ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿನ ಬೋಧನಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಶಾಲಾ ಅವಧಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲೇ ಇರಬೇಕು ಎಂದು ಸೂಚಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಹಾಜರಿ ವ್ಯವಸ್ಥೆ ಜಾರಿಯಾದ ಬೆನ್ನಲ್ಲೇ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. ಶಿಕ್ಷಕರನ್ನು ತರಬೇತಿ, ಸಭೆ ಹಾಗೂ ಇತರೆ ಇಲಾಖಾ ಕಾರ್ಯಗಳಿಗೆ ಬಳಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಶಾಲಾ ಅವಧಿಯಲ್ಲಿ ಶಿಕ್ಷಕರಿಂದ ಡೇಟಾ ಎಂಟ್ರಿ ಸೇರಿದಂತೆ ಬೋಧನೆಗೆ ಸಂಬಂಧಿಸದ ಕೆಲಸಗಳನ್ನು ಮಾಡಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಾಲಾ ಸಮಯದಲ್ಲಿ ಶಿಕ್ಷಕರು ಶಾಲೆಯಲ್ಲೇ ಹಾಜರಿದ್ದು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲಾ ಅವಧಿಯಲ್ಲಿ ಹೊರಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸುತ್ತೋಲೆಯ ಅನುಷ್ಠಾನದಲ್ಲಿ ಲೋಪ ಕಂಡುಬಂದರೆ ಸಂಬಂಧಿತ ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಈ ಕ್ರಮದಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಸಮಯ ದೊರೆಯಲಿದ್ದು, ಶಿಕ್ಷಕರು ಶಾಲೆಯಲ್ಲೇ ಲಭ್ಯರಾಗುವ ಕಾರಣ ಪೋಷಕರ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.