ಕೊಳ್ಳೇಗಾಲ ನಗರಸಭೆ ವಿರುದ್ಧ ಕರವೇ ಪ್ರತಿಭಟನೆ

ಮಣಿಕಂಠ ಜನತಾ ರಾಯಭಾರಿ
2 Min Read

ಕೊಳ್ಳೇಗಾಲ: ನಗರಸಭೆಯ ದುರಾಡಳಿತ, ಭ್ರಷ್ಟಾಚಾರ ಮತ್ತು ವಿಳಂಬ ನೀತಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ್ ಗೌಡ ಬಣ) ವತಿಯಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಕರವೇ ತಾಲ್ಲೂಕು ಅಧ್ಯಕ್ಷ ಮೆಹಬೂಬ್ ಪಾಷ ನೇತೃತ್ವದಲ್ಲಿ ನಗರಸಭೆ ಆಡಳಿತ ವಿರುದ್ಧ ಘೋಷಣೆ ಕೂಗುವ ಮೂಲಕ ಡಾ.ರಾಜಕುಮಾರ್, ಡಾ.ಅಂಬೇಡ್ಕರ್ ರಸ್ತೆ ಮೂಲಕ ಪ್ರತಿಭಟಿಸಿ ಪೌರಯುಕ್ತರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ನಗರಸಭೆಯ ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ಲಂಚಾವತಾರ ಮತ್ತು ಸಾರ್ವಜನಿಕ ಕೆಲಸಗಳಲ್ಲಿನ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡುತ್ತಿದ್ದು ಇದಕ್ಕೆ ಪ್ರಮುಖ ಕಾರಣವೇನೆಂದರೆ ಸಾರ್ವಜನಿಕರು ಖಾತೆ ಬದಲಾವಣೆ. ಕಟ್ಟಡ ನಕ್ಷೆ ಮಂಜೂರಾತಿ, ಜನನ-ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿ ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿಯೊಂದು ಸಣ್ಣ ಕೆಲಸಕ್ಕೂ ಸಾರ್ವಜನಿಕರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳಲು ಬರುವ ನಾಗರಿಕರಿಗೆ ಅನಗತ್ಯವಾಗಿ ಅಲೆದಾಡಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಪಟ್ಟಣದ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ನಗರಸಭೆ ಕಣ್ಣು ಮುಚ್ಚಿ ಕುಳಿತಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕ ಹಣ ಪೋಲಾಗುತ್ತಿದೆ. ನಾಗರಿಕರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆ. ನಿಯಮಿತ ಅವಧಿಯಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.ಈ ಮೂಲಕ ನಗರಸಭೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ಭ್ರಷ್ಟ ಅಧಿಕಾರಿಗಳಿಗೆ ನಮ್ಮ ಕರವೇ ವತಿಯಿಂದ ಎಚ್ಚರಿಕೆ ಕೊಡುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ಭ್ರಷ್ಟಚಾರ ಕಡಿವಾಣ ಹಾಕದಿದ್ದರೆ ನಮ್ಮ ಕರವೇ ವತಿಯಿಂದ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್‌.ಎನ್.ಮಂಜೇಶ್, ಜಿಲ್ಲಾ ಪ್ರಧಟನ ಕಾರ್ಯದರ್ಶಿ ರೂಪೇಶ್.ಎಂ, ಸಂಘಟನಾ ಕಾರ್ಯದರ್ಶಿ ಹೇಮಂತ್,ತಾಲ್ಲೂಕು ಅಧ್ಯಕ್ಷ ಮೆಹಬೂಬ್ ಪಾಷ, ಚಾ.ನಗರ ತಾಲ್ಲೂಕು ಕಾರ್ಯದರ್ಶಿ ಅಸಾದ್, ಉಪಾಧ್ಯಕ್ಷ ಅಭಿಷೇಕ್. ಆರ್, ಜಂಟಿ ಕಾರ್ಯದರ್ಶಿ ಶಾಂತರಾಜು, ಕಾರ್ಯದರ್ಶಿ ತಬರೆಸ್ ಪಾಷ, ಬಸವಣ್ಣ ಮುಳ್ಳೂರು, ಸಂಚಾಲಕರು ಇಫ್ರಾನ್, ನಯಾಜ್ ಪಾಷ, ತೌಸೀಫ್ ಬೇಗ್, ಯಳಂದೂರು ಮಹದೇವಸ್ವಾಮಿ, ಇಸ್ಮಾಯಿಲ್ ಹಾಗೂ ಇತರರು ಇದ್ದರು.

Share this Article
Leave a comment