ಶಾಲಾ ಪ್ರಾರಂಭೋತ್ಸವ; ಸಾರೋಟಿನಲ್ಲಿ ಶಾಲೆಗೆ ಬಂದ ಮಕ್ಕಳು

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ಅಂಗವಾಗಿ ವಿದ್ಯಾರ್ಥಿಗಳನ್ನು ಸಾರೋಟಿನಲ್ಲಿ ಕರೆತರಲಾಯಿತು.

ನಗರದ ಸತ್ತಿ ರಸ್ತೆಯಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸಾರೋಟಿನಲ್ಲಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಶ್ರೀರೂಪಾ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಅವರು ವಿದ್ಯಾರ್ಥಿಗಳಿಗೆ ಹೂ ಹಾಗೂ ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು. ಕೆಲವು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಓದುವುದನ್ನು ಬಿಟ್ಟರೇ ಮುಂದಿನ ದಿನಗಳಲ್ಲಿ ಬದುಕುವುದು ಕಷ್ಟವಾಗುತ್ತದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ಮೇಲೆ ಕಾನ್ಫಿಡೆನ್ಸ್ ಇಟ್ಟುಕೊಂಡು ಓದಬೇಕು. ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ, ಆಗಾಗಿ ಮಕ್ಕಳು ಪೋಷಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.

ಪೋಷಕರ ಜವಾಬ್ದಾರಿಯ ಜೊತೆಗೆ ಶಿಕ್ಷಕರು ಎಲ್ಲಾ ಮಕ್ಕಳಲ್ಲೂ ಇರುವ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು‌. ಅವರಿಗೆ ಮಾನವೀಯ ಮೌಲ್ಯವನ್ನು ಹೇಳಿಕೊಡಬೇಕು. ಈ ಮೂಲಕ ಪೋಷಕರು ಮತ್ತು ಶಿಕ್ಷಕರು ಜೊತೆಜೊತೆಯಾಗಿ ಮಕ್ಕಳ ಉನ್ನತಿಗೆ ಶ್ರಮಿಸಬೇಕು. ನಮ್ಮ ಜಿಲ್ಲೆಯ ಯಶಸ್ಸಿಗೆ ಇಂದಿನ ವಿದ್ಯಾರ್ಥಿಗಳೆ ಬುನಾದಿಗಳು ಎಂದು ಹೇಳಿದರು.

ಸಿಇಓ ಮೋನಾರೋತ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮವಾಗಿ ಬಂದಿದೆ. ಈ ಸಾಲಿನಲ್ಲೂ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮವಹಿಸಬೇಕು. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಇದ್ದು, ಅವರಿಗೆ ಉತ್ತಮ ವೇದಿಕೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್, ಬಿಇಓ ಹನುಮಶೆಟ್ಟಿ, ಬಿ.ಆರ್.ಸಿ ರಾಜೀವ್, ನಿವೃತ್ತ ಪ್ರಾಂಶುಪಾಲ ಸೋಮಣ್ಣ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Share this Article
Leave a comment