ಚಾಮರಾಜನಗರ: ಶರಣರ ವಚನದ ಸಾರವನ್ನು ಅರಿತುಕೊಳ್ಳುವ ಮೂಲಕ ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಸಿದ್ದಮಲ್ಲೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ನಗರದ ಮಹಾ ಮನೆಯಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಬಸವೇಶ್ವರ, ಅಕ್ಕ ಮಹಾದೇವಿ ಜಯಂತಿ ಹಾಗೂ ಲಿಂ.ಗೌರಮ್ಮ ಚನ್ನಬಸಪ್ಪ ಹಾಗೂ ವೈ.ಎಂ.ಪುಟ್ಟ ಮಲ್ಲಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿ ಬಸವಾದಿ ಶರಣರು ಬಿತ್ತಿದ ಬೀಜ ಇಂದು ಹೆಮ್ಮಾರವಾಗಿ ಬೆಳೆದು ಎಲ್ಲರಿಗೂ ಫಲ ನೀಡುತ್ತಿದೆ. ಬಸವಣ್ಣ ಮತ್ತು ಅಕ್ಕಮಹದೇವಿ ಅವರ ವಿಚಾರಧಾರೆಗಳು ಇಂದಿಗೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕಾಯಕ ತತ್ವವನ್ನು ಜಗತ್ತಿಗೆ ಸಾರಿದರು. ಗಂಡು-ಹೆಣ್ಣು ಎಂಬ ಭೇದಭಾವ ಇಲ್ಲ ಎಂದು ಹೇಳುವ ಮೂಲಕ ಮಹಿಳೆಗೆ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು. ಅಕ್ಕನಿಗೆ ಬೇಡದ ಜನಿವಾರ ನನಗೂ ಬೇಡ ಎಂದು ತ್ಯಜಿಸಿ, ಸ್ವಾತಂತ್ರ್ಯ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಬಸವಣ್ಣ ಮತ್ತು ಅಕ್ಕಮಹಾದೇವಿ ಅವರ ವಚನಗಳು ಇಂದಿಗೂ ಹೆಚ್ಚು ಪ್ರಚಲಿತವಾಗಿದೆ. ಜಾತಿ ವ್ಯವಸ್ಥೆ, ಸ್ತ್ರೀಯರ ಶೋಷನೆ ಇದ್ದ ಆ ಕಾಲ ಘಟ್ಟದಲ್ಲಿಯೇ ಅದನ್ನು ವಿರೋಧಿಸಿ, ಹೋರಾಟ ಮಾಡಿದರು. ವಚನಗಳ ಮೂಲಕ ಜನರಲ್ಲಿ ಕ್ರಾಂತಿಯನ್ನು ಮಾಡಿದರು ಎಂದು ತಿಳಿಸಿದರು.
ಯಾನಗಳ್ಳಿ ಚನ್ನಬಸಪ್ಪ ಹಾಗೂ ಯಣಗುಂಬ ಪುಟ್ಟಮಲ್ಲಪ್ಪ ಅವರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಬ್ಬರು ಹಿರಿಯರು ಸಹ ಸಮಾಜಕ್ಕೆ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದವರು. ಸದಾ ಇತರರ ಚಿಂತನೆ ಮಾಡುವ ಜೊತೆಗೆ ಅವರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದರು. ಗ್ರಾಮವನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ನೊಂದವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಪೂಜ್ಯ ರಾಜೇಂದ್ರಶ್ರೀಗಳು ಸ್ಥಾಪನೆ ಮಾಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಸಂಘಟನೆಯ ಜೊತೆಗಗೆ ದತ್ತಿ ಕಾರ್ಯಕ್ರಮಗಳ ಮೂಲಕ ಶರಣರ ವಿಚಾರಧಾರೆಗಳನ್ನು ಪ್ರಚುರು ಪಡಿಸುವಲ್ಲಿ ಶ್ರಮಿಸುತ್ತಿದೆ. ಕದಳಿ ಮಹಿಳಾ ವೇದಿಕೆಯು ಸಹ ಹೆಚ್ಚಿನ ಸಹಕಾರ ನೀಡುತ್ತಿದ್ದು, ದತ್ತಿ ಕಾರ್ಯಕ್ರಮಗಳು ಇನ್ನು ಹೆಚ್ಚು ನಡೆಯುವಂತೆ ಆಗಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಆರ್.ಎಸ್. ಸುರೇಶ್ ರಾಮಸಮುದ್ರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ದತ್ತಿ ದಾನಿಗಳಾದ ನಾಗಶ್ರೀಪ್ರತಾಪ್, ಯನಗುಂಬ ವೈ.ಪಿ. ರಾಜೇಂದ್ರಪ್ರಸಾದ್, ಕಲಾವಿದ ಉಮ್ಮತ್ತೂರು ಬಸವರಾಜು, ಕಾರ್ಯದರ್ಶಿ ಅನ್ನಪೂರ್ಣಸ್ವಾಮಿ, ಪರಿಷತ್ನ ಎಂ.ಸುಂದರ್, ಆರ್.ಎಸ್. ಲಿಂಗರಾಜು, ಕದಳಿ ಮಹಿಳಾ ವೇದಿಕೆಯ ಯಳಂದೂರು ತಾಲೂಕು ಅಧ್ಯಕ್ಷೆ ಲಲಿತಾ, ರತ್ನಮ್ಮ ಬಸವರಾಜು, ರತ್ನಮ್ಮ, ಸುಂದ್ರಮ್ಮ, ವಿಜಯಾಂಬ, ವಿಜಯಕುಮಾರಿ, ಕಮಲಮ್ಮ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.