ಯಳಂದೂರು: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಇನ್ನಿತರೆ ಪಕ್ಷಗಳಿಂದ ದಲಿತ ಸಿಎಂ ಅಸಾಧ್ಯವಾಗಿದ್ದು, ಬಿಎಸ್ಪಿಯಿಂದ ಮಾತ್ರ ದಲಿತರು ಮುಖ್ಯಮಂತ್ರಿಯಾಗಲು ಸಾಧ್ಯವಿದೆ ಎಂದು ಬಿಎಸ್‌ಪಿ ಕೇಂದ್ರೀಯ ಉಸ್ತುವಾರಿ ನಿತಿನ್ ಸಿಂಗ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಬಿಎಸ್‌ಪಿ ಯಳಂದೂರು ಬ್ಲಾಕ್ ಸಮಿತಿ ಬಹು ಜನರ ಜನಜಾಗೃತಿ ಕಾರ್ಯಕ್ರದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾನ್ಶಿರಾಂ ಅವರು ಬುದ್ಧ, ಬಸವ, ಫುಲೆ, ಶಾಹು ಮಹಾರಾಜ್, ರಾಮಸ್ವಾಮಿ ನಾಯ್ಕರ್, ನಾರಾಯಣ ಗುರು ಹಾಗೂ ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಬಹುಜನ ಸಮಾಜದ ಆಶಯಗಳು ಇರುವುದನ್ನು ಮನಗಂಡಿದ್ದರು. ನಾಲ್ವಡಿಯವರ ಜನಪರ ಆಡಳಿತಗಳಿಂದ ಪ್ರೇರೇಪಣೆಗೊಂಡು ಎಸ್ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ರಾಜ್ಯಾಧಿಕಾರ ಪಡೆಯಲು ರಾಜಕೀಯ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂಬುದನ್ನು ಕಂಡುಕೊಂಡರು. ಹಾಗಾಗಿ, ನಿರ್ಲಕ್ಷಿತ ಸಮುದಾಯಗಳು ಮನುವಾದಿಗಳ ಹಿಡಿತದಿಂದ ಹೊರಬಂದು ದೇಶದ ಗದ್ದುಗೆ ಹಿಡಿಯಬೇಕು ಎಂದು ಹೇಳಿದರು.

ಬಿಎಸ್‌ಪಿ ಸ್ವಾಭಿಮಾನದ ಸಂಘಟನೆಯಾಗಿ ಅಂಬೇಡ್ಕರ್ ಆಶಯದಂತೆ ಸರ್ವರಿಗೂ ರಾಜಕೀಯ ಮತ್ತು ಸಮಾನತೆ ಒದಗಿಸಲು ಕಟಿಬದ್ಧವಾಗಿದೆ. ಆದರೆ, ಬಿಎಸ್‌ಪಿ ಹೊರತುಪಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದಲಿತ ಮುಖ್ಯಮಂತ್ರಿ ಸ್ಥಾನ ನಿರೀಕ್ಷಿಸಲುಸಾಧ್ಯವಿಲ್ಲ’ ಎಂದರು.
ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ನಾಲ್ವಡಿ ಕೃಷ್ಣರಾಜರು ತಮ್ಮ ಆಡಳಿತದಲ್ಲಿ ಸಾಮಾನ್ಯ ಜನರಿಗೂ ಶಿಕ್ಷಣ, ಸಮಾನತೆ, ಜನಾಡಳಿತದ ಕನಸನ್ನು ಈಡೇರಿಸಿದ್ದರು. ತುಳಿತಕ್ಕೆ ಒಳಗಾದ ಮೂಲ ನಿವಾಸಿಗಳು ಸಹ ನಾಡು ಕಟ್ಟಲು ಅವಕಾಶ ಕಲ್ಪಿಸಿದ್ದರು ಎಂದು ತಿಳಿಸಿದರು.
ಬಿಎಸ್‌ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ್ ಮಾತನಾಡಿ, ಅಂಬೇಡ್ಕರ್ ವಾದ ನೀಲಿ ಬಣ್ಣ ಪ್ರತಿನಿಧಿಸುತ್ತದೆ. ಬಹುಜನ ಸಿದ್ಧಾಂತಗಳ ಮೂಲಕ ರಾಜಕೀಯ ಪ್ರವೇಶಿಸಿದ ಮಾಯಾವತಿ 31 ಸ್ಥಾನವನ್ನು ಪಡೆದು ಯುಪಿ ಮುಖ್ಯಮಂತ್ರಿ ಆದರು. ಕರ್ನಾಟಕದಲ್ಲಿ 2028ರಲ್ಲಿ 20 ಸ್ಥಾನ ಪಡೆದರೆ ದಲಿತರು ಮುಖ್ಯ ಮಂತ್ರಿ ಸ್ಥಾನಕ್ಕೆ ಏರಬಹುದು ಎಂದರು.

ಕಾರ್ಯಕ್ರಮದಲ್ಲಿ ಗಂಗಾಧರ್ ಬಹುಜನ್, ಜಾಕೀರ್ ಹುಸೇನ್, ಬ.ಮ.ಕೃಷ್ಣಮೂರ್ತಿ, ಎನ್.ನಾಗಯ್ಯ, ಕಾಂತಪ್ಪ ಆಲಂಕಾರ್, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷ ಶಂಕರ್ ಚೇತನ್, ಹೊನ್ನೂರು ಮಲ್ಲಿಕ್, ಕಾರ್ಯದರ್ಶಿ ಶಾಂತರಾಜ್, ರವಿ, ಶಿವಶಂಕರ್, ಮಣಿ, ಶಿವಾಲಂಕಾರಾಯ್ಕ, ಚಿನ್ನಮ್ಮ, ಬಸವರಾಜ್, ಶಿವಕುಮಾರ್, ಚಂದ್ರಕಾಂತ್, ಶಶಿಧರ್ ಭಾಗವಹಿಸಿದ್ದರು.