ಬಂಡೀಪುರದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದವರ ಬಂಧನ

ಮಣಿಕಂಠ ಜನತಾ ರಾಯಭಾರಿ
1 Min Read

ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ವಿಶೇಷ ಹುಲಿ ಸಂರಕ್ಷಣಾ ದಳದವರು (ಎಸ್‌ಟಿಪಿಎಫ್) ಬಂಧಿಸಿದ್ದಾರೆ.

ತಾಲೂಕಿನ ಬನ್ನಿತಾಳಪುರ ಗ್ರಾಮದ ಶಿವಕುಮಾರ್(25) ಹಾಗೂ ಮನೋಜ್‌ಕುಮಾ‌ರ್(25) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯವನ್ನು  ಮುಂದುವರಿಸಿದ್ದಾರೆ.

ಗುರುವಾರ ಮುಂಜಾನೆ 2 ಗಂಟೆ ಸಮಯದಲ್ಲಿ ವಡ್ಡರಹಳ್ಳಿ ಗ್ರಾಮದ ಸಮೀಪ ಎಸ್‌ಟಿಪಿಎಫ್ ಪ್ಲಟೂನ್-1ರ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮರದ ಹಿಡಿಯುಳ್ಳ ಒಂಟಿ ನಳಿಕೆಯ ನಾಡಬಂದೂಕು, ಎರಡು ಜೀವಂತ ಕಾಡುಮೊಲಗಳು, ಕೆಎ-10 ಇಜೆ-4148 ನೋಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್‌ಎಲ್ 100 ದ್ವಿಚಕ್ರ ವಾಹನ ಹಾಗೂ ಹೆಡ್ ಟಾರ್ಚ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ಅಮರ್, ಆನಂದ್‌, ರವಿಕುಮಾ‌ರ್, ವಿನಯ್, ಚಂದ್ರಶೇಖರ್, ಯಾಸೀನ್, ನಾರಾಯಣ್‌ ಭಾಗವಹಿಸಿದ್ದರು.

Share this Article
Leave a comment