ಚಾಮರಾಜನಗರ: ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸ್ಪರ್ಧಾತ್ಮಕ ಮನೋಭಾವವನ್ನು ಈಗಿನಿಂದಲೇ ಬೆಳೆಸಿಕೊಳ್ಳುವಂತೆ ಇಂಡಿಯಾ ಫಾರ್ ಐ.ಎ.ಎಸ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ.ಶ್ರೀನಿವಾಸ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಕೆ.ಡಿ.ಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಇಂಡಿಯಾ ಫಾರ್ ಐ.ಎ.ಎಸ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮತ್ತು ತಯಾರಿಯನ್ನು ಉತ್ತೇಜಿಸಲು ‘ಅಭ್ಯುದಯ’ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯು.ಪಿ.ಎಸ್.ಸಿ, ಐ.ಎ.ಎಸ್, ಐ.ಪಿ.ಎಸ್ ಹಾಗೂ ಐ.ಎಫ್.ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯುವಜನತೆ ಯಶಸ್ವಿಯಾಗಿ ಎದುರಿಸುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಲು ಮುಂದಾಗಬೇಕು. ದೇಶದ ಉತ್ತಮ ಭವಿಷ್ಯಕ್ಕೆ ಭದ್ರಬುನಾದಿ ಹಾಕಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಯುವಜನರಿಗೆ ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಮಾರ್ಗದರ್ಶನ ನೀಡಲು ಬೆಂಗಳೂರಿನ ಚಂದ್ರಾ ಲೇಔಟ್‍ನಲ್ಲಿ ಇಂಡಿಯಾ ಫಾರ್ ಐ.ಎ.ಎಸ್ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು, ಯುವಕರಿಗೆ ಸ್ಪರ್ಧಾತ್ಮಕ ಸಂಸ್ಕøತಿಯನ್ನು ಬೆಳೆಸುವುದೇ ಅಕಾಡೆಮಿಯ ಸದುದ್ದೇಶವಾಗಿದೆ ಎಂದರು.

ಚಾಮರಾಜನಗರ ಜಿಲ್ಲೆಯ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಜಿಲ್ಲಾಡಳಿತ ಮುಂದಾಗಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಸರ್ಕಾರವು ಈಗಾಗಲೇ 56 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಪೈಕಿ ಕನಿಷ್ಠ ಒಂದು ಸಾವಿರ ಉನ್ನತ ಹುದ್ದೆಗಳು ಜಿಲ್ಲೆಯ ಯುವಕರಿಗೆ ದೊರೆಯಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಅಗತ್ಯವಾಗಿದೆ. ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗಳಲ್ಲೂ ಒಬ್ಬರು ಅಥವಾ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗುವ ಇರಾದೆ ಹೊಂದಬೇಕು. ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಚಾಮರಾಜನಗರ ವಿ.ವಿಯೊಂದಿಗೆ ಅಕಾಡೆಮಿಯು ಕಟಿಬದ್ಧವಾಗಿದೆ ಎಂದು ಹೇಳಿದರು.
ಉತ್ತರ ಭಾರತ ಭಾಗದಲ್ಲಿ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ನಮ್ಮ ದಕ್ಷಿಣ ಭಾರತದ ಯುವಜನರು ಈ ಬಗ್ಗೆ ಜಾಗೃತರಾಗಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಸನ್ನದ್ಧರಾಗಬೇಕು. ಉತ್ತಮ ಭವಿಷ್ಯ ತಮ್ಮದಾಗಿಸಿಕೊಳ್ಳಬೇಕು. ಅಕಾಡೆಮಿಯು ವರ್ಷಪೂರ್ತಿ ಅರಿವು ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಅಕಾಡೆಮಿಯ ಅರಿವು, ಮಾರ್ಗದರ್ಶನದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ಬಗೆಯ ವಿಷಯವಾರು ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿರುವಷ್ಟನ್ನು ಮಾತ್ರ ಬಳಸಬೇಕು. ಪ್ರತಿನಿತ್ಯ ದಿನಪತ್ರಿಕೆಗಳನ್ನು ಮನನ ಮಾಡಬೇಕು. ಪ್ರಚಲಿತ ವಿದ್ಯಾಮಾನಗಳನ್ನು ತಿಳಿಯಬೇಕು. ಸ್ಪರ್ಧಾತ್ಮಕ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಾಗಬೇಕು. ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಶ್ರೀನಿವಾಸ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.