ಓ ಪೋಷಕರೇ ನಿಮ್ಮ ಮಕ್ಕಳ ಭವಿಷ್ಯವನ್ನು ಬಲ್ಲಿರಾ?

ಮಣಿಕಂಠ ಜನತಾ ರಾಯಭಾರಿ
7 Min Read

ಜಗತ್ತಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಹಾಗೂ ಮಕ್ಕಳ ಬದುಕಿಗೆ ಅವರವರ ಪೋಷಕರೇ ಜವಾಬ್ದಾರಿ. ಏಕೆಂದರೇ ಮಕ್ಕಳು 18ವರ್ಷ ವಯಸ್ಸಿಗೆ ಬರುವವರೆಗೂ ಸ್ವಂತ ಆಲೋಚನೆ ಮಾಡುವ ಹಾಗೂ ನಿರ್ಧಾರ ಕೈಗೊಳ್ಳುವಷ್ಟು ತಿಳುವಳಿಕೆ ಹೊಂದಿರುವುದಿಲ್ಲ. ಅವರು ತಂದೆ-ತಾಯಿ ಅಥವಾ ಪೋಷಕರ ಆಶ್ರಯದಲ್ಲಿರುತ್ತಾರೆ. ಇಂತಹ ಮಕ್ಕಳಿಗೆ ಎಲ್ಲಾ ತಂದೆ-ತಾಯಿ ಹಾಗೂ ಪೋಷಕರು ಸಹ ಪ್ರಾಥಮಿಕ ಹಂತದಲ್ಲೇ ಒಂದು ಉತ್ತಮವಾದ ಬದುಕನ್ನು ಕಟ್ಟಿಕೊಡಲು ಮುಂದಾಗಬೇಕು. ಅದಕ್ಕಾಗಿ ಮೊದಲು ಒಳ್ಳೆಯ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೇ ಅವರು ಮುಂದೆ ಒಂದು ಉದ್ಯೋಗವನ್ನು ಪಡೆದುಕೊಳ್ಳಲು ಅದು ಪೂರ್ಣ ಪ್ರಮಾಣದ ಸಹಕಾರಿಯಾಗುತ್ತದೆ. ಇಲ್ಲಿ ಯಾಕೆ ಉದ್ಯೋಗವನ್ನೇ ಮುಖ್ಯವಾಗಿರಿಸಿಕೊಂಡು ಶಿಕ್ಷಣ ಕೊಡಿಸಬೇಕು ಎಂಬುದನ್ನು ಚರ್ಚೆಮಾಡುತ್ತೇವೆಂದರೇ; ಭಾರತದಲ್ಲಿ 1992ರ ನಂತರ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಕ್ಷಾಂತರ ಯುವಕರು ಪದವಿಗಳನ್ನು ಪೂರೈಸಿ ಹೊರಬರುತ್ತಿರುವ ಹೊತ್ತಿನಲ್ಲಿ ಉದ್ಯೋಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸೃಷ್ಟಿಯಾಗುತ್ತಿರುವುದು ಒಂದು ರೀತಿಯ ದುರಂತ. ಇದಕ್ಕೆ ಕಾರಣವೇನು ಎಂದು ಯೋಚನೆ ಮಾಡುವಾಗ ನಾವು ತಪ್ಪು ತಪ್ಪು ಮಾಹಿತಿಗಳನ್ನು ಹಂಚುತ್ತೇವೆ. ಅದೇನೆಂದರೇ, ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ, ಈ ಜನಸಂಖ್ಯೆ ಸ್ಫೋಟದಿಂದ ಉದ್ಯೋಗದ ಸಮಸ್ಯೆ ಇದೆ ಎಂಬುದಾಗಿ. ಆದರೇ ಸಮಸ್ಯೆ ಅದಲ್ಲ. ಹೇಗೆಂದರೇ ಭಾರತದಲ್ಲಿ ಜನಸಂಖ್ಯೆಯ ಜೊತೆ-ಜೊತೆಗೇ ಅಧಿಕವಾಗಿ ಉದ್ಯೋಗ ಸೃಷ್ಟಿಮಾಡುವಂತಹ ಕೈಗಾರಿಕೋದ್ಯಮಗಳು, ಐಟಿ-ಬಿಟಿ ಕಂಪನಿಗಳು ಅದರ 6 ಪಟ್ಟು ಬೆಳೆದಿವೆ. ಹಾಗಾದರೇ ನಿಜವಾದ ಸಮಸ್ಯೆ ಯಾವುದು?!

ನೋಡಿ, 1992ನೇ ವರ್ಷ ಭಾರತದಲ್ಲಿ ಖಾಸಗೀಕರಣ ಜಾರಿಯಾಗುವ ಮೊದಲು ಕೇವಲ 7, 8, 10ನೇ ತರಗತಿ ಓದಿದವರಿಗೆಲ್ಲಾ ಸರ್ಕಾರಿ ವಲಯದಲ್ಲಿ ಉದ್ಯೋಗ ಸಿಗುತ್ತಿತ್ತು. ಪಿಯುಸಿ, ಪದವಿ ಓದಿದ್ದರಂತೂ ದೊಡ್ಡ ದೊಡ್ಡ ಅಧಿಕಾರಿಗಳೇ ಆಗಿಬಿಡುತ್ತಿದ್ದರು. ಆದರೆ 1992ರ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಜಾರಿಯಾದ ನಂತರ ಭಾರತದಲ್ಲಿ ಉದ್ಯೋಗದ ಸಮಸ್ಯೆ ಎದುರಾಗಿದೆ. ಇದಕ್ಕೆ ಕಾರಣವೇನೆಂದರೇ ನಮ್ಮನ್ನಾಳುವ ಸರ್ಕಾರಗಳು ಸರ್ಕಾರಿ ವಲಯಗಳನ್ನು ಖಾಸಗೀಯವರಿಗೆ ಬಿಟ್ಟುಕೊಟ್ಟಿರುವುದು. ಇದಕ್ಕೆ ಒಂದೆರಡು ಉದಾಹರಣೆಯನ್ನು ಹೇಳುವುದಾದರೇ; ಭಾರತದಲ್ಲಿ ಎಲ್‌ಪಿಜಿ ಜಾರಿಯಾಗುವ ಮೊದಲು ಭಾರತದ ಉದ್ಯಮಗಳು, ಕೈಗಾರಿಕೆಗಳು ಸರ್ಕಾರದ ಅಧೀನದಲ್ಲಿದ್ದವು. ಅಂತಹ ಸಂದರ್ಭದಲ್ಲಿ ಒಂದು ಸರ್ಕಾರಿ ವಲಯದ ಕೈಗಾರಿಕೆಗೆ 100 ಜನ ಉದ್ಯೋಗಿಗಳು ಅವಶ್ಯವಿದ್ದರೇ ಅದನ್ನು ಸಂವಿಧಾನದ ಆದ್ಯತೆಯ ಮೂಲಕ ಮೀಸಲಾತಿಗೆ ಅನುಗುಣವಾಗಿ ಎಸ್‌ಸಿಗಳಿಗೆ 15%, ಎಸ್‌ಟಿಗಳಿಗೆ 7.5%, ಒಬಿಸಿಗಳಿಗೆ 27%ರಂತೆ ಉದ್ಯೋಗಗಳನ್ನು ಹಂಚಿ ಇನ್ನುಳಿದ 50.50% ಉದ್ಯೋಗವನ್ನು ಜನರಲ್ ಮೆರಿಟ್‌ಗೆ ಅಳವಡಿಸುತ್ತಿದ್ದರು. ಆದರೇ ಎಲ್‌ಪಿಜಿ ಜಾರಿಯಾದ ನಂತರ ಸರ್ಕಾರಿ ಒಡೆತನದಲ್ಲಿದ್ದ ಕೈಗಾರಿಕೆ ಹಾಗೂ ಉದ್ಯಮಗಳು ಖಾಸಗೀಯವರ ಹಿಡಿತಕ್ಕೆ ಸಿಲುಕಿ ಈ ಪದ್ಧತಿ ನಾಶವಾಗಿದೆ. ಭಾರತದ ಕೈಗಾರಿಕೆ ಮತ್ತು ಉದ್ಯಮವು ಸರ್ಕಾರದ ಒಡೆತನದಲ್ಲಿದ್ದಾಗ 100 ಉದ್ಯೋಗ ಸೃಷ್ಟಿಯಾದರೇ ಅಷ್ಟೂ ಉದ್ಯೋಗಕ್ಕೆ ನೌಕರರನ್ನು ನೇಮಕ ಮಾಡಲಾಗುತ್ತಿತ್ತು. ಆದರೇ ಅದು ಖಾಸಗೀಯವರ ಹಿಡಿತಕ್ಕೆ ಬಂದ ನಂತರ ಬಂಡವಾಳಶಾಹಿಗಳು ನೇಮಕಾತಿ ವಿಧಾನಗಳನ್ನು ಬದಲಿಸಿ ತಮಗೆ ಇಷ್ಟಬಂದಂತೆ ಕಾನೂನುಗಳನ್ನು ರೂಪಿಸಿಕೊಂಡಿದ್ದಾರೆ. ಈ ಕಾರಣದಿಂದ ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆದುಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಅಧ್ಯಯನಶೀಲ ವಿದ್ಯಾರ್ಥಿಗಳ ಪೋಷಕರು ಅವರ ಮಕ್ಕಳ ಬಗ್ಗೆ ಏನು ಆಲೋಚನೆಗಳನ್ನು ಇಟ್ಟುಕೊಂಡಿದ್ದಾರೆಂಬುದನ್ನು ಇಲ್ಲಿ ನಾವು ನೀವೆಲ್ಲಾ ಚರ್ಚಿಸಬೇಕಿದೆ. ನಮ್ಮ ಮಕ್ಕಳು ಓದಿ ಉದ್ಯೋಗ ಪಡೆದುಕೊಂಡು ನಮ್ಮನ್ನು ಸಲಹುತ್ತಾರೆ ಎಂದು ಆಸೆ ಇಟ್ಟುಕೊಂಡಿರುವ ಪೋಷಕರೇ, ‘ನಿಮ್ಮ ಮಕ್ಕಳ ಭವಿಷ್ಯವನ್ನು ನೀವು ಬಲ್ಲಿರಾ?’ ನೀವು ಯಾವ ಮಂತ್ರಿಗಳ, ಜನಪ್ರತಿನಿಧಿಗಳ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಿರುವಿರೋ ಅವರೇ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ ಎಂಬುದು ನಿಮಗೆ ಅರಿವಿಲ್ಲ. ನೀವು ಯಾವ ಪಕ್ಷಕ್ಕೆ ಹತ್ತಾರು ವರ್ಷಗಳಿಂದ ಓಟು ಹಾಕುತ್ತಾ ಬಂದಿದ್ದೀರೋ ಆ ಸರ್ಕಾರಗಳೇ ನಿಮ್ಮ ಮಕ್ಕಳ ಉದ್ಯೋಗವನ್ನು ನಾಶಮಾಡುತ್ತಿವೆಯೆಂಬುದು ನಿಮಗೆ ಗೊತ್ತಿಲ್ಲ. ಅದಕ್ಕೆ ಒಂದು ಉದಾಹರಣೆಯೆಂದರೇ, ಈಗಾಗಲೇ ಬಿ.ಎ, ಬಿಎಸ್ಸಿ, ಬಿಎಡ್, ಎಂ.ಎ, ಎಂಎಸ್ಸಿ, ಎಂಕಾA, ಬಿಇ, ಎಂಬಿಎ, ಎಂಟೆಕ್, ಪಿಹೆಚ್‌ಡಿ… ಹೀಗೆ ದೊಡ್ಡದೊಡ್ಡ ಪದವಿಗಳನ್ನು ಪಡೆದುಕೊಂಡಿರುವ ನಿಮ್ಮ ಮಕ್ಕಳು ಇಂದು ನಿಮ್ಮ ಕಣ್ಮುಂದೆ ಉದ್ಯೋಗವಿಲ್ಲದೇ ನಿಂತಿದ್ದಾರೆ. ಇವರೆಲ್ಲಾ ಏನು ಮಾಡುತ್ತಿದ್ದಾರೆಂದು ನಿಮಗೆ ಗೊತ್ತೇ? ಅವರೆಲ್ಲಾ ಇಂದು ತಮ್ಮ ಹಸಿವು, ನೋವು, ಆಸೆ, ಆರೋಗ್ಯ ಎಲ್ಲವನ್ನು ಬದಿಗಿಟ್ಟು ತಮ್ಮ ಪೋಷಕರನ್ನು ಸಲಹಬೇಕು ಹಾಗೂ ತಾವೂ ಸಹ ಒಂದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಹಂಬಲದಿಂದ ಸರ್ಕಾರವೆಂಬ ದೊರೆಯ ಮುಂದೆ ಪದವಿ ಪತ್ರಗಳನ್ನು ಹಿಡಿದುಕೊಂಡು ಉದ್ಯೋಗಕ್ಕಾಗಿ ತಮ್ಮ ಎರಡು ಹಸ್ತಗಳನ್ನು ಚಾಚಿ ನಿಂತಿದ್ದಾರೆ. ನೀವು ನನ್ನ ಮಗ/ಮಗಳು ಒಂದು ಉದ್ಯೋಗಕ್ಕಾಗಿ ಹಗಲಿರುಳು ಕಷ್ಟಪಟ್ಟು ಓದುತ್ತಲೇ ಇದ್ದಾನೆ/ಳೆ. ಅವನು/ಳು ಎಂದಾದರೊಂದು ದಿನ ಉದ್ಯೋಗ ಪಡೆದುಕೊಳ್ಳುತ್ತಾನೆ/ಳೆ ಎಂಬ ಆಶಾವಾದದಿಂದ ಕಾಯುತ್ತಿದ್ದೀರಿ. ಆದರೇ ಉದ್ಯೋಗ ಸೃಷ್ಟಿಮಾಡಬೇಕಾದವರು ನಿಮ್ಮಿಂದ ಓಟು ಪಡೆದು ನಿಮ್ಮ ಮಕ್ಕಳಿಗೆ ಉದ್ಯೋಗ ಸೃಷ್ಟಿಮಾಡದೇ ಯೌವನದಲ್ಲೇ ಅವರ ದುಡಿಯುವ ಕ್ರಿಯಾಶೀಲ ಶಕ್ತಿ ಮತ್ತು ಸಾಮರ್ಥ್ಯವನ್ನು ಕೊಂದು ಅವರನ್ನು ನಿತ್ಯನರಕಿಗಳನ್ನಾಗಿ ಮಾಡಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ಇಂದು ಕೇವಲ SDA, FDA ಗಳಂತಹ ಕ್ಲರಿಕಲ್ ಹುದ್ದೆಗಳ ಪರೀಕ್ಷೆಗಳಿಗೂ ಅತ್ಯಂತ ಜಟಿಲ ಸಮಸ್ಯೆಗಳನ್ನು ಮುಂದಿಟ್ಟು ಒಬ್ಬ ಸಾಮಾನ್ಯ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಶಿಕ್ಷಣ ಮತ್ತು ಉದ್ಯೋಗಕ್ಕಾಗಿಯೇ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವಾಗ ನಿಮ್ಮ ಮಗ/ಳು ಒಂದು ನೌಕರಿ ಪಡೆದುಕೊಂಡು ನಿಮ್ಮನ್ನು ಸಲಹುತ್ತಾನೆ/ಳೆಂದು ನಿರೀಕ್ಷಿಸುವುದು ಒಂದು ರೀತಿ ಭ್ರಮೆಯೇ ಆಗಿದೆ. ನಿಮ್ಮ ಮಕ್ಕಳ ಓದಿಗಾಗಿ ನೀವು ನಿಮ್ಮ ಮನೆಯಲ್ಲಿರುವ ಚೂರುಪಾರು ಒಡವೆ ಜೊತೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ಹಂತಹಂತವಾಗಿ ಅಡವಿಟ್ಟು, ಇರುವುದನ್ನೆಲ್ಲಾ ಮಾರಾಟಮಾಡಿ ಅವರಿಗೆ ಶಿಕ್ಷಣ ಕೊಡಿಸುತ್ತೀರಿ. ಗ್ರಾಮೀಣ ಪ್ರದೇಶಗಳ ಕೆಲವು ಬಡಮಧ್ಯಮ ವರ್ಗಗಳ ತಂದೆ-ತಾಯAದಿರು ಬಟ್ಟೆ ಒಲಿಯುವವರು, ಬೀಡಿ ಕಟ್ಟುವವರು, ಗಂಧದಕಡ್ಡಿ ಒತ್ತುವವರು, ಮೇಣದಬತ್ತಿ ತಯಾರು ಮಾಡುವವರು, ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುವವರು, ಕೂಲಿ ಮಾಡುವವರು ಹಗಲಿರುಳು 200-300 ರೂಪಾಯಿಗಳನ್ನು ಕಷ್ಟಪಟ್ಟು ದುಡಿದು ತಮ್ಮ ಮೂಗು, ಕಿವಿಗೆ ಇಲ್ಲದಿದ್ದರೂ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಮಕ್ಕಳ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಕೆಲವು ಅಪ್ಪಂದಿರಂತೂ ಮಧ್ಯಾಹ್ನ ಹೊರಗೆ ಹೋಟೆಲ್‌ನಲ್ಲಿ ಊಟ ಮಾಡಿದರೆ ನಾಳೆ ಮಕ್ಕಳು ಶಾಲೆಗೆ ಅಥವಾ ಕಾಲೇಜಿಗೆ ಹೋಗಲು ಬಸ್‌ಚಾರ್ಜಿಗೆ ಕೊಡಲು ಹಣ ಇರುವುದಿಲ್ಲ ಎಂದು ಹಸಿದುಕೊಂಡೇ ಮನೆಗೆ ಬರುತ್ತಾರೆ. ಇದೆಲ್ಲ ಏಕೆ? ತಮ್ಮ ಮಕ್ಕಳ ಭವಿಷ್ಯಕ್ಕೆ! ಆದರೆ ಇಂತಹ ತಂದೆ-ತಾಯಿಯರ ಮಕ್ಕಳ ಭವಿಷ್ಯ ಏನಾಗಿದೆ? ಎಂಬುದನ್ನು ಒಮ್ಮೆ ಆಲೋಚನೆ ಮಾಡಿ.

ಹಾಗೆಂದು ಕೇವಲ ಚಿಂತಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ಬದಲಿಗೆ ಇಷ್ಟೆಲ್ಲಾ ಸಮಸ್ಯೆಗೆ ಕಾರಣವೇನು ಎಂಬುದನ್ನು ಅರಿತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ನಿಮ್ಮ ಮಕ್ಕಳು ನಿರುದ್ಯೋಗಿಗಳಾಗಿರುವುದು ಅಥವಾ ಉದ್ಯೋಗಕ್ಕಾಗಿ ಅಲೆದಾಡುತ್ತಿರುವುದು ಈ ದೇಶದಲ್ಲಿ ಕಾಡುತ್ತಿರುವ ಖಾಸಗೀಕಣವೆಂಬ ಅಮಾನವೀಯ ನೀತಿಯಿಂದ. ಏಕೆಂದರೇ ಖಾಸಗೀ ಉದ್ಯಮಗಳು ಸಂವಿಧಾನದ ಚೌಕಟ್ಟಿಗೆ ಸಂಪೂರ್ಣ ಒಳಪಡುವುದಿಲ್ಲ. ಸಂವಿಧಾನದ ಚೌಕಟ್ಟಿಗೆ ಸೇರದ ಯಾವುದೇ ವ್ಯವಸ್ಥೆಯಾಗಲಿ ಅದು ಪ್ರಜೆಗಳಿಗೆ ಎಂತಹ ಮೋಸವನ್ನಾದರೂ ಮಾಡಬಹುದು. ಅದನ್ನು ಪ್ರಶ್ನೆಮಾಡುವ ಯಾವ ಅರ್ಹತೆಯೂ ನಮ್ಮ ಸರ್ಕಾರಗಳಿಗೆ ಇರುವುದಿಲ್ಲ. ಏಕೆಂದರೇ ಎಲ್‌ಪಿಜಿಯ ಒಪ್ಪಂದದ ಮೂಲಕ ದೇಶದ ಉದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಬಂಡವಾಳಿಗರಿಗೆ ಬಹುಪಾಲು ಸ್ವಾಯತ್ತತೆ ಹಾಗೂ ಸಾರ್ವಭೌಮತೆಯನ್ನು ನೀಡಲಾಗಿದೆ. ಈ ಒಪ್ಪಂದದ ಪ್ರಕಾರ ಖಾಸಗೀ ಬಂಡವಾಳಿಗರು ದೇಶದೊಳಗೆ ಸರ್ವಾಧಿಕಾರಿಗಳಾಗಿದ್ದಾರೆ. ನೀವು ನಂಬಿಕೊಂಡಿರುವ, ಚಪ್ಪಾಳೆ ಹೊಡೆಯುವ ಸರ್ಕಾರ ಶಕ್ತಿಹೀನವಾಗಿ ಹಲ್ಲಿಲ್ಲದ ಹಾವಿನಂತಾಗಿದೆ. ನಿಮ್ಮ ಮತಗಳನ್ನು ನಮಗೆ ಕೊಡಿ ಈ ದೇಶದ ಜನರಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ, ಆರೋಗ್ಯ, ಆಹಾರ, ಭೂಮಿ ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿ ನಿಮ್ಮ ಓಟುಗಳನ್ನು ಪಡೆದುಕೊಂಡು ಪಾರ್ಲಿಮೆಂಟ್‌ಗಳಿಗೆ ಹೋದ ಎಂಎಲ್‌ಎ, ಎಂಪಿಗಳು ದೇಶದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳನ್ನು ಖಾಸಗೀಯವರಿಗೆ ಮಾರಾಟ ಮಾಡಿ ಪ್ರಶ್ನೆಮಾಡುವ ಹಕ್ಕುಗಳನ್ನು ಕಳೆದುಕೊಂಡು ಕೈಲಾಗದವರಂತೆ ಕುಳಿತಿದ್ದಾರೆ.

ಇದು ಇಂದು ನೆನ್ನೆಯ ಸಮಸ್ಯೆಯಲ್ಲ 1992ರಲ್ಲಿ ಹುಟ್ಟಿಕೊಂಡಿದ್ದು. ಈ ನೀತಿಯಿಂದ ಇದುವರೆಗೆ 23.5% ಮೀಸಲಾತಿ ಹೊಂದಿರುವ ಎಸ್‌ಸಿ/ಎಸ್‌ಟಿಗಳಿಗೆ 2ಕೋಟಿಗೂ ಅಧಿಕ ಉದ್ಯೋಗ ನಷ್ಟವಾಗಿದೆ. ಹಾಗಾದರೇ 27% ಉದ್ಯೋಗದ ಮೀಸಲಾತಿ ಹೊಂದಿರುವ ಒಬಿಸಿಗಳಿಗೆ ಎಷ್ಟು ಉದ್ಯೋಗ ನಷ್ಟವಾಗಿರಬಹುದು? ಎಷ್ಟು ವಿದ್ಯಾರ್ಥಿಗಳ ಆಸೆ, ಕನಸುಗಳು ನಿರಾಸೆಯಾಗಿರಬಹುದು? ಎಷ್ಟು ಜನ ತಂದೆ-ತಾಯಿಯರ ಭರವಸೆ ಮಣ್ಣುಪಾಲಾಗಿರಬಹುದು..? ಎಂಬುದನ್ನು ನೀವೇ ಆಲೋಚನೆ ಮಾಡಿ. ಇದು ಕೇವಲ ಸರ್ಕಾರಗಳ ತಪ್ಪಲ್ಲ. ಬದಲಿಗೆ ಇದರಲ್ಲಿ ಅವರನ್ನು ಆಯ್ಕೆಮಾಡುವ ನಮ್ಮ ತಪ್ಪು ಸಹ ಇದೆ. ಹೇಗೆಂದರೇ, ನಮಗೆಲ್ಲಾ ಇಂತಹ ಅನ್ಯಾಯವನ್ನು ಮಾಡಿಕೊಂಡು ಬರುತ್ತಿರುವ ಈ ದೇಶದ ರಾಜಕೀಯ ಪಕ್ಷಗಳಿಗೆ ನಿರಂತರವಾಗಿ ಓಟು ಹಾಕಿಕೊಂಡು ಬರುತ್ತಿದ್ದೇವಲ್ಲ ಅದಕ್ಕೆ… ನಮ್ಮ ಮಕ್ಕಳನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅವರ ಭವಿಷ್ಯವನ್ನು ಹಾಳು ಮಾಡುತ್ತಿರುವ ಸರ್ಕಾರಗಳಿಗೆ ಮತ್ತೆ ಮತ್ತೆ ಓಟು ಹಾಕಿ ಗೆಲ್ಲಿಸುತ್ತೇವಲ್ಲ ಅದಕ್ಕೆ… ನಮ್ಮ ಮಕ್ಕಳ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವ ರಾಜಕಾರಣಿಗಳು ಕೊಡುವ 100 ರೂಪಾಯಿ 200 ರೂಪಾಯಿಗಳಿಗೆ ನಮ್ಮ ಓಟನ್ನು ಮಾರಿಕೊಳ್ಳುತ್ತಿದ್ದೇವಲ್ಲ ಅದಕ್ಕೆ… ಯಾವ ಪಕ್ಷಕ್ಕೆ ಓಟು ಹಾಕಿದರೆ ನಮ್ಮ ಮಕ್ಕಳಿಗೆ ಭವಿಷ್ಯ ಸಿಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಯಾರೋ ಹೇಳಿದ ಪಕ್ಷಕ್ಕೆ ಓಟು ಹಾಕುತ್ತೇವಲ್ಲ ಅದಕ್ಕೆ… ಒಟ್ಟಾರೆಯಾಗಿ ನಾವು ಮಾಡುವ ನಮ್ಮ ಈ ಎಲ್ಲಾ ತಪ್ಪುಗಳು ಇಂದು ನಮ್ಮ ಮಕ್ಕಳ ಭವಿಷ್ಯವನ್ನು ಬಲಿ ತೆಗೆದುಕೊಳ್ಳುತ್ತಿವೆ.

ಖಾಸಗೀ ಸಂಸ್ಥೆಗಳ ಹಾವಳಿಯನ್ನು ನಿಯಂತ್ರಣ ಮಾಡಲಾಗದ ನಮ್ಮ ದೇಶದ ದುರ್ಬಲ ಸರ್ಕಾರಗಳು ಸರ್ಕಾರಿ ಉದ್ಯೋಗವನ್ನೆಲ್ಲ ಖಾಸಗೀ ಕಂಪನಿಗಳಿಗೆ ಮಾರಾಟ ಮಾಡಿ, ವ್ಯಕ್ತಿಯ ಆಯಸ್ಸಿನ ಅರ್ಧ ಶ್ರಮವನ್ನೆಲ್ಲಾ ಹೊಂದಿಸಿದರೂ ಕೇವಲ SDA, FDAಗಳಂತಹ ಒಂದು ಗುಮಾಸ್ತರ ನೌಕರಿ ಗಿಟ್ಟಿಸಿಕೊಳ್ಳದಷ್ಟು ಜಟಿಲ ಪರಿಸ್ಥಿತಿ ನಿರ್ಮಾಣ ಮಾಡಿ ಬಡವರ ಬದುಕನ್ನು ದುಸ್ತರಗೊಳಿಸಿದೆ. ಆಳುವ ಪಕ್ಷದಿಂದ ಅನುಕೂಲ ಪಡೆದುಕೊಂಡು ಉದ್ಧಾರವಾಗಿರುವ ಯಾರೊ ಒಬ್ಬ ಮುಖಂಡ ಈ ಸರ್ಕಾರಗಳ ಬಗ್ಗೆ ಹೊಗಳಿ ಮಾತನಾಡಬಹುದು, ರಾಜಕಾರಣಿಗಳಿಗೆ ಜೈಕಾರ ಕೂಗಬಹುದು. ಆದರೆ ಈ ವಂಚಿತ ಸರ್ಕಾರಗಳಿಂದ ಏನನ್ನೂ ಪಡೆಯದ ನೀವೂ ಸಹ ಮುಗ್ಧರಾಗಿಯೋ ಅಥವಾ ಮೂರ್ಖರಾಗಿಯೋ ಅವರ ಮಾತಿಗೆ ಚಪ್ಪಾಳೆ ಹೊಡೆದುಕೊಂಡೇ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ. ಹಾಗಾಗಿ ಇನ್ನಾದರೂ ಜಾಗೃತರಾಗಿ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಶಕ್ತಿ ಹಾಗೂ ಖಾಳಜಿ ಇರುವ ಸರ್ಕಾರಗಳನ್ನು ಆಯ್ಕೆಮಾಡಿದಾಗ ನಿಮ್ಮ ಮಕ್ಕಳ ಭವಿಷ್ಯಕ್ಕೊಂದು ಭರವಸೆ ಬರಲು ಸಾಧ್ಯವಿದೆ. ಆ ಮೂಲಕ ಯುವಕರ, ವಿದ್ಯಾರ್ಥಿಗಳ ಬಗ್ಗೆ ಖಾಳಜಿ ಇರುವ ಸರ್ಕಾರಗಳನ್ನು ಗೆಲ್ಲಿಸಿ, ಓದಿದ ಪ್ರತಿಯೊಬ್ಬ ವ್ಯಕ್ತಿಗೂ (ದುಡಿಯುವ ಕೈಗಳಿಗೆ) ಉದ್ಯೋಗ ಸಿಗುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಹೊಣೆಯನ್ನು ಪೋಷಕರೇ ಹೊರುವುದಾದರೇ ನಿಮ್ಮ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ನಿರ್ಮಾಣ ಮಾಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಈ ಕ್ಷಣದಿಂದಲೇ ನಾವು ಜಾಗೃತಗೊಳ್ಳಬೇಕಿದೆ.

ಲೇಖಕರು: ಇರಸವಾಡಿ ಮಹೇಶ್, ಪತ್ರಕರ್ತ ಮತ್ತು ಯುವ ಸಾಹಿತಿ, ಚಾಮರಾಜನಗರ

Share this Article
Leave a comment