ಚಾಮರಾಜನಗರ: ಕರ್ನಾಟಕ ಸ್ವಾಭಿಮಾನ ಹಬ್ಬದ ಅಂಗವಾಗಿ ಲೈಂಗಿಕ ಕಾರ್ಮಿಕರು, ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ ಮತ್ತು ಸಮತಾ ಸೊಸೈಟಿಯ ಸಹಯೋಗದಲ್ಲಿ ಚಾಮರಾಜನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಜೂ.15 ರಂದು ಫ್ರೈಡ್ ಫೆಸ್ಟಿವಲ್ ಮತ್ತು ನಮ್ಮ ಅಸ್ತಿತ್ವ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪಾ ಬುದ್ಧೆ ತಿಳಿಸಿದರು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮೂಂಭಾಗ ಅಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಮೆರವಣಿಗೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಅವರು ಚಾಲನೆ ನೀಡುವರು. ಬಳಿಕ ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯವಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಮ್ಮ ಫ್ರೈಡ್ ಮೆರವಣಿಗೆಯ ನಂತರ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಮ್ಮ ಅಸ್ತಿತ್ವದ ಸಂಜೆ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 250-300 ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯ ಯಶ್ ಮಾತನಾಡಿ, ಪ್ರತಿಯೊಂದು ಸಮುದಾಯದವರಿಗೂ ಇತಿಹಾಸ ಇರುವಂತೆ ನಮ್ಮ ಸಮುದಾಯಕ್ಕೂ ಒಂದು ಇತಿಹಾಸವಿದೆ. ಅದರಂತೆ ಜೂನ್ ತಿಂಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. 10-15 ವರ್ಷಗಳಿಂದ ರಾಜ್ಯದಲ್ಲಿ ಸ್ವಾಭಿಮಾನ ಹಬ್ಬ ಎಂಬ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿಯೊಂದು ಜಿಲ್ಲೆಯಲ್ಲೂ ಮಾಡುವ ಉದ್ದೇಶದಿಂದ ಚಾಮರಾಜನಗರದಲ್ಲಿ ಶುರು ಮಾಡುತ್ತಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಬೆಂಗಳೂರು ಫ್ರೈಡ್ ಎಂದು ಆಚರಣೆ ಮಾಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರ-2026 ರ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಸಮುದಾಯದವರ ಜೊತೆ ಚರ್ಚಿಸದೇ ತರಾತುರಿಯಲ್ಲಿ ಬಿಲ್ ತಂದಿದ್ದಾರೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ನಾವು ಮೆಡಿಕಲ್ ಬೋರ್ಡ್ ಮುಂದೆ ನಮ್ಮ ಜೆಂಡರ್ ಗುರುತಿಸುವುದು ಎಷ್ಟು ಸರಿ? ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಈ ಕಾನೂನನ್ನು ಜಾರಿ ಮಾಡಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮತಾ ಸೊಸೈಟಿಯ ಸದಸ್ಯರಾದ ಸುಮಾ, ದೊಡ್ಡಸ್ವಾಮಿ, ಮೈಕಲ್ ಮದನ್ ಕಾಮರಾಜು, ವೆಂಕಟೇಶ್ ಹಾಜರಿದ್ದರು.