ಕೈಗಾರಿಕಾ ಪ್ರದೇಶಕ್ಕೆ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಭೇಟಿ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಹಲವು ಕಂಪನಿಗಳಿಗೆ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಶಂಕರ ಸಿ.ಅಂಕನಶೆಟ್ಟಿಪುರ ಅವರು ಇಂದು ಭೇಟಿ ನೀಡಿ, ಸ್ವಚ್ಛತಾ ಕಾರ್ಮಿಕರ ಕುಂದುಕೊರತೆಗಳನ್ನು ವಿಚಾರಿಸಿದರು.

ನಗರದ ಹೊರವಲಯದಲ್ಲಿರುವ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಓಪಸ್ ಬಿರ್ಲಾ ಕಂಪನಿಗೆ ಮೊದಲಿಗೆ ಭೇಟಿ ನೀಡಿ, ಸ್ವಚ್ಛತಾ ಕಾರ್ಮಿಕರೊಂರಿಗೆ ಸಂವಾದ ನಡೆಸಿದರು. ಕಾರ್ಮಿಕರಿಗೆ ಕನಿಷ್ಠ ವೇತನ, ಮೂಲ ಸೌಕರ್ಯ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆಯೇ ಎಂದು ಕಾರ್ಮಿಕರನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬಿರ್ಲಾ ಕಂಪನಿಯ ಮಾನವ ಸಂಪನ್ಮೂಲ ವ್ಯಕ್ತಿ ಅಶೋಕ್ ವಿಠ್ಠಲ್ ಮಾತನಾಡಿ, ನಮ್ಮ ಕಂಪನಿಯಲ್ಲಿ ಪ್ರಸ್ತುತ ಒಟ್ಟು 46 ಜನರು ಸ್ವಚ್ಛತಾ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸೂಕ್ತ ಸಮಯಕ್ಕೆ ವೇತನ ಮತ್ತು ವೇತನ ರಶೀತಿ ನೀಡುತ್ತಿದ್ದೇವೆ. ಇಎಸ್ಐ ಮತ್ತು ಪಿಎಫ್ ಕಟ್ಟಲಾಗುತ್ತಿದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದ್ದು ಉತ್ತಮ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಶಂಕರ ಸಿ.ಅಂಕನಶೆಟ್ಟಿಪುರ ಮಾತನಾಡಿ, ಸ್ವಚ್ಛತಾ ಕಾರ್ಮಿಕರಿಗೆ 3 ತಿಂಗಳಿಗೊಮ್ಮೆ ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಅಗತ್ಯ ಸುರಕ್ಷತಾ ಪರಿಕರಗಳನ್ನು ನೀಡಬೇಕು. ಕಂಪನಿಯಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉದ್ಯೋಗದ ಅವಕಾಶವನ್ನು ನೀಡಬೇಕು ಎಂದು ತಿಳಿಸಿದರು.

ಬಳಿಕ ಆಯೋಗದ ಸದಸ್ಯರಾದ ಶಂಕರ ಸಿ.ಅಂಕನಶೆಟ್ಟಿಪುರ ಅವರು ಎಲ್ಕಿಚ್ ಕಂಪನಿಗೆ ಭೇಟಿ ನೀಡಿ, ಸ್ವಚ್ಛತಾ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಸ್ವಚ್ಛತಾ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಇರುವುದಕ್ಕೆ ಕಂಪನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತಾ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚನೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಯೋಗಕ್ಕೆ ವರದಿ ನೀಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ನಂತರ ಸಾವಿತ್ರಿ ಪ್ಲೇ ಬೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ದಿಡೀರ್ ಭೇಟಿ ನೀಡಿ, ಸ್ವಚ್ಛತಾ ಕಾರ್ಮಿಕರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊರೈ ರಾಜು, ಸಮಾಜ ಕಲ್ಯಾಣ ಇಲಾಖೆಯ ಸಿ.ಮ‌ಹದೇವಸ್ವಾಮಿ ಹಾಗೂ ಇತರರು ಇದ್ದರು.

Share this Article
Leave a comment