ವಿಜೃಂಭಣೆಯಿಂದ ನಡೆದ ಬಸವ ಜಯಂತಿ ಮೆರವಣಿಗೆ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠ, ಬಸವ ಬಳಗಗಳ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀಬಸವೇಶ್ವರರ ಜಯಂತ್ಯುತ್ಸವ-2026ರ ಮೆರವಣಿಗೆಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಇರುವ ಬಸವೇಶ್ವರರ ಪುತ್ಥಳಿ ಮುಂಭಾಗ ಮೆರವಣಿಗೆಗೆ ಸೂತ್ತೂರು ಶ್ರೀ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಚಾಲನೆ ನೀಡಿದರು. ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಸವಣ್ಣನವರ ಆಶಯದಂತೆ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದೆ. ಬಸವಣ್ಣನವರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉತ್ತಮವಾಗುತ್ತದೆ ಎಂದು ಹೇಳಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಬಸವ ಜಯಂತಿ ಆಚರಣೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ತುಂಬಾ ಸಂತೋಷ ತಂದಿದೆ. ಬಸವಣ್ಣನವರ ತತ್ವ ಆದರ್ಶಗಳನ್ನು ಎಲ್ಲರೂಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಸವಣ್ಣ ಸಮ ಸಮಾಜದ ನಿರ್ಮಾತೃ. ಅವರ ವಚನಗಳ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವಾಯಿತು ಎಂದರು. ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರ ಚಿಂತನೆಗಳು ಸರ್ವ ಕಾಲಕ್ಕೂ ಆದರ್ಶವಾಗಿವೆ. ಜೀವನದಲ್ಲಿ ಸಾಕ್ಷಾತ್ಕಾರ ಕಾಣಲು ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾಡಳಿತ ಭವನದ ಎದುರು ಇರುವ ಬಸವೇಶ್ವರರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ನಗರದ ಶ್ರಿಸಿದ್ದಮಲ್ಲೇಶ್ವರ ವಿಕ್ತ ಮಠದ ಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠದ ಇಮ್ಮಡಿ ಮುರುಘರಾಜೇಮದ್ರ ಸ್ವಾಮೀಜಿ, ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಮಾಜಿ ಶಾಸಕರಾದ ಸಿ.ಎಸ್.ನಿರಂಜನ್‌ಕುಮಾರ್, ಪರಿಮಳ ನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮತ್ತು ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಭಾರಿ ಜನ: ನಗರದ ಜಿಲ್ಲಾಡಳಿತ ಭವನದಿಂದ ಶುರುವಾದ ಮೆರವಣಿಗೆ ಬಿ.ರಾಚಯ್ಯ ಜೋಡಿ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ಚಿಕ್ಕಂಗಡಿ ಬೀದಿ, ದೊಡ್ಡಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಶ್ರೀಭುವೇನಶ್ವರಿ ವೃತ್ತ, ವಿರಕ್ತಮಠದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

Share this Article
Leave a comment