ಚಾಮರಾಜನಗರ: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾದ ದಿನವೇ, ಶಿಕ್ಷಕರ ಸ್ಥಿತಿ ಅಧ್ವಾನವಾಗಿದೆ.
ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು ಸೇರಿ ಇತರ ಸಿಬ್ಬಂದಿ, ಅಧಿಕಾರಿಗಳ ಹಾಜರಾತಿಯನ್ನು ಕರ್ತವ್ಯದ ಸ್ಥಳದಲ್ಲಿ ಕಡ್ಡಾಯವಾಗಿ ಗುರುತಿಸಲು ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ -ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸೂಚಿಸಿತ್ತು.

ಆದರೆ ಶಾಲೆ ಪ್ರಾರಂಭದ ದಿನವೇ ಶಿಕ್ಷಕರು ಹಾಜರಾತಿ ಹಾಕಲು ನೆಟ್ ವರ್ಕ್ ಸಮಸ್ಯೆ ಉಂಟಾಗಿದ್ದು, ಶಿಕ್ಷಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರು ಬಿಲ್ಡಿಂಗ್ ಏರಿ ಮೊಬೈಲ್ ನೆಟ್ ವರ್ಕ್ ಬರುತ್ತದೆಯೇ ಎಂದು ಪರೀಕ್ಷೆ ಮಾಡುತ್ತಿದ್ದ ಘಟನೆಗಳು ಶಿಕ್ಷಣ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ಅಣಕಿಸಿದಂತಿತ್ತು.
ಬೆಳಗ್ಗೆ 9 ಗಂಟೆಗೆ ಶಾಲೆಗಳಿಗೆ ಬಂದಿದ್ದ ಶಿಕ್ಷಕರು KAAMS ಆಫ್ ಮೂಲಕ ಹಾಜರಾತಿ ಹಾಕಲು ಸಾಧ್ಯವಾಗದೇ ಸಮಸ್ಯೆ ಅನುಭವಿಸಿದರು. ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಕೆಲವು ಶಿಕ್ಷಕರು “ಜನತಾ ರಾಯಭಾರಿ” ಯೊಂದಿಗೆ ಮಾತನಾಡಿ ಅಳಲು ತೋಡಿಕೊಂಡರು.