ಚಾಮರಾಜನಗರ: ಸಂವಿಧಾನದ ಆಶಯದ ಜೊತೆಗೆ ದೇಶದ ಪ್ರಧಾನ ಮಂತ್ರಿಯಾಗಿ ಸತತ 12 ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರು ಬಣ್ಣಿಸಿದರು.
ಪ್ರಪಂಚದಲ್ಲಿ ಚೀನಾವನ್ನು ಹೊರತುಪಡಿಸಿ ಭಾರತ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಅನೇಕ ಪ್ರಧಾನಿಗಳು ಆಡಳಿತ ನಡೆಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯ ಜೊತೆಗೆ ಪ್ರಧಾನ ಪಾತ್ರವನ್ನು ವಹಿಸಿದ್ದಾರೆ. ಅತ್ಯಂತ ದೀರ್ಘಾವಧಿಯ ಪ್ರಧಾನಿಯಾಗಿ ನೆಹರು ದಾಖಲೆಯನ್ನು ಮುರಿಯುವುದಲ್ಲದೇ, ಜಗತ್ತಿನಲ್ಲೇ ದೇಶಕ್ಕೆ ವಿಶೇಷ ಗೌರವವನ್ನು ತಂದುಕೊಟ್ಟಿದ್ದಾರೆ. ವಿಶ್ವ ನಾಯಕತ್ವದ ಗುಣವನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವದ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದ್ದ ಹಲವಾರು ರಾಷ್ಟ್ರಗಳನ್ನು ಹಿಂದಿಕ್ಕಿ, ದೇಶಕ್ಕೆ ಸದೃಢ ಆರ್ಥಿಕತೆಯನ್ನು ನಿರ್ಮಾಣ ಮಾಡಿದ್ದಾರೆ. ದೇಶದಲ್ಲಿ ಭಯೋತ್ಪಾದಕತೆ, ನಕ್ಸಲರನ್ನು ಬೇರು ಸಹಿತ ಕಿತ್ತು ಹಾಕಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕರು ಕೂಡ ಡಿಜಿಟಲ್ ವ್ಯವಹಾರ ಮಾಡುವಂತಹ ವಾತಾವರಣ ನಿರ್ಮಿಸಿ ತಾಂತ್ರಿಕತೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿರುವುದು ನರೇಂದ್ರ ಮೋದಿ ಅವರ ಪ್ರಗತಿಯ ಫಲವಾಗಿದೆ. ರೈತರಿಗೆ ಫಸಲ್ ಭೀಮಾ ಯೋಜನೆ, ಎಸ್ಸಿ, ಎಸ್ಟಿ ಗಳ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ರಸ್ತೆ, ರೈಲ್ವೆ ಹಾಗೂ ವಿಮಾನ ನಿಲ್ದಾಣ ಯೋಜನೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.

ಬಿಜೆಪಿಯ ಆಡಳಿತದ ಅವಧಿಯಲ್ಲಿ ಎಪಿಜೆ ಅಬ್ದುಲ್ ಕಲಾಂ, ರಾಮನಾಥ್ ಗೋವಿಂದ್, ದ್ರೌಪತಿ ಮುರ್ಮ ಅವರನ್ನು ರಾಷ್ಟ್ರಪತಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಸಾಬೀತು ಮಾಡಿದೆ. ವಿಕಸಿತ ಭಾರತದ ಕಲ್ಪನೆಯನ್ನು ಸಕಾರಗೊಳಸಬೇಕು, ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಬೇಕು ಎಂಬ ಪರಿಕಲ್ಪನೆ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆ, ಉಜ್ವಲ ಯೋಜನೆ, ಮುದ್ರಾ ಯೋಜನೆ ಇನ್ನಿತರೆ ನೂರಾರು ಯೋಜನೆಗಳು ೧೨ ವರ್ಷಗಳ ಮೋದಿಯವರ ಸಾಧನೆಯನ್ನು ಸಾರುತ್ತದೆ. ದೇಶದ ಸಮಗ್ರ ಅಭಿವೃದ್ಧಿ ಮತ್ತು ಭಾರತೀಯರಲ್ಲಿ ಸ್ವಾಭಿಮಾನದ ಹೆಜ್ಜೆಯನ್ನು ನರೇಂದ್ರ ಮೋದಿ ಅವರು ಗುರುತಿಸಿದ್ದಾರೆ. ರಾಜ್ಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಿಗೂ ಚೈತನ್ಯ ತುಂಬುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಹೇಳಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್, ಎಸ್.ಬಾಲರಾಜ್, ಪ್ರೊ.ಮಲ್ಲಿಕಾರ್ಜುನಪ್ಪ, ಮುಖಂಡರಾದ ರಾಮಚಂದ್ರು , ಪಿ.ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮನೋಜ್ ಪಟೇಲ್ ಹಾಜರಿದ್ದರು.