ಚಾಮರಾಜನಗರ: ರೈತರ ಉಳಿವಿಗಾಗಿ ಕೆರೆ-ಕಟ್ಟೆಗಳನ್ನು ಉಳಿಸಿ, ಪರಿಸರವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಎಪಿಎಂಸಿ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 41,200 ಕೆರೆಗಳು ಇದ್ದು, ಮರಾಜನಗರ ಜಿಲ್ಲೆಯಲ್ಲಿ 690 ಕೆರೆಗಳ ಪುನರ್ಜೀವನಗೊಳಿಸಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈಗ ಏಳು ಜನರಿಗೆ ಒಂದು ಮರ ಆಮ್ಲಜನಕ ನೀಡುತ್ತಿದೆ ಎಂದು ವರದಿ ಹೇಳುತ್ತದೆ. ಶುದ್ಧ ಪರಿಸರವಿದ್ದರೆ ಪ್ರತಿಯೊಬ್ಬ ಮನುಷ್ಯರಿಗೆ ಶುದ್ಧ ಆರೋಗ್ಯವಿರುತ್ತದೆ. ರೈತರು ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಊಳು ತೆಗೆಸಿ ಜಮೀನಿಗೆ ಮಣ್ಣು ಹಾಕಿ ಕೊಂಡರೆ ಭೂಮಿ ಫಲವತ್ತತೆ ವೃದ್ಧಿಯಾಗಿ ರಸಗೊಬ್ಬರ ಕೀಟನಾಶಕ ಬಳಕೆ ಕಡಿಮೆಯಾಗುತ್ತದೆ. ಉತ್ತಮ ಆಹಾರ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಕೆರೆಗಳ ಸಂರಕ್ಷಣೆಯಿಂದ ಜಿಲ್ಲೆಯ 25,000 ಕೊಳವೆಬಾವಿಗಳ ಅಂತರ್ಜಲ ಹೆಚ್ಚುತ್ತದೆ. ಕೆರೆ ದಂಡೆಯ ಮೇಲೆ ಗಿಡಗಳನ್ನು ನೆಡುವ ಮೂಲಕ ಉಸಿರಾಟಕ್ಕೆ ಬೇಕಾದ ಉತ್ತಮ ಆಮ್ಲಜನಕ ಪಡೆಯಲು ಅನುಕೂಲವಾಗುತ್ತದೆ. ದೆಹಲಿ ಅಂತ ದೊಡ್ಡ ನಗರಗಳಲ್ಲಿ ಪರಿಸರ ಹಾನಿಯಾಗಿ ಆಮ್ಲಜನಕದ ಕೊರತೆ ಉಂಟಾಗಿದೆ ಇದನ್ನ ನಾವೆಲ್ಲ ಮನಗಾಣಬೇಕು ಎಂದು ಹೇಳಿದರು.
ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ ರಸಾಯನಿಕ ಹೆಚ್ಚು ಇರುವ ಕಾರಣ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಹುಟ್ಟುವ ಮಕ್ಕಳಲ್ಲಿ ರೋಗದ ಛಾಯೆ ಕಾಣುತ್ತಿದೆ. ಇದು ನಿಲ್ಲಬೇಕಾದರೆ ಸಾವಯುವ ಕೃಷಿ ಮೂಲಕ ಉತ್ತಮ ಆಹಾರ ಉತ್ಪಾದಿಸಿ ತಿನ್ನಬೇಕು. ಇದು ನಾವು ಮುಂದಿನ ತಲೆಮಾರಿಗೆ ಕೊಡುವ ಉಡುಗೊರೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಮಾತನಾಡಿ, ಕೊರೋನ ಸಂದರ್ಭದಲ್ಲಿ ಅಮ್ಲಜನಕ ಸರಬರಾಜು ಇಲ್ಲದ ಕಾರಣ ಹಲವಾರು ಜನರು ಚಾಮರಾಜನಗರದಲ್ಲಿ ಸಾವಿಗೀಡಾದರು. ಆಮ್ಲಜನಕ ಮರಗಳಿಂದಲೇ ಉತ್ಪಾದನೆಯಾಗುವುದು ಆದ್ದರಿಂದ ಪರಿಸರ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದರು
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಡಲಿಂಗಸ್ವಾಮಿ ಮಾತನಾಡಿ, ಪರಿಸರದ ಸಂರಕ್ಷಣಯಲ್ಲಿ ಶುದ್ದ ಗಾಳಿ ಸಿಗುವ ಜಿಲ್ಲೆ ದೇಶದಲ್ಲಿಯೇ ಚಾಮರಾಜನಗರ 4ನೇ ಸ್ಥಾನ ಪಡೆದಿದೆ. ಪರಿಸರ ಜಾಗೃತಿ ಕಾರ್ಯಗಾರ ಜನರನ್ನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಜಿಲ್ಲಾ ಉಪ ನಿರ್ದೇಶಕ ಬಸವಣ್ಣ ಮಾತನಾಡಿ, ರೈತರು ಮನಸು ಮಾಡಿದರೆ ವರ್ಷ ಪೂರ್ತಿ ಮರ ಗಿಡ ನೆಟ್ಟು ಪರಿಸರ ಸಂರಕ್ಷಿಸಲು ಸಾಧ್ಯವಿದೆ. ಆರೋಗ್ಯ ಕೆಟ್ಟಾಗ.ಆಸ್ಪತ್ರೆ ಬಿಲ್ ನೂಡಿದಾಗ ಅಘಾತವಾಗುತ್ತದೆ ಆದ್ದರಿಂದ ಉತ್ತಮ ಪರಿಸರ ಆಹಾರಕ್ಕಾಗಿ ನಾವೆಲ್ಲ ಶಪಥ ಮಾಡಬೇಕು ಎಂದರು.
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ ಮಾತನಾಡಿ, ಪ್ರೀತಿ ಪಾತ್ರರಾದ ತಾಯಿ ಸತ್ತಾಗ ಅವರ ತೂಕ 45 ಕೆಜಿ . ಅವರ ಋಣ ತೀರಿಸಲು 4500 ಮರ ಬೆಳೆಸಿ ಸಂತಾಪ ಸಲ್ಲಿಸಿದ ಮಗನ ರೀತಿಯಲ್ಲಿ ತಾಯಿ ಹೆಸರಲಿ ಗಿಡ ನೇಡಿ ಮರ ಬೆಳೆಸಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಾದೇವಸ್ವಾಮಿ, ಕಿರಗಸೂರು ಶಂಕರ್, ಜಿಲ್ಲಾಧ್ಯಕ್ಷ ಉಡಿಗಾಲ ರೇವಣ್ಣ, ಪಿ.ಸೋಮಶೇಖರ್ ಉಪಸ್ಥಿತರಿದ್ದರು.