನಸಭೆ ‘The Kerala Mahatma Gandhi Statue and Memorials Protection Act, 2021’ ಎಂಬ ಕಾಯ್ದೆಯನ್ನು ಅಂಗೀಕರಿಸಿತು.
ಕಠಿಣವಾದ ಪ್ರತ್ಯೇಕ ಕಾಯ್ದೆ: ಕೇರಳ ಸರ್ಕಾರ ಜಾರಿಗೆ ತಂದಿರುವ ಗಾಂಧಿ ಮೂರ್ತಿಗಳ ಸಂರಕ್ಷಣಾ ಕಾಯ್ದೆ ಬಹಳ ಕಠಿಣವಾಗಿದ್ದು, ಶಿಕ್ಷೆ ಮತ್ತು ಹೆಚ್ಚಿನ ದಂಡವನ್ನು ಒಳಗೊಂಡಿದೆ. ಈ ಕಾರಣಕ್ಕೆ ಕೇರಳದಲ್ಲಿ ಗಾಂಧಿ ಭಾವಚಿತ್ರಗಳ ಮೇಲಿನ ಅಪಮಾನ ಗಣನೀಯವಾಗಿ ಕಡಿಮೆಯಾಗಿದೆ. ಈ ಕಾಯ್ದೆಯ ಪ್ರಕಾರ ಗಾಂಧಿ ಮೂರ್ತಿ, ಮಣಿ ಮಂಟಪ, ಫೋಟೋ, ಚಿತ್ರವನ್ನು ನಾಶ ಮಾಡುವುದು, ಅಪವಿತ್ರಗೊಳಿಸುವುದು, ಬಣ್ಣ ಎರಚುವುದು, ಬರೆಹ ಬರೆಯುವುದು, ಘನತೆಗೆ ಧಕ್ಕೆ ತರುವುದು ಎಲ್ಲವೂ ಅಪರಾಧವಾಗುತ್ತದೆ. ಆರೋಪಿಗೆ 3 ವರ್ಷದವರೆಗೆ ಜೈಲು ಶಿಕ್ಷೆ, ಕನಿಷ್ಠ 50,000 ರೂ. ದಂಡ ವಿಧಿಸಲಾಗುತ್ತದೆ. ಅದಲ್ಲದೇ ಬಹುಮುಖ್ಯವಾಗಿ ಹಾನಿಯಾದ ಮೂರ್ತಿಯ ಮೌಲ್ಯದ 5 ಪಟ್ಟು ಪರಿಹಾರವನ್ನೂ ಆರೋಪಿಯಿಂದ ವಸೂಲು ಮಾಡಲಾಗುತ್ತದೆ. ಈ ಕಾಯ್ದೆ ಅಡಿ ಪ್ರಕರಣವನ್ನು 6 ತಿಂಗಳೊಳಗೆ ವಿಚಾರಣೆ ಮುಗಿಸಬೇಕು ಎಂಬ ಷರತ್ತು ಇದ್ದು ಪೋಕ್ಸೋ ಕಾಯ್ದೆಯಂತೆ ವಿಶೇಷ ಕೋರ್ಟ್ ಗೆ ಅಧಿಕಾರವನ್ನು ನೀಡಲಾಗಿದೆ. ಈ ಕಾಯ್ದೆಯಲ್ಲಿ ದಂಡ ಕಟ್ಟದಿದ್ದರೆ ಆರೋಪಿಯ ಆಸ್ತಿ ಜಪ್ತಿ ಮಾಡಿ ಸರ್ಕಾರ ಮೂರ್ತಿ ರಿಪೇರಿ ಮಾಡುತ್ತದೆ. ಇದು ಜಾಮೀನು ರಹಿತ ಅಪರಾಧವಾಗಿದ್ದು, ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಬಹುದಾಗಿದೆ.

ಈ ಕಾಯ್ದೆ ಯಾಕೆ ವಿಶೇಷ?:ಸಾಮಾನ್ಯ IPC ಗಿಂತಲೂ ಕೇರಳ ವಿಶೇಷ ಕಾಯ್ದೆಯಲ್ಲಿ 3 ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಪರಿಹಾರವನ್ನು ವಸೂಲಿ ಮಾಡಲಾಗುತ್ತದೆ. ಆರೋಪಿಗೆ ಕೇವಲ ಜೈಲು ಶಿಕ್ಷೆ ಅಲ್ಲದೇ, ಆತನ ಜೇಬಿಗೆ ಕತ್ತರಿ ಬೀಳುತ್ತದೆ. ಒಂದು ವೇಳೆ 10 ಲಕ್ಷ ರೂ, ಮೌಲ್ಯದ ಮೂರ್ತಿಯನ್ನು ಕಿಡಿಗೇಡಿ ನಾಶಗೊಳಿಸಿದರೇ, ಆತ 50 ಲಕ್ಷ ರೂ, ಪರಿಹಾರವನ್ನು ಕೊಡಬೇಕಾಗುತ್ತದೆ. ಹಾಗಾಗಿ ಈ ಕಾಯ್ದೆ ಅತ್ಯಂತ ವಿಶೇಷವಾಗಿದ್ದು, ಕಠಿಣ ಶಿಕ್ಷೆ, ದಂಡ ಮತ್ತು ಪರಿಹಾರವನ್ನು ವಸೂಲಿ ಮಾಡುವುದರಿಂದ ಕೇರಳದಲ್ಲಿ ಗಾಂಧಿ ಪ್ರತಿಮೆ, ಭಾವಚಿತ್ರಕ್ಕೆ ಹಾನಿ ಮಾಡುವ ಸಾಹಸಕ್ಕೆ ಕಿಡಿಗೇಡಿಗಳು ಮನಸ್ಸು ಮಾಡುತ್ತಿಲ್ಲ. ಮಹಾತ್ಮ ಗಾಂಧಿಯಂತೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೂ ಸಮಾನ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಇಂತಹ ಕಠಿಣ ಕಾನೂನು ರೂಪಿಸುವ ಅಗತ್ಯವಿದೆ.
ತಮಿಳುನಾಡು ಸರ್ಕಾರ ಚಿಂತನೆ: ಈಗಾಗಲೇ ತಮಿಳುನಾಡು ಚುಕ್ಕಾಣಿ ಹಿಡಿದಿರುವ ಜೋಸೆಫ್ ವಿಜಯ್ ಅವರು ಅಂಬೇಡ್ಕರ್ ಪ್ರತಿಮೆ ಮತ್ತು ಭಾವಚಿತ್ರಕ್ಕೆ ಹಾನಿ ಮಾಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಕೇರಳ ಕಾಯ್ದೆಯಂತೆ ತಮಿಳುನಾಡಿನಲ್ಲೂ ವಿಶೇಷ ಕಾಯ್ದೆ ತರಲು ಚಿಂತನೆ ನಡೆಸಿದ್ದಾರೆ. “Dr. B.R. Ambedkar Statue & Constitution Memorials Protection Act” ಎಂಬ ಹೆಸರಿನಲ್ಲಿ ಕಾಯ್ದೆ ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಈ ಕಾಯ್ದೆಯಲ್ಲಿ 3 ವರ್ಷ ಜೈಲು, ಕನಿಷ್ಠ 1 ಲಕ್ಷ ದಂಡ ಹಾಗೂ ಹಾನಿಯ 5 ಪಟ್ಟು ಪರಿಹಾರ ವಸೂಲಿ ಮಾಡಲಾಗುತ್ತದೆ. 90 ದಿನದಲ್ಲಿ ಚಾರ್ಜ್ ಶೀಟ್ ಮತ್ತು 6 ತಿಂಗಳಲ್ಲಿ ತೀರ್ಪು ನೀಡುವ ವಿಶೇಷ ಕಾನೂನು ಜಾರಿಗೆ ವಿಜಯ್ ತಯಾರಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲೂ ಜಾರಿಗೆ ಆಗ್ರಹ: ರಾಜ್ಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡುವುದು ನಿರಂತರವಾಗಿ ನಡೆಯುತ್ತಿದ್ದು, ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಲು ಮನಸ್ಸು ಮಾಡಬೇಕಿದೆ. ಎಸ್ಸಿ, ಎಸ್ಟಿ ಕಾಯ್ದೆ ಇದ್ದರೂ,ಪ್ರತ್ಯೇಕ ಕಾಯ್ದೆ ಇದ್ದರೆ ಪೊಲೀಸರು ತಕ್ಷಣ ಕೇಸ್ ಹಾಕುತ್ತಾರೆ, ವಿಚಾರಣೆ ಬೇಗ ಆಗುತ್ತದೆ. ಕೇರಳ ಮಾದರಿ ಅನುಸರಿಸಿ ತಮಿಳುನಾಡು, ಮಹಾರಾಷ್ಟ್ರದಲ್ಲಿ “ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ರಕ್ಷಣಾ ಕಾಯ್ದೆ” ಜಾರಿಗೆ ತರುವಂತ ಕೂಗು ಹೆಚ್ಚಾಗಿದೆ. ಒಟ್ಟಾರೆಯಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅಪಮಾನ ನಿಲ್ಲಬೇಕಾದರೆ ಕೇರಳದಂತೆ ಕಠಿಣ ಕಾನೂನು ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನಪ್ರತಿನಿಧಿಗಳು ಯಾವ ನಿಲುವು ತಾಳಕತ್ತಾರೋ ಕಾದು ನೋಡಬೇಕಿದೆ.
“ಜನತಾರಾಯಭಾರಿ” ಓದುಗರೇ ಕರ್ನಾಟಕ/ತಮಿಳುನಾಡಿನಲ್ಲೂ “ಅಂಬೇಡ್ಕರ್ ರಕ್ಷಣಾ ಕಾಯ್ದೆ” ಬೇಕಾ? ಬೇಕಾದರೆ ಆ ಕಾಯ್ದೆಯ 3 ಪ್ರಮುಖ ಅಂಶ ಏನಿರಬೇಕು ಅಂತ ಕಮೆಂಟ್ ಮಾಡಿ. ಇಂತಹ ವಿಶೇಷ ಸುದ್ದಿಗಳಿಗೆ ಜನತಾ ರಾಯಭಾರಿ ವೆಬ್ ಸೈಟ್ ಫಾಲೋ ಮಾಡಿ…