ಮೈಸೂರು: ನವೆಂಬರ್ 26 ರ ಸಂವಿಧಾನ ದಿನದಂದು ಮೈಸೂರು ನಗರದಲ್ಲಿ ಎರಡು ಸಮಾವೇಶ ಆಯೋಜನೆಗೆ ಸಿದ್ಧತೆಗಳು ಆರಂಭಗೊಂಡಿದೆ. ಈ ಬಗ್ಗೆ ದಲಿತ ಸಮುದಾಯದಲ್ಲಿ ಅಪಸ್ವರ ವ್ಯಕ್ತವಾಗಿದ್ದು, ಸಂಘರ್ಷದ ಮುನ್ಸೂಚನೆ ನೀಡಿದೆ.
ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮುಂದಾಳತ್ವದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ವತಿಯಿಂದ ಜನರ ಧ್ವನಿ ಸಂವಿಧಾನದ ಧ್ವನಿ ಎಂಬ ಜಾಗೃತಿ ಸಮಾವೇಶ ಆಯೋಜನೆಗೆ ಮುಂದಾಗಿದ್ದಾರೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಸರ್ಕಾರದ ಕಾರ್ಯಕ್ರಮವಾಗಿ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಉಭಯ ನಾಯಕರು ಅ.26 ರ ಸೋಮವಾರ ಮೈಸೂರು ನಗರದಲ್ಲಿ ದಲಿತ ಮುಖಂಡರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿದ್ದಾರೆ. ಮುಖಂಡರ ಅಭಿಪ್ರಾಯ ಪಡೆದು ಸಮಾವೇಶದ ಯಶಸ್ಸಿಗೆ ಸಹಕಾರ ಕೋರಿದ್ದಾರೆ. ಎರಡೂ ಸಮಾವೇಶವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲು ಮುಂದಾಗಿದ್ದಾರೆ.
ರಾಜ್ಯದ ಎಲ್ಲ ದಲಿತ ಸಂಘರ್ಷ ಸಮಿತಿ ನಾಯಕರು ಮತ್ತು ಮೈಸೂರು ಭಾಗದ ಎಲ್ಲ ಸಮುದಾಯದ ಮುಖಂಡರ ಸಭೆ ನಡೆಸಿದ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರಜಾಪ್ರಭುತ್ವ ರಕ್ಷಣೆ ಮತ್ತು ಸಂವಿಧಾನ ಉಳಿವಿನ ಆಶಯದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸುವುದಾಗಿ ಪ್ರಕಟಿಸಿದರು.
ಅದರ ಮರು ದಿನವೇ ಅದೇ ದಿನಾಂಕದಂದು ಸರ್ಕಾರದಿಂದ ಐಕ್ಯತಾ ಸಮಾವೇಶದ ಮಾತುಕತೆ ಆರಂಭಗೊಂಡಿತು. ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಮೈಸೂರು ಭಾಗದ ದಲಿತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಿದ್ದಾರೆ. ಒಂದೇ ದಿನ ಎರಡು ಸಮಾವೇಶಕ್ಕೆ ಮುಂದಾಗಿರುವುದು ದಲಿತ ಸಮುದಾಯದ ಒಡಕಿಗೆ ಕಾರಣವಾಗುತ್ತದೆಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ಮೈಸೂರಲ್ಲಿ ನಡೆಯುವ ಕಾರ್ಯಕ್ರಮದ ಉಸ್ತುವಾರಿಯನ್ನು ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಯಾಕೇ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ದಲಿತ ಜನಪ್ರತಿನಿಧಿಗಳಿಲ್ಲವೇ? ರಾಜಕೀಯಕೋಸ್ಕರ ದಲಿತ ಸಮುದಾಯಗಳನ್ನು ಒಡೆಯುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಸಮುದಾಯ ದಿಕ್ಕು ತಪ್ಪಿಸಬೇಡಿ: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶದ ಪೂರ್ವ ಸಿದ್ಧತೆಗಳು ಪ್ರಗತಿಯಲ್ಲಿರುವಾಗಲೇ ಐಕ್ಯತಾ ಸಮಾವೇಶಕ್ಕೆ ಮುಂದಾಗಿರುವುದು ಸರಿಯಲ್ಲ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಹೇಳಿದ್ದಾರೆ.
ಸರ್ಕಾರದ ಐಕ್ಯತಾ ಸಮಾವೇಶವು ರಾಜಕೀಯ ದುರುದ್ದೇಶದಿಂದ ಕೂಡಿದೆ. ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಪಕ್ಷಕ್ಕೂ ಹಿನ್ನೆಡೆಯಾಗುತ್ತದೆ. ಮೈಸೂರು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸುವುದು ಒಳ್ಳೆಯದು. ಸಮುದಾಯ ದಿಕ್ಕು ತಪ್ಪಿಸುವ ತೀರ್ಮಾನ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಕೋಟ್
ಒಳ ಮೀಸಲಾತಿ ಹಂಚಿಕೆಯ ಗೊಂದಲ ಮತ್ತು ಇನ್ನಿತರ ಕಾರಣಗಳಿಂದ ಒಡೆದಿರುವ ಪರಿಶಿಷ್ಟ ಜಾತಿಯ 101 ಜಾತಿಯ ಜನರನ್ನು ಒಗ್ಗೂಡಿಸುವ ಐಕ್ಯತಾ ಸಮಾವೇಶವನ್ನು ನ.26 ರಂದು ಮೈಸೂರಲ್ಲಿ ಹಮ್ಮಿಕೊಳ್ಳುತ್ತಿದ್ದು, ಪರಿಶಿಷ್ಟರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲು ಸಮಾವೇಶ ಆಯೋಜಿಸಲಾಗುತ್ತಿದೆ.
-ಪಿ.ಎಂ. ನರೇಂದ್ರಸ್ವಾಮಿ, ಕೃಷಿ ಸಚಿವ
ಕೋಟ್
ಜನರ ದ್ವನಿ ಸಂವಿಧಾನದ ದ್ವನಿ ಎಂಬ ಜಾಗೃತಿ 26 ರಂದು ಚಾಲನೆಗೊಂಡು ವರ್ಷಪೂರ್ತಿ ರಾಜ್ಯಾದ್ಯಂತ ಸಂಚರಿಸಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಾಗಿರವ ಸಮಸ್ಯೆಗಳ ಕುರಿತು ಮತ್ತು ಸಂವಿಧಾನವನ್ನು ಬಲಗೊಳಿಸುವ ಹಾಗೂ ದಲಿತ ಸಮುದಾಯಗಳ ಉಪಜಾತಿಗಳ ನಡುವೆ ಉಂಟಾಗಿರುವ ಒಡಕುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತದೆ.
-ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ