ಚಾಮರಾಜನಗರ: ಪೌರಕಾರ್ಮಿಕ ಸಮುದಾಯದ ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಜಾಗೃತಿ ಮತ್ತು ಜವಾಬ್ದಾರಿಯುತ ಸಾಹಿತಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕವಿ ಶಂಕರ ಸಿ.ಅಂಕನಶೆಟ್ಟಿಪುರ ಅವರ “ಸಂಚಲನ” ಕೃತಿ ಲೋಕಾರ್ಪಣೆ ಹಾಗೂ ನಮ್ಮ ಹರಿದರ್ಶನ ಪ್ರಕಾಶನವನ್ನು ಉದ್ಘಾಟಿಸಿ ಮಾತನಾಡಿದರು.

ಚಾಮರಾಜನಗರ ಭಾಗದ ಜಾನಪದ ಪರಿಕಲ್ಪನೆಗಳು ಹಲವಾರು ಸಾಹಿತಿಗಳಿಗೆ ಬೇರಾಗಿದೆ. ಶಂಕರ್ ಅವರಿಗೆ ಕಾಳಜಿ ಮತ್ತು ಬದ್ಧತೆ ಇದ್ದು, ಸಾಹಿತ್ಯದಲ್ಲಿ ಅದನ್ನು ತಂದಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲು ಸಾಹಿತ್ಯವೂ ಸಹಕಾರಿಯಾಗಬೇಕು. ರಚನಾತ್ಮಕ ಹೋರಾಟಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ. ಶಂಕರ ಸಿ.ಅಂಕನಶೆಟ್ಟಿಪುರ ಅವರ ಸಂಚಲನ ಪುಸ್ತಕ ಸಾಮಾಜಿಕ ಜವಾಬ್ದಾರಿಗಳನ್ನು ಒಳಗೊಂಡಿದೆ ಎಂದರು.

ಸಂವಿಧಾನ ಮತ್ತು ಅಂಬೇಡ್ಕರ್ ಅವರು ಹೇಳಿದ ಜಾಗೃತಿಯ ಕೆಲಸವನ್ನು ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಕುವೆಂಪು ಅವರಂತಹ ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳನ್ನು ನಾವೆಲ್ಲರೂ ಅಧ್ಯಯನ ಮಾಡಬೇಕಿದೆ. ಪ್ರಸ್ತುತ ಎಐ ಯುಗ ಬಂದಿದ್ದರೂ ಇಂದೂ ಪೌರಕಾರ್ಮಿಕರು ಮ್ಯಾನುವೆಲ್ ಗೆ ಇಳಿಯುತ್ತಿದ್ದಾರೆ. ಅದನ್ನು ತಪ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಮಾನವೀಯತೆ, ಸ್ವಾಭಿಮಾನ ಮತ್ತು ಸಮಾನತೆಯ ಆಧಾರದ ಮೇಲೆ ಪೌರ ಕಾರ್ಮಿಕರನ್ನು ಖಾಯಂ ಮಾಡಿದ್ದೇವೆ. ಜಿಲ್ಲೆಯಲ್ಲಿ ಸಚಿವ ಸಂಪುಟ ನಡೆಸಿದ್ದು, ಜಿಲ್ಲಾ ಕೇಂದ್ರಕ್ಕೆ ಶಾಶ್ವತವಾಗಿ ಕುಡಿಯುವ ನೀರು ಯೋಜನೆ ತಂದಿದ್ದೇವೆ. ಹನೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ಜಿಲ್ಲೆಯನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಸರ್ಕಾರ ಪಣತೊಟ್ಟಿದೆ ಎಂದರು.
ಅಧಿಕಾರ ಇರುವವರು ಕಾನೂನುಗಳನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳಲು ಮುಂದಾದಾಗ ಅವರ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಿದೆ. ಒಳಮೀಸಲಾತಿ ಎಲ್ಲರಿಗೂ ಸಮಾನವಾಗಿದ್ದು, ತಾವು ಅಧಿಕಾರದಲ್ಲಿ ಇದ್ದಾಗ ಒಳಮೀಸಲಾತಿ ಜಾರಿ ಮಾಡಿದವರು ಇಂದು ವಿರೋಧಿ ಮಾತುಗಳನ್ನಾಡುತ್ತಿದ್ದಾರೆ. ನಮ್ಮನ್ನು ಜಾತಿ ಜಾತಿಗಳಾಗಿ ಹೊಡೆಯಲು ಹಲವರು ಮುಂದಾಗುತ್ತಿದ್ದು, ಅಂಬೇಡ್ಕರ್ ಬಯಸಿದಂತೆ ನಾವೆಲ್ಲರೂ ಒಂದಾಗಿ ಸಾಗಬೇಕಿದೆ ಎಂದು ತಿಳಿಸಿದರು.

ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಸಾಹಿತಿ ಹಾಗೂ ಹೋರಾಟಗಾರರಾಗಿದ್ದು, ಸಾಹಿತ್ಯ ದೃಷ್ಟಿಕೋನ ಮನುಷ್ಯತ್ವದ ಪರವಾಗಿ ಇರುತ್ತದೆ. ಚಾಮರಾಜನಗರ ಜಿಲ್ಲೆಯ ಜಾನಪದ ಸಾಹಿತ್ಯಕ್ಕೆ ಅತ್ಯಂತ ಹೆಸರುವಾಸಿಯಾಗಿದ್ದು, ಮಾನವೀಯತೆ ಮತ್ತು ಸಮಾನತೆಯಿಂದ ಬದುಕುವುದೇ ಜಾನಪದ ಸಾಹಿತ್ಯವಾಗಿದೆ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದು, ಇಂದಿಗೂ ನಮಗೆ ಅಗತ್ಯ ಹಕ್ಕು ಅಧಿಕಾರಿಗಳು ದೊರೆತಿಲ್ಲ. ನಮ್ಮನ್ನು ಆಳುವವರು ತಮಗೆ ಇಷ್ಟಬಂದಂತೆ ಆಡಳಿತ ನಡೆಸುವ ಮೂಲಕ ನಮ್ಮನ್ನು ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ಪೌರಕಾರ್ಮಿಕರು ನಿತ್ಯವೂ ಪ್ರಾತಃ ಸ್ಮರಣೀಯರು. ಶಂಕರ್ ಅವರು ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ. ಚಾಮರಾಜನಗರದಲ್ಲಿರುವ ಎಲ್ಲಾ ಗ್ರಾಮಗಳಿಗೂ ಭೇಟಿ ಕೊಟ್ಟು ಪೌರಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪೌರಕಾರ್ಮಿಕರ ಜೀವನ ಎಷ್ಟೊಂದು ಕಷ್ಟದಲ್ಲಿದ್ದಾರೆ. ಅವರು ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ಕೊಡಬೇಕಿದೆ ಎಂದು ತಿಳಿಸಿದರು.
ಹಕ್ಕು ಪತ್ರ, ನಿವೇಶನ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸ್ಮಶಾನ, ಸಮುದಾಯ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ಶಂಕರ್ ಅವರು ಸ್ವಯಂ ಪ್ರತಿಭೆಯನ್ನು ಹೊಂದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಕುವೆಂಪು ಅವರ ಜಗದ ಜಲಗಾರನ ಪ್ರತಿರೂಪವಾಗಿ ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಕಾಣುತ್ತಾರೆ ಎಂದರು.
ರೇಷ್ಮೆ ಕೃಷಿ ನಿರ್ದೇಶಕ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ 8 ಕೃತಿಗಳನ್ನು ಕೊಟ್ಟಿರುವ ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಸಂಚಲನ ಕೃತಿಯ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಪೌರಕಾರ್ಮಿಕರ ಬದುಕು, ಬವಣೆ ಹಾಗೂ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಪುಸ್ತಕ ರೂಪದಲ್ಲಿ ತರುವುದರ ಮೂಲಕ
ಮಾಜಿ ಮಹಾಪೌರ ಎಂ.ನಾರಾಯಣ ಮಾತನಾಡಿ, ಇಡೀ ರಾಜ್ಯದಲ್ಲೇ ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಪೌರಕಾರ್ಮಿಕ ಸಮುದಾಯದ ಏಕಮಾತ್ರ ಕವಿಯಾಗಿದ್ದಾರೆ. ಸಾಹಿತ್ಯದ ಜೊತೆಗೆ ಶಂಕರ್ ಅವರು ಪೌರಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟವನ್ನು ಗಮನಿಸಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಶಂಕರ್ ಅವರನ್ನು ಆಯೋಗದ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಟಿ.ನರಸೀಪುರ ನಳಂದ ವಿಶ್ವ ವಿದ್ಯಾಲಯದ ಬೋಧಿರತ್ನ ಭಂತೇಜಿ ಸಾನಿಧ್ಯವಹಿಸಿ ಮಾತನಾಡಿ, ಯಾರು ಸಮಾಜದಲ್ಲಿ ಜಾಗೃತರಾಗಿ, ನಿಸ್ವಾರ್ಥವಾಗಿ ಸೇವೆಸಲ್ಲಿಸುತ್ತಾರೋ ಅವರಿಗೆ ಸಾಧನೆ ಸುಲಭವಾಗುತ್ತದೆ. ಇದಕ್ಕೆ ಶಂಕರ್ ಸಿ.ಅಂಕನಶೆಟ್ಟಿಪುರ ಅವರು ಉದಾಹರಣೆಯಾಗಿದ್ದಾರೆ ಎಂದು ತಿಳಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರ ಸಂಘಸೇನಾ, ಡಾ.ಎಚ್.ಸಿ.ಮಹದೇವಪ್ಪ ಅವರ ಅಭಿಮಾನಿ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ, ಕವಿ ಶಂಕರ ಸಿ.ಅಂಕನಶೆಟ್ಟಿಪುರ ಹಾಗೂ ಇತರರು ಉಪಸ್ಥಿತರಿದ್ದರು.