ಲಕ್ನೋ: 2007 ರಲ್ಲಿ ದಲಿತ-ಬ್ರಾಹ್ಮಣ-ಹಿಂದುಳಿದ ವರ್ಗಗಳ ಸರ್ವ ಸಮಾಜ ಕೂಟದಿಂದ ಗೆದ್ದಂತೆ, 2027ರಲ್ಲೂ ಅದೇ ಮಾದರಿ ಮರುಕಳಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಭರವಸೆ ವ್ಯಕ್ತಪಡಿಸಿದರು.
ಲಕ್ನೋದ ಮಾಲ್ ಅವೆನ್ಯೂನಲ್ಲಿರುವ ಬಿಎಸ್ಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಪಕ್ಷದ ಪ್ರಮುಖ ಮುಖಂಡರುಳ ಸಭೆ ನಡೆಸಿದ ಮಾಯಾವತಿ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದರು.

ಚುನಾವಣೆಯಲ್ಲಿ ಹೊಸ ಸವಾಲುಗಳು ಎದುರಾಗುತ್ತಿವೆ. ಪಕ್ಷದ ಸಿದ್ಧತೆಗಳನ್ನು ಹೆಚ್ಚು ಸಮರ್ಥ ಮತ್ತು ಜಾಗರೂಕವಾಗಿಸಬೇಕು. ಪ್ರತಿ ಬೂತ್ ಮಟ್ಟದವರೆಗೂ ಸಂಘಟನೆ ಬಲಪಡಿಸಬೇಕು. 2007ರಲ್ಲಿ ದಲಿತ-ಬ್ರಾಹ್ಮಣ-ಹಿಂದುಳಿದ ವರ್ಗಗಳ ಸರ್ವ ಸಮಾಜ ಕೂಟದಿಂದ ಗೆದ್ದಂತೆ 2027ರಲ್ಲೂ ಅದೇ ಮಾದರಿ ಮರುಕಳಿಸಬಹುದು. ಆ ಸಂದರ್ಭದಲ್ಲಿ ಬ್ರಾಹ್ಮಣರು, ದಲಿತರು, ಬಡವರು, ಹಿಂದುಳಿದವರು ನಿರ್ಲಕ್ಷ್ಯ, ಅಭದ್ರತೆಯಿಂದ ಹೊರಬಂದು ಪಕ್ಷ ಮತ್ತು ಸರ್ಕಾರದಲ್ಲಿ ಗೌರವ, ಪಾಲುದಾರಿಕೆ ಪಡೆದಿದ್ದರು ಎಂದು ಹೇಳಿದರು.
ಈ ವೇಳೆ “ಹಾಥಿ ವಾಲೆ ಬಟನ್ ಕೋ ದಬಾವೋ, ಸತ್ತಾ ಮೇ ವಾಪಸ್ ಲಾವೋ” (ಆನೆಯ ಗುರುತಿನ ಬಟನ್ ಒತ್ತಿ, ಮತ್ತೆ ಅಧಿಕಾರಕ್ಕೆ ತನ್ನಿ) ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿಸ್ಪರ್ಧಿ ಪಕ್ಷಗಳು ಮೋಸದ ರಾಜಕಾರಣ ಮಾಡುತ್ತಿವೆ. ಧ್ರುವೀಕರಣ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ರಾಜಕಾರಣ ಮಾಡಿ, ನಂತರ ಜನರ ಕಲ್ಯಾಣ ಮರೆತುಬಿಡುತ್ತಿವೆ. ಈ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿ ಮತವನ್ನು ರಕ್ಷಿಸುವುದು ಮುಖ್ಯ. ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಗೆಲುವಿನತ್ತ ಸಾಗಬೇಕಿದೆ. ಇತ್ತೀಚೆಗೆ 5 ರಾಜ್ಯಗಳಲ್ಲಿ ನಡೆದ ಚುನಾವಣೆಗಳಿಂದ ಪಾಠ ಕಲಿಯಬೇಕು ಎಂದು ಸೂಚಿಸಿದರು.