ಚಾಮರಾಜನಗರ: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಮಧ್ಯರಂಗನಾಥ ದೇಗುಲ ಗುರುವಾರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಂತಿಮ ಹಂತದ ಪೂರ್ವ ಸಿದ್ಧತೆಗಳನ್ನು ಶಾಸಕ ಎಂ.ಆರ್ ಮಂಜುನಾಥ್ ಪರಿಶೀಲಿಸಿದರು.
ಕೊಳ್ಳೇಗಾಲ ತಾಲೂಕಿನ ಪುರಾಣ ಪ್ರಸಿದ್ಧ ಮಧ್ಯ ರಂಗನಾಥಸ್ವಾಮಿ ದೇಗುಲವು ಪ್ರಾಚ್ಯವಸ್ತು ಇಲಾಖೆ ಹಾಗೂ ದಾನಿಗಳ ನೆರವಿನಿಂದ ಸುಮಾರು 5.38 ಕೋಟಿ ಅನುದಾನದಲ್ಲಿ ಪುನರ್ ನವೀಕರಣಗೊಂಡಿದ್ದು, ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುತ್ತಿರುವ ಹಿನ್ನೆಲೆ ರಸ್ತೆ ಕಾಮಗಾರಿ ಸಿದ್ಧತೆ, ದೇಗುಲದ ಕಾಮಗಾರಿಗಳ ಪಕ್ಷಿ ನೋಟ, ಗಣ್ಯರಿಗೆ ಕುಳಿತುಕೊಳ್ಳಲು ವೇದಿಕೆ, ಸಮಾರಂಭಕ್ಕೆ ಸೂಕ್ತ ಸ್ಥಳ, ದಾಸೋಹ, ಗಣ್ಯರಿಗೆ ಪ್ರಸಾದದ ಸಿದ್ಧತೆ ಕುರಿತು ಸಹ ಮಾಹಿತಿ ಪಡೆದುಕೊಂಡರು. ಬಳಿ ಹೆಲಿಪ್ಯಾಡ್ ಸೇರಿದಂತೆ ಇನ್ನಿತರ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಕಾರ್ಯಕ್ರಮದಲ್ಲಿ ಅತಿ ಗಣ್ಯ ವ್ಯಕ್ತಿಗಳು ಬರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಬಸವರಾಜು, ಲೋಕೋಪಯೋಗಿ ಇಲಾಖೆಯ ಇಇ ಕಿರಣ್ ಕುಮಾರ್, ಎಇಇ ಕುಮಾರ್, ಪಿ ಆರ್ ಡಿ ಎ ಡಬ್ಲ್ಯೂ ಕುಮಾರ್,ಎಇ ಸುರೇಂದ್ರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳಾದ ಚೆಲುವರಾಯಸ್ವಾಮಿ, ಸುಪ್ರೀತ್, ಧಾರ್ಮಿಕ ದತ್ತಿ ಇಲಾಖೆಯ ಸುರೇಶ್, ಮುಖಂಡರುಗಳಾದ ಗೋವಿಂದ, ವೆಂಕಟಾಚಲಪತಿ, ಎಸ್.ಆರ್.ಮಹದೇವ್, ಚಿನ್ನವೆಂಕಟ, ವೆಂಕಟೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.