ಚಾಮರಾಜನಗರ: ತಾಲೂಕಿನ ಮಸಣಾಪುರ ಘಟನೆಗೆ ಸಂಬಂಧಿಸಿದಂತೆ ಉಪ್ಪಾರ ಸಮುದಾಯ ಮತ್ತು ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ವತಿಯಿಂದ ಕರೆ ನೀಡಿದ್ದ ಪ್ರತಿಭಟನೆಗೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಕಿಡಿಗೇಡಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಮತ್ತು ಕಲ್ಲುಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ದೀಪಗಳು ಮತ್ತು ಭಾವಚಿತ್ರವನ್ನು ಜಖಂಗೊಳಿಸಿ ಅಪಮಾನ ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸಿ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮತ್ತು ಗಡಿಪಾರು ಮಾಡಿ ಕಠಿಣ ಶಿಕ್ಷೆಗೆ ಒತ್ತಾಯಿಸಿ ಜೂ.19 ರ ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಸೂಕ್ತ ರಕ್ಷಣೆಯನ್ನು ನೀಡುವಂತೆ ಕೋರಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಜಿಲ್ಲಾ ಉಪ್ಪಾರ ಸಂಘಟನೆಗಳ ಒಕ್ಕೂಟ ಹಾಗೂ ಗಡಿಮನೆ, ಕಟ್ಟೆಮನೆ ಸಹಯೋಗದಲ್ಲೂ ಉಪ್ಪಾರ ಸಮುದಾಯದ ಚಂದ್ರು ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದಿರುವ ವಿಚಾರವಾಗಿ ಹಾಗೂ ಆರೋಪಿತನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಯಳಂದೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಎರಡೂ ಪ್ರಕರಣಗಳು ಸಹ ತನಿಖೆಯಲ್ಲಿರುತ್ತವೆ.
ಉಪ್ಪಾರ ಸಮುದಾಯ ಹಾಗೂ ಪರಿಶಿಷ್ಟ ಜನಾಂಗದ ಬಲಗೈ ಸಮುದಾಯಗಳು ಜಿಲ್ಲೆಯಲ್ಲಿ ಎರಡು ಪ್ರಬಲ ಕೋಮುಗಳಾಗಿದ್ದು, ಪ್ರತಿಭಟನೆಯನ್ನು ಕೈಗೊಂಡಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಮತ್ತೊಂದು ಕೋಮಿನ ಬಗ್ಗೆ ಅವಹೇಳನಕಾರಿ ಘೋಷಣೆಗಳನ್ನು ಕೂಗುವುದು ಹಾಗೂ ಭಾಷಣ ಮಾಡುವ ನಾಯಕರುಗಳು ಪ್ರಚೋದನಕಾರಿಯಾಗಿ ಭಾಷಣ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಘ್ನಗೊಳಿಸುವ ಸಾಧ್ಯತೆ ಇರುತ್ತದೆ.
ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗುವ ಸಾಧ್ಯತೆಗಳಿದ್ದು ಹಾಗೂ ಇನ್ನು ಮುಂಬರುವ ದಿನಗಳಲ್ಲಿ ಉಭಯ ಕೋಮುಗಳ ನಡುವೆ ಕೋಮು ಸಾಮರಸ್ಯ ಹಾಳಾಗುವ ಬಗ್ಗೆ ಗುಪ್ತ ಮಾಹಿತಿಯಿಂದ ತಿಳಿದುಬಂದಿರುತ್ತದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಎರಡೂ ಕೋಮುಗಳ ನಡುವಿನ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.