ಚಾಮರಾಜನಗರ: ಜಿಲ್ಲೆಯ ವಸತಿ ಶಾಲೆಗಳು, ಆದರ್ಶ ಶಾಲೆಗಳು ಹಾಗೂ ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿಗೆ ಪರಿಶಿಷ್ಠ ಜಾತಿಯ ಪ್ರವರ್ಗ – ಎ ಮತ್ತು ಸಿ ವರ್ಗದ ವಿದ್ಯಾರ್ಥಿಗಳು ಲಭ್ಯವಿಲ್ಲದ ಸ್ಥಾನಗಳಿಗೆ ಪ್ರವರ್ಗ-ಬಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಮನವಿ ಸಲ್ಲಿಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶ್ರೀ ರೂಪಾ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಸೇರಿದ ವಸತಿ ಶಾಲೆಗಳು, ಆದರ್ಶ ಶಾಲೆಗಳು ಮತ್ತು ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿಗಾಗಿ ಪರಿಶಿಷ್ಠ ಜಾತಿಯ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಆದರೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ- ಬಿಗೆ ಸೇರಿದ ಶೇ.80 ಕ್ಕೂ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಮೇಲ್ಕಂಡ ಶಾಲೆಗಳಿಗೆ ಪ್ರವೇಶ ಕೋರಿ ಶೇ. 75 ರಿಂದ 80 ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಪ್ರವರ್ಗ- ಬಿ ಗೆ ಸೇರಿದ ವಿದ್ಯಾರ್ಥಿಗಳೇ ಪ್ರವೇಶಾತಿ ಕೋರಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಇತ್ತೀಚಿಗೆ ಪರಿಶಿಷ್ಟ ಜಾತಿಯ ಪ್ರವರ್ಗ – ಎ ಗುಂಪಿಗೆ ಶೇ. 5.25, ಪ್ರವರ್ಗ- ಬಿ ಗುಂಪಿಗೆ ಶೇ.5.25 ಹಾಗೂ ಪ್ರವರ್ಗ ಸಿ ಗುಂಪಿಗೆ ಶೇ. 4 ರಷ್ಟು ಒಳ ಮೀಸಲಾತಿ ವಿಂಗಡನೆ ಮಾಡಿರುವುದರಿಂದ ಜಿಲ್ಲೆಯಲ್ಲಿ ಪ್ರವರ್ಗ – ಬಿ ಗೆ ಸೇರಿದ ನೂರಾರು ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು, ಆದರ್ಶ ಶಾಲೆಗಳು ಮತ್ತು ಪ್ರತಿಷ್ಟಿತ ಶಾಲೆಗಳಿಗೆ ಪ್ರವೇಶಾತಿ ಸಿಗದೆ ಸಂಕಷ್ಟಕ್ಕೆ ಸಿಲುಕಿ ಪರಿತಪಿಸುತ್ತಿದ್ದಾರೆ. ಹಾಗೆಯೇ ಪ್ರವರ್ಗ – ಎ ಮತ್ತು ಪ್ರವರ್ಗ- ಸಿ ಗೆ ಮೀಸಲಾದ ಅನೇಕ ಸ್ಥಾನಗಳು ವಿದ್ಯಾರ್ಥಿಗಳ ಕೊರತೆಯಿಂದ ಭರ್ತಿಯಾಗದೆ ಖಾಲಿ ಉಳಿದಿವೆ.
ಆದ್ದರಿಂದ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಪರಿಶಿಷ್ಟ ಜಾತಿಯ ಪ್ರವರ್ಗ – ಎ ಮತ್ತು ಪ್ರವರ್ಗ – ಸಿ ವಿದ್ಯಾರ್ಥಿಗಳಿಗೆ ಮೀಸಲಾಗಿ ಭರ್ತಿಯಾಗದೆ ಖಾಲಿ ಉಳಿದಿರುವ ಸ್ಥಾನಗಳಿಗೆ ಪ್ರವರ್ಗ- ಬಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಿ ಕೊಟ್ಟು ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಕ್ರಮ ವಹಿಸಬೇಕೆಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ), ಸಾಹಿತಿ ಮಂಜು ಕೋಡಿ ಉಗನೆ, ಕುಮಾರ್ ಕುಂಭೇಶ್ವರ ಕಾಲೋನಿ, ಕೆ.ಆರ್.ನಾರಾಯಣ, ನಟಶೇಖರಮೂರ್ತಿ, ಕೊಡಸೋಗೆ ಪ್ರಸಾದ್, ಎಸ್.ಅಶೋಕ್, ರವಿಚಂದ್ರ ಪ್ರಸಾದ್, ಕಲೆ ನಟರಾಜ್, ಸಿ.ಎಂ.ಮಹದೇವಸ್ವಾಮಿ ಇತರರು ಹಾಜರಿದ್ದರು.