ಚಾಮರಾಜನಗರ: ರೈತರು, ಗ್ರಾಹಕರು ಹಾಗೂ ಕೆಇಬಿ ನೌಕರರ ಹಿತದೃಷ್ಟಿಯಿಂದ ವಿದ್ಯುತ್ ಖಾಸಗೀಕರಣ ನೀತಿಯನ್ನು ಕೈಬಿಡಬೇಕು ಎಂದು ಕೆಇಬಿ ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.
ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್, ನೌಕರರ ಸಂಘದ ವತಿಯಿಂದ ಟಾಟಾ ಪವರ್ ಕಂಪನಿಯವರು ಕರ್ನಾಟಕದಲ್ಲಿ ವಿದ್ಯುತ್ ವಿತರಣೆ ನಿರ್ವಹಿಸಲು ಕೆ.ಇ.ಆರ್.ಸಿ ಗೆ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ 3-4 ಬಾರಿ ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಕೆಇಬಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ದೇವೆ. ಆದರೆ ಖಾಸಗೀಕರಣ ವಿದ್ಯುತ್ ಕ್ಷೇತ್ರಕ್ಕೂ ಸನ್ನಿಹಿತವಾಗಿದೆ. ಅದರಂತೆ ಮುಂಬೈ ಟಾಟಾ ಪವರ್ ಕಂಪನಿಯು ಕರ್ನಾಟಕದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಕೆ.ಇ.ಆರ್.ಸಿ ಗೆ ಅರ್ಜಿಯನ್ನು ಸಲ್ಲಿಸಿದೆ. ಪ್ರಸ್ತುತ ಟೆಲಿಕಾಂ ಕ್ಷೇತ್ರ ಸಂಪೂರ್ಣ ಖಾಸಗೀಕರಣದಿಂದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಸರ್ಕಾರ ಹುಟ್ಟು ಹಾಕಿರುವ ಕಂಪನಿಗಳನ್ನು, ಸರ್ಕಾರವೇ ಕಿತ್ತು ಹಿಸುಕಿ ಸಾಯಿಸುವ ಪ್ರಕ್ರಿಯೆಯನ್ನು ನಾವು ಖಾಸಗೀಕರಣ ಎಂದು ಕರೆಯಬಹುದಾಗಿದೆ. ನೂರು ವರ್ಷಗಳ ಇತಿಹಾಸವಿರುವ ವಿದ್ಯುತ್ ಕ್ಷೇತ್ರದಲ್ಲಿ, ಸಾವಿರಾರು ಜನರು ಜೀವವನ್ನು ಮುಡಿಪಾಗಿಟ್ಟು ದೊಡ್ಡದಾಗಿ ಇಲಾಖೆಯನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕಾಡಂಚಿನ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಮಾಡುವಲ್ಲಿ ಇಲಾಖೆ ಹೆಚ್ಚು ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಪೂರೈಕೆಮಾಡಲು ಸಾಕಷ್ಟು ಅನುಕೂಲ ದೊರಕಿದೆ. ಆದರೆ ಹಿಂದಿನ ದಿನಗಳಲ್ಲಿ ನಮ್ಮ ನೌಕರರು ವಿದ್ಯುತ್ ಪೂರೈಕೆ ಮಾಡಲು ಸಾಕಷ್ಟು ಶ್ರಮವಹಿಸುತ್ತಿದ್ದರು. ಸಾವಿರಾರು ಕೋಟಿ ರೂ, ಆಸ್ತಿಯನ್ನು ಹೊಂದಿರುವ ಸಂಸ್ಥೆಯನ್ನು ಯಾರೋ ಖಾಸಗಿಯವರಿಗೆ ವಹಿಸುವುದು ಎಷ್ಟು ಸರಿಯಾದ ಕ್ರಮವಾಗಿದೆ ಎಂದು ಪ್ರಶ್ನಿಸಿದರು.
ಟಾಟಾ ಪವರ್ ಕಂಪನಿಯವರು ನೌಕರರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಹೇಳಿರಬಹುದು . ಆದರೆ ಟೆಲಿಕಾಂ ಕ್ಷೇತ್ರದಲ್ಲಿ ಬಿ.ಎಸ್.ಎನ್.ಎಲ್ ಗೆ ಆದ ಪರಿಸ್ಥಿತಿಯೇ ವಿದ್ಯುತ್ ಇಲಾಖೆಗೂ ಆಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಟಾಟಾ ಪವರ್ ಕಂಪನಿಯವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣವಾದರೇ ನೌಕರರಿಗಿಂತಲೂ, ರೈತರಿಗೆ ಹೆಚ್ಚಿನ ತೊಂದರೆಯಾಗಲಿದೆ. ಪ್ರಸ್ತುತ ಸಂದರ್ಭದಲ್ಲಿ ಅನ್ನದಾತರಿಗೆ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಗೆ ಕುತ್ತು ಉಂಟಾಗಲಿದೆ. ಮುಂದಿನ ದಿನಗಳಲ್ಲಿ ರೈತರು ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಮೂಲಕ 15-20 ಸಾವಿರ ರೂ, ಹಣವನ್ನು ವಸೂಲಿ ಮಾಡಲಾಗುತ್ತದೆ. ಪ್ರತಿ ತಿಂಗಳು 15-20 ಸಾವಿರ ರೂ, ಹಣವನ್ನು ಕಟ್ಟಿ ರೈತರು ಬೆಳೆಯಲು ಸಾಧ್ಯವಾಗುತ್ತದೆಯೇ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ಪ್ರದೀಪ್, ಸಹಾಯಕ ಕಾರ್ಯಪಾಲಕ ಮಹೇಶ್, ಧೃಪದ್, ಪ್ರಶಾಂತ್, ಸಿದ್ದರಾಜು, ಮಂಜುನಾಥ್, ಸಂಘದ ಮುರುಳಿಕೃಷ್ಣ, ಪ್ರಶಾಂತ್,ಸೋಮೇಶ್, ಶರಣ ಬಸಪ್ಪ, ಮಹದೇವಸ್ವಾಮಿ, ಚನ್ನಂಜಕುಮಾರ್, ಮರಿಸ್ವಾಮಿ, ಸತೀಶ್, ಮಂಜುನಾಥ್ ಹಾಗೂ ಇತರರು ಹಾಜರಿದ್ದರು.