ಕೊಳ್ಳೇಗಾಲ: ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರವರ 893 ನೇ ಜಯಂತಿ ಮಹೋತ್ಸವ ಕೊಳ್ಳೇಗಾಲದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಎಂ.ಜಿ.ಎಸ್.ವಿ ಮೈದಾನದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕೊಳ್ಳೇಗಾಲದಲ್ಲಿ ಬಹಳ ವಿಜೃಂಭಣೆಯಿಂದ ಬಸವೇಶ್ವರರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.
ಬಸವಣ್ಣರವರು ಈ ನಾಡು ಕಂಡಂತಹ ಸಾಂಸ್ಕೃತಿಕ ನಾಯಕ ಅನುಭವ ಮಂಟಪದ ಮೂಲಕ ಎಲ್ಲಾ ಸಮುದಾಯದ ಮಹನೀಯರನ್ನು ಸೇರಿಸಿ ದೀಕ್ಷೆಯನ್ನು ಬೋಧಿಸಿ ಎಲ್ಲರೂ ಸಮಾನರು ಎಂಬ ನೀತಿಯನ್ನು ಸಾರಿದ್ದಾರೆ ಎಂದರು.

ಬಸವಣ್ಣ ಹಾಗೂ ಇನ್ನಿತರೆ ಮಹನೀಯರ ಮಾನವೀಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರ್ವರ ಜೊತೆ ಸಮಾನ ಗೌರವದಿಂದ ಬದುಕಬೇಕು. ಜಾತಿ, ಧರ್ಮ ಮೇಲು-ಕೀಳು ಎಂಬ ಭಾವನೆಯನ್ನು ಹೋಗಲಾಡಿಸಿ ಕ್ರಾಂತಿಕಾರಿ ಹೋರಾಟ ಪ್ರಾರಂಭಿಸಿದ್ದ ಬಸವಣ್ಣನವರ ಹಾದಿಯಲ್ಲೇ ಅಂಬೇಡ್ಕರ್ ಅವರು ಸಹ ಸಾಗಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಇರುವಂತಹ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಲಗಿಸಿ ಹೋರಾಟ ಮಾಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕು ಮತ್ತು ಅಧಿಕಾರ ಕೊಟ್ಟಿದ್ದಾರೆ. ಬಸವಣ್ಣ ಅವರ ತತ್ವ ಸಿದ್ಧಾಂತಗಳು ನಮ್ಮ ಜೀವನಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಮ.ಬೆಟ್ಟ ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮಿ, ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಆರ್.ನರೇಂದ್ರ, ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತೋಟೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್ ಕುಮಾರ್, ಯುವ ಉದ್ಯಮಿ ನಿಶಾಂತ್, ಪ್ರೀತಮ್ ನಾಗಪ್ಪ, ಬೆಂಗಳೂರಿನ ಕ್ರೈಂ ವಿಭಾಗದ ಆಯುಕ್ತರು ಹೆಚ್.ಕೆ.ಮಹಾನಂದ್, ಜೆಡಿಎಸ್ ಮುಖಂಡ ಬಿ.ಪುಟ್ಟಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್, ನಿರ್ದೇಶಕರುಗಳು, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ನಗರಸಭೆ ಮಾಜಿ ಸದಸ್ಯರು ಸೇರಿದಂತೆ ಅನೇಕರು ಇದ್ದರು.

ಮೆರುಗು ಹೆಚ್ಚಿಸಿದ ಭಾವಚಿತ್ರ ಮೆರವಣಿಗೆ: ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ ನಂದಿ ಕಂಬ, ಡೊಳ್ಳು ಕುಣಿತ, ವೀರಗಾಸೆ, ಮಹಿಳಾ ವೀರಗಾಸೆ, ಅಘೋರಿ ವೇಷಧಾರಿ, ಪೂಜಾ ಕುಣಿತ, ಕೋಲಾಟ, ಸ್ತಬ್ದ ಚಿತ್ರಗಳು ಮೆರವಣಿಗೆಗೆ ಮೆರಗು ತುಂಬಿತು. ಗುರುಕಾರ್ ವೃತ್ತ, ಡಾ.ರಾಜಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಅಂಬೇಡ್ಕರ್ ರಸ್ತೆ ಮೂಲಕ ಕುಣಿದು ಕುಪ್ಪಳಿಸಿ ಉತ್ಸವ ನಡೆಸಿದರು. ಮೆರವಣಿಗೂ ಮೊದಲು ಅಕ್ಕನ ಬಳಗ, ಕದಳಿ ವೇದಿಕೆ, ಸೇರಿದಂತೆ ಇತರೆ ಸಂಘದ ಮಹಿಳೆಯರು ಕಳಸ ಹಿಡಿದುಕೊಂಡು ಸುತ್ತೂರು ಶ್ರೀಗಳನ್ನು ಬರಮಾಡಿಕೊಂಡರು.
ಬಸವ ಬಳಗದ ವತಿಯಿಂದ ಪಟ್ಟಣದ ಯಾವುದಾದರೂ ಮುಖ್ಯ ವೃತ್ತಕ್ಕೆ ಬಸವೇಶ್ವರರ ಹೆಸರು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವುದಾದರೂ ಪ್ರಮುಖ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗುವುದು.
|ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ
