ಚಾಮರಾಜನಗರ: ಸಂತೇಮರಹಳ್ಳಿ ಮುಖ್ಯರಸ್ತೆಯ ಭೋಗಾಪುರ ಗೇಟ್ ಬಳಿ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ಮೃತಪಟ್ಟಿದ್ದಾರೆ.
ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಸೋಮಣ್ಣ (58) ಮತ್ತು ಸಿದ್ದರಾಜು (53) ಮೃತ ದುರ್ದೈವಿಗಳು. ಇವರು ಬೈಕ್ ನಲ್ಲಿ ಭೋಗಾಪುರ ಗೇಟ್ ನಿಂದ ದೊಡ್ಡರಾಯಪೇಟೆ ಗ್ರಾಮದ ಕಡೆಗೆ ಹೋಗುವ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ ಗೆ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ವಿಚಾರ ತಿಳಿಯುತ್ತಲೇ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.