ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷವನ್ನು ತೊರೆದು ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಹಾಗೂ ರಾಜ್ಯದಲ್ಲಿ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ಸಮಯದಿಂದ ತಮಿಳುನಾಡು ಬಿಜೆಪಿಯ ಕಾರ್ಯವೈಖರಿ ಮತ್ತು ಮೈತ್ರಿ ವಿಚಾರವಾಗಿ ಅಣ್ಣಾಮಲೈ ಅಸಮಾಧಾನಗೊಂಡಿದ್ದರು. ದ್ರಾವಿಡ ರಾಜಕಾರಣಕ್ಕೆ ಪರ್ಯಾಯವಾಗಿ ಕೇವಲ ರಾಷ್ಟ್ರೀಯ ಪಕ್ಷದ ಮುಖವಾಡ ಧರಿಸಿ ಗೆಲ್ಲುವುದು ಕಷ್ಟ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ.
ಹೊಸ ಪ್ರಾದೇಶಿಕ ಪಕ್ಷ: ತಮಿಳುನಾಡಿನ ಮಣ್ಣಿನ ಗುಣಕ್ಕೆ ತಕ್ಕಂತೆ ಹೊಸದಾದ ಪ್ರಾದೇಶಿಕ ಪಕ್ಷವನ್ನು ಕಟ್ಟಿ, ಮುಂಬರುವ ಚುನಾವಣೆಗಳನ್ನು ಎದುರಿಸಲು ಅಣ್ಣಾಮಲೈ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರ ಆಪ್ತ ವಲಯದಿಂದ ಮಾಹಿತಿ ಲಭ್ಯವಾಗಿದೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರಿಗೆ ತಮಿಳುನಾಡಿನ ಯುವಕರಲ್ಲಿ ಭಾರಿ ಕ್ರೇಜ್ ಇದೆ. ತಮ್ಮದೇ ಆದ ಬೆಂಬಲಿಗರ ದೊಡ್ಡ ಪಡೆಯನ್ನು ಹೊಂದಿರುವ ಅವರು, ಹೊಸ ಪಕ್ಷದ ಮೂಲಕ ದ್ರಾವಿಡ ಕೋಟೆ ಸೀಳಲು ಪ್ಲಾನ್ ಮಾಡಿದ್ದಾರೆ.
ಅಣ್ಣಾಮಲೈ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ತಮಿಳುನಾಡಿನಲ್ಲಿ ಪಕ್ಷಕ್ಕೆ ಹೊಸ ಕಳೆ ಬಂದಿತ್ತು. ‘ಎನ್ ಮಣ್ಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆಯ ಮೂಲಕ ಅವರು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದರು.
ಕೇಂದ್ರ ನಾಯಕರೊಂದಿಗೆ ಭಿನ್ನಾಭಿಪ್ರಾಯ: ಎಐಎಡಿಎಂಕೆ (AIADMK) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ನಾಯಕರ ನಿರ್ಧಾರಕ್ಕೆ ಅಣ್ಣಾಮಲೈ ವಿರುದ್ಧವಾಗಿದ್ದರು. ಸ್ಥಳೀಯವಾಗಿ ಸ್ವತಂತ್ರವಾಗಿ ಬೆಳೆಯಬೇಕೆಂಬ ಅವರ ಹಠವೇ ಈಗ ಪಕ್ಷ ತೊರೆಯುವ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಅಣ್ಣಾಮಲೈ ಅಧಿಕೃತವಾಗಿ ಬಿಜೆಪಿಯಿಂದ ಹೊರಬಂದರೆ, ಅದು ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಮುಖಂಡರಿಗೆ ಮತ್ತು ದೆಹಲಿ ಹೈಕಮಾಂಡ್‌ಗೆ ಭಾರಿ ಆಘಾತ ನೀಡಲಿದೆ. ಇತ್ತ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೂ ಅಣ್ಣಾಮಲೈ ಅವರ ಹೊಸ ಪಕ್ಷ ಭವಿಷ್ಯದಲ್ಲಿ ದೊಡ್ಡ ಸವಾಲಾಗುವ ಸಾಧ್ಯತೆ ದಟ್ಟವಾಗಿದೆ.