ವಿದ್ಯಾರ್ಥಿಗಳು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು- ಸಾಹಿತಿ ರವಿಕುಮಾರ್ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವ ಮೂಲಕ ಪಠ್ಯೇತರ ಚಟುವಟಿಕೆಗಳ ಮೂಲಕವೂ ಯಶಸ್ಸು ಸಾಧಿಸಬಹುದಾಗಿದೆ ಎಂದು ಖ್ಯಾತ ಗಾಯಕ ಹಾಗೂ ಸಾಹಿತಿ ರವಿಕುಮಾರ್ ಕುಮಾರನಪುರ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ರೇಂಜರ್ಸ್, ರೆಡ್ ಕ್ರಾಸ್, ಅಭಿವ್ಯಕ್ತಿ ಹಾಗೂ ವಿವಿಧ ಸಮಿತಿ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ ಅಂತಹ ಹಲವಾರು ಮಹನೀಯರ ತಮ್ಮ ಜೀವಿತದ ಅವಧಿಯಲ್ಲಿ ಅವಮಾನಗಳನ್ನು ಅನುಭವಿಸಿದ್ದಾರೆ. ಅಪಮಾನ ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು. ಹಲವು ಸಾಧಕರು ಪಠ್ಯೇತರ ಚಟುವಟಿಕೆಗಳ ಮೂಲಕವೇ ಬಹುದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಡಾ.ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯ ಬಹುದೊಡ್ಡ ಸಂಪತ್ತು. ನಮ್ಮ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದು, ನಮ್ಮ ಜಿಲ್ಲೆ ದೇಶದಲ್ಲೇ ಶುದ್ಧವಾದ ಗಾಳಿ ಸಿಗುವ ಜಿಲ್ಲೆಯಾಗಿದೆ ಎಂದರು.

ವಿದ್ಯಾರ್ಥಿಗಳು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಸಂಸ್ಕಾರವಿಲ್ಲದ ಶಿಕ್ಷಣ ಶೂನ್ಯವಾಗುತ್ತದೆ. ಆಗಾಗಿ ವಿದ್ಯಾರ್ಥಿಗಳು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ದೇಶವನ್ನು ಸದೃಢವಾಗಿ ಕಟ್ಟುವ ಅವಕಾಶ ವಿದ್ಯಾರ್ಥಿಗಳಲ್ಲಿ ಇದೆ. ದೇಶವನ್ನು ಆರಾಧಿಸುವ ಮನೋಭಾವ, ಶ್ರದ್ಧೆ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಎಚ್.ಎಲ್.ಚಂದ್ರಶೇಖರ್ ಮಾತನಾಡಿ, ನಾನು ಕೂಡ ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಯಾಗಿದ್ದು, ನಾನು ಇದೇ ಕಾಲೇಜಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುವುದು ನನ್ನ ಸೌಭಾಗ್ಯವಾಗಿದೆ. ನಾನು ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇದ್ದ ಕಾರಣದಿಂದ ನಾನು ಈ ಸ್ಥಾನಕ್ಕೆ ತಲುಪಿದ್ದೇನೆ. ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅಂದಿನ ಉಪನ್ಯಾಸಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದರು.

ಸರಿಗಮಪ ರಿಯಾಲಿಟಿ ಷೋ ಹಿನ್ನೆಲೆ ಗಾಯಕಿ ಕು.ಲಹರಿ ಮಹೇಶ್ ಅವರು ಮಾತನಾಡಿ, ನನ್ನಂತೆ ಎಲ್ಲರೂ ಸಾಧನೆ ಮಾಡಬಹುದಾಗಿದೇ, ಆದರೆ ಆ ಸಾಧನೆಗೆ ಪ್ರೋತ್ಸಾಹ ತುಂಬುವ ಪೋಷಕರು ತುಂಬಾ ಮುಖ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಎಸ್.ಅಶ್ವಿನಿ, ಅಭಿವ್ಯಕ್ತಿ ಸಂಚಾಲಕಿ ಎಂ.ಚಂದ್ರಕಲಾ, ಸಹಾಯಕ ಪ್ರಾಧ್ಯಾಪಕಿ ಡಾ.ಶಾಲಿನಿ, ಮಹಾದೇವಸ್ವಾಮಿ, ಡಾ.ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this Article
Leave a comment