ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಭಾರೀ ಬಹುಮತದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ.
ಇತ್ತೀಚೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 1950 ರ ಬಂಗಾಳ ಕಾನೂನು ಮತ್ತು 2018 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ನೋಟಿಸ್ ಜಾರಿ ಮಾಡಿ, ಅಧಿಕೃತ ಪ್ರಮಾಣೀಕರಣವಿಲ್ಲದೆ ಯಾವುದೇ ದನ ಅಥವಾ ಎಮ್ಮೆಗಳನ್ನು ವಧೆಗೆ ಯೋಗ್ಯವೆಂದು ಘೋಷಿಸಲಾಗುವುದಿಲ್ಲ ಎಂದು ಪುನರುಚ್ಚರಿಸಿದೆ. ಈ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗೋಹತ್ಯೆ ಮಾಡುವುದನ್ನು ನಿಷೇಧಿಸಿದೆ.

ಸರ್ಕಾರಿ ಆದೇಶದಲ್ಲಿ, “ಯಾವುದೇ ವ್ಯಕ್ತಿಯು ಯಾವುದೇ ಪ್ರಾಣಿಯನ್ನು(ಎತ್ತುಗಳು, ಹಸುಗಳು, ಕರುಗಳು, ಎಮ್ಮೆಗಳು, ಎಮ್ಮೆ ಕರುಗಳು ಮತ್ತು ಕೋಣಗಳು) ವಧೆಗೆ ಯೋಗ್ಯವಾಗಿದೆ ಎಂಬ ಪ್ರಮಾಣಪತ್ರವನ್ನು ಪಡೆಯದ ಹೊರತು ವಧಿಸಬಾರದು” ಎಂದು ಹೇಳಲಾಗಿದೆ.
ಪ್ರಾಣಿಯು 14 ವರ್ಷಕ್ಕಿಂತ ಮೇಲ್ಪಟ್ಟದ್ದಾಗಿದ್ದು, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಅನರ್ಹವಾಗಿದ್ದರೆ ಅಥವಾ ವಯಸ್ಸು, ಗಾಯ, ವಿರೂಪತೆ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದಾಗಿ ಶಾಶ್ವತವಾಗಿ ಅಸಮರ್ಥವಾಗಿದ್ದರೆ ಮಾತ್ರ ಸ್ಥಳೀಯ ನಾಗರಿಕ ಅಧಿಕಾರಿಗಳು ಮತ್ತು ಸರ್ಕಾರಿ ಪಶುವೈದ್ಯರು ಜಂಟಿಯಾಗಿ ಪ್ರಮಾಣೀಕರಣವನ್ನು ನೀಡಬಹುದಾಗಿದೆ.
ನಿಯಮ ಉಲ್ಲಂಘಿಸಿದರೆ ಆರು ತಿಂಗಳ ಜೈಲು ಶಿಕ್ಷೆ, 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.