ಡಾ.ರಾಜ್ ಕುಮಾರ್ ಅವರು ಮೇರು ನಟರೂ ಎಂಬುದಕ್ಕಿಂತಲೂ, ಓರ್ವ ಮೇರು ವ್ಯಕ್ತಿತ್ವದ ಶಿಖರ ಎಂದು ಕರೆಯಬೇಕು ಎಂದು ನನಗೆ ಯಾವಾಗಲೂ ಅನಿಸುತ್ತದೆ. ಈ ಕಾರಣಕ್ಕೆ ನನ್ನಂತಹ 90 ಕಿಡ್ಸ್ ಗಳನ್ನು ಕೂಡ ರಾಜ್ ಕುಮಾರ್ ನಿತ್ಯವೂ ಒಂದಿಲ್ಲೊಂದು ವಿಚಾರದಲ್ಲಿ ಕಾಡುತ್ತಲೇ ಇರುತ್ತಾರೆ. ರಾಜಣ್ಣ ಇಂದು ಕನ್ನಡ ನಾಡು, ನುಡಿಯ ಸಾಂಸ್ಕೃತಿಕ ರಾಯಭಾರಿಯಾಗಿರಬಹುದು ಆದರೆ, ಅವರು ಆ ಸ್ಥಾನಕ್ಕೆ ಬರಲು ಎಷ್ಟು ಶ್ರಮವಹಿಸಿದ್ದಾರೆ. ಎಷ್ಟೊಂದು ಅಡೆತಡೆಗಳನ್ನು ಎದುರಿಸಿದ್ದಾರೆ ಎಂದು ನೋಡುತ್ತಾ ಹೋದರೆ ಇಂದಿಗೂ ನನಗೆ ರಾಜ್ ಅವರ ಓದು ವಿಸ್ತರಿಸಿಕೊಳ್ಳುತ್ತಲೇ ಇದೆ.
ನಾನು ಮತ್ತು ನನ್ನ ಗೆಳೆಯನೊಬ್ಬ ರಾಜ್ ಕುಮಾರ್ ಅವರ ಕುರಿತು ಮಾತಿಗೆ ಇಳಿದರೇ, ಅದು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಬೇಡರ ಕಣ್ಣಪ್ಪ ಸಿನಿಮಾದಿಂದ ಹಿಡಿದು, ಶಬ್ಧವೇದಿ ತನಕವೂ ಮಾತನಾಡಿಸುತ್ತಾ ಹೋಗುತ್ತದೆ. ಬಹುಮುಖ್ಯವಾಗಿ ನೆನ್ನೆ ನನ್ನ ಗೆಳೆಯ ಇದ್ದಕ್ಕಿದ್ದಂತೆಯೇ ರಾಜ್ ಕುಮಾರ್ ಅವರ ಕುರಿತು ಮಾತನಾಡುತ್ತಾ, ರಾಜಣ್ಣನವರ ಸಿನಿಮಾಗಳಲ್ಲಿ ಚಪ್ಪಲಿಗಳು ಕೂಡ ಪ್ರಧಾನ ಪಾತ್ರವಾಗುತ್ತಿದ್ದವು ಎಂದು ಹೇಳುತ್ತಿದ್ದಂತೆಯೇ ನನಗೆ ಬಂಗಾರದ ಮನುಷ್ಯ ಸಿನಿಮಾ ನೆನಪಾಯಿತು. ಈಗಲೂ ಬಂಗಾರದ ಮನುಷ್ಯ ಸಿನಿಮಾದ ಕೊನೆಯ ದೃಶ್ಯಗಳನ್ನು ನೋಡಿದಾಗ, ರಾಜ್ ಕುಮಾರ್ ಕೊನೆಯ ದೃಶ್ಯದಲ್ಲಿ ಚಪ್ಪಲಿಯನ್ನು ಬಿಟ್ಟು ಮನೆಯಿಂದ ಹೊರ ನಡೆವಾಗ ನನ್ನ ಅಪ್ಪ ನೆನಪಾಗುತ್ತಾರೆ. ರಾಜ್ ಕುಮಾರ್ ನಮಗೆಲ್ಲರಿಗೂ ಎಷ್ಟು ಆಪ್ತ ಎನಿಸಿಬಿಡುತ್ತಾರೆ. ಈಗಲೂ ಮನಸ್ಸಿಗೆ ತುಂಬಾ ನೋವಾದಾಗ ನಾನು ಬಂಗಾರದ ಪಂಜರ, ಕವಿರತ್ನ ಕಾಳಿದಾಸ, ಹೊಸಬೆಳಕು, ಬಂಗಾರದ ಮನುಷ್ಯ, ಮಾಧವಿ ಜೊತೆಗೆ ರಾಜ್ ಕುಮಾರ್ ಅಭಿನಯಿಸಿದ ಎಲ್ಲಾ ಸಿನಿಮಾವನ್ನು ನೋಡುತ್ತಾ, ರಾಜ್ ಕುಮಾರ್, ಬಾಲಣ್ಣ, ಅಶ್ವಥ್, ಲೀಲಾವತಿ ಅವರ ಅಭಿನಯಗಳನ್ನು ನೋಡುತ್ತಾ, ನೋಡುತ್ತಾ ನನ್ನ ನೋವನ್ನು ಸಂಪೂರ್ಣವಾಗಿ ಮರೆತು ಬಿಡುತ್ತೇನೆ.
ಅಯ್ಯೋ ಈ ಲೇಖನದ ವಿಚಾರವನ್ನು ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಿದ್ದೇನೆ ನೋಡಿ, ಹೌದು ರಾಜ್ ಕುಮಾರ್ ಅಂದರೇ ಹಾಗೇ. ಯಾರೆಲ್ಲಾ ಏನೇನೋ ಹೇಳುವುದಕ್ಕಿಂತಲೂ, ರಾಜ್ ಹೇಗೆಲ್ಲಾ ವಿಸ್ತಾರವಾಗುತ್ತಲೇ ಇದ್ದಾರೆ ಎಂಬ ಕೌತುಕವನ್ನು ಅನುಭವಿಸಿಯೇ ಚೆಂದ. ಅದು 1978ರಲ್ಲಿ ತೆರೆಕಂಡ “ರಾಘವೇಂದ್ರ ಮಹಾತ್ಮೆ” ಡಾ.ರಾಜ್ಕುಮಾರ್ ಅವರ ವೃತ್ತಿಜೀವನದ ಮೈಲಿಗಲ್ಲು ಚಿತ್ರ. ಆದರೆ ಈ ಸಿನಿಮಾ ತಯಾರಾಗುವಾಗ ಮತ್ತು ಬಿಡುಗಡೆಯಾದಾಗ ಅಣ್ಣಾವ್ರು ಹಲವು ಸವಾಲುಗಳನ್ನು ಎದುರಿಸಬೇಕಾಯಿತು.
ಈ ಸಿನಿಮಾದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಪಾತ್ರ ಅತ್ಯಂತ ಪವಿತ್ರ ಮತ್ತು ಸೂಕ್ಷ್ಮವಾಗಿತ್ತು. ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ನಟಿಸಬೇಕಿತ್ತು. ಒಬ್ಬ ಕಲಾವಿದರಾದವರು ಹೇಗೆ ಇರಬೇಕು ಎಂಬುದಕ್ಕೆ ರಾಜ್ಕುಮಾರ್ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಲು 45 ದಿನಗಳ ಕಾಲ ಕಠಿಣ ವ್ರತ ಆಚರಿಸಿದ್ದರು ಎಂಬುದೇ ಬಹುದೊಡ್ಡ ಉದಾಹರಣೆಯಾಗುತ್ತದೆ. ಮಾಂಸಾಹಾರ, ಈರುಳ್ಳಿ-ಬೆಳ್ಳುಳ್ಳಿ ತ್ಯಜಿಸಿ, ನೆಲದ ಮೇಲೆ ಮಲಗಿ, ದಿನಾ ಮಂತ್ರಾಲಯದ ಮಣ್ಣನ್ನು ಹಣೆಗೆ ಧರಿಸುತ್ತಿದ್ದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ದೊಡ್ಡ ಸವಾಲಾಗಿತ್ತು. ಆದರೆ ಈ ಸಿನಿಮಾದಲ್ಲಿ ರಾಜ್ ಕುಮಾರ್ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡುತ್ತಿದ್ದಾರೆ ಎಂದಾಗ ಒಬ್ಬ ನಟ ಸಂತನ ಪಾತ್ರ ಮಾಡುವುದು ಸರಿಯಲ್ಲ ಎಂದು ಕೆಲವು ಮಠಾಧೀಶರು ಮತ್ತು ಸಂಪ್ರದಾಯವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. “ಸಿನಿಮಾ ನಟನಿಗೆ ಗುರುಗಳ ವೇಷ ಕೊಡುವುದು ಅಪಚಾರ” ಎಂಬ ವಾದ ಮಂಡಿಸಲಾಗಿತ್ತು. ಇದರಿಂದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ವಿವಾದ ಸೃಷ್ಟಿಯಾಗಿತ್ತು. ಆದರೆ ಮಂತ್ರಾಲಯದ ಪೀಠಾಧಿಪತಿಗಳು ರಾಜ್ಕುಮಾರ್ ಅವರ ಭಕ್ತಿ ಮತ್ತು ಶ್ರದ್ಧೆಯನ್ನು ಮೆಚ್ಚಿ ಆಶೀರ್ವದಿಸಿದ ನಂತರ ವಿರೋಧ ತಣ್ಣಗಾಯಿತು.
ರಾಘವೇಂದ್ರ ಮಹಾತ್ಮೆ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಹುದು ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲವು ಸಂಘಟನೆಗಳು ಬಿಡುಗಡೆಗೆ ತಡೆಯೊಡ್ಡುವ ಬೆದರಿಕೆ ಹಾಕಿದ್ದವು. ಆದರೆ ಚಿತ್ರ ನೋಡಿದ ನಂತರ ಎಲ್ಲರೂ ಮೆಚ್ಚಿಕೊಂಡರು. ಎಲ್ಲಾ ಅಡೆತಡೆಗಳನ್ನು ಮೀರಿ “ರಾಘವೇಂದ್ರ ಮಹಾತ್ಮೆ” ಸೂಪರ್ ಹಿಟ್ ಆಯಿತು. ರಾಜ್ಕುಮಾರ್ ಅವರ ಅಭಿನಯಕ್ಕೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಸಿಕ್ಕಿತು. ಭಕ್ತರು ಚಿತ್ರಮಂದಿರವನ್ನೇ ದೇವಸ್ಥಾನವೆಂದು ಭಾವಿಸಿ ಚಪ್ಪಲಿ ಹೊರಗೆ ಬಿಟ್ಟು ಸಿನಿಮಾ ನೋಡಿದ್ದರು ಎಂಬ ವಿಚಾರವನ್ನು ಓದುತ್ತಿದ್ದ ನನಗೆ ನನ್ನ ಗೆಳೆಯ ಹೇಳಿದ ಮಾತುಗಳು ಮತ್ತೆ ನೆನಪಾಯಿತು. ಬಹುಶಃ ರಾಜ್ ಕುಮಾರ್ ಸಿನಿಮಾಗಳಿಗೆ ಮಾತ್ರ ಇಂತಹ ಶಕ್ತಿ ಇತ್ತು ಎಂದು ನನಗೇ ಆಗ ಅನಿಸಿತು.
ಹೌದು ರಾಜ್ ಕುಮಾರ್ ಮನುಷ್ಯರ ಮಿದುಳು ಮತ್ತು ನಾಲಿಗೆಗೆ ಬೆಲೆ ಕೊಡದೇ ಚಪ್ಪಲಿಯ ಗುಣಕ್ಕೆ ಹೆಚ್ಚಿನ ಮಹತ್ವಕೊಟ್ಟಿದ್ದರೇನೋ ಎಂದೆನಿಸುತ್ತದೆ. ಇಂದಿಗೂ ಚಪ್ಪಲಿಯನ್ನು ಕೆಲವು ತಳಸಮುದಾಯಗಳ ಪ್ರತೀಕ ಎಂದು ಕರೆಯುವಾಗ ಹರಳಯ್ಯನ ಚಪ್ಪಲಿಗೆ ನೆತ್ತಿಯ ಮೇಲೆ ಸ್ಥಾನ ಕೊಟ್ಟ ಕಲ್ಯಾಣದ ಬಸವಣ್ಣ ಮತ್ತು ತಾನೊಬ್ಬ ಮೇರು ನಟನಾಗಿ ನನ್ನದು ಕಲಾವಿದರ ಜಾತಿ ಎಂದು ಬಹಿರಂಗವಾಗಿ ಸಾರಿ ಜಾತಿ-ಧರ್ಮಗಳ ಮಲಿನದಿಂದ ತಪ್ಪಿಸಿಕೊಂಡು ತಾವರೆಯ ಎಲೆಯಂತಿದ್ದ ರಾಜ್ ಕುಮಾರ್ ಅವರಿಗೂ ನನಗ್ಯಾವ ವ್ಯತ್ಯಾಸವೂ ಕಾಣಲಿಲ್ಲ. ರಾಜ್ ಕುಮಾರ್ ಕುರಿತು ಇಂದಿಗೂ ವಿವಾದಗಳು ಕೇಳಿಬಂದಾಗ ನಾನು ರಾಜ್ ಕುಮಾರ್ ಸಿನಿಮಾಗಳನ್ನು ಹೆಚ್ಚೆಚ್ಚು ನೋಡುತ್ತೇನೆ. ಈಗೇ ಏನಾದರೊಂದು ಹೊಸತನ್ನು ಕಲಿಯುತ್ತೇನೆ ಅಷ್ಟೇ…..