ಚಾಮರಾಜನಗರ: ಕನಕಪುರ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಸೋಮವಾರ ಸಂಜೆ ಲಿಂಗೈಕ್ಯರಾಗಿದ್ದು, ಅವರ ನಿಧನಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಂತಾಪ ಸೂಚಿಸಿದ್ದಾರೆ.
14 ನೇ ಶತಮಾನದ ಶ್ರೀ ಗೋಸಲ ಸಿದ್ದಲಿಂಗ ಯತಿಗಳ ಅನುಯಾಯಿಗಳು ಹಾಗೂ ನೂರೊಂದು ವಿರಕ್ತರಲ್ಲಿ ಒಬ್ಬರೂ ಆಗಿದ್ದ ಶ್ರೀ ನಿರ್ವಾಣ ಸ್ವಾಮಿಗಳಿಂದ ಸ್ಥಾಪಿತವಾದ ಕನಕಪುರದ ಶ್ರೀ ದೇಗುಲ ಮಠ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಈ ಮಠದ 13ನೇ ಮಠಾಧೀಶರಾಗಿದ್ದ ಶ್ರೀಗಳು ಶ್ರೀಮಠವನ್ನು ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಿದರು. ಸಾತ್ವಿಕ ವ್ಯಕ್ತಿತ್ವ, ಮೃದುವಾದ ಮಾತು, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಭಕ್ತ ಜನ ಸಮುದಾಯದ ಆರಾಧ ಗುರುಗಳಾಗಿದ್ದರು. ಯಾವುದೇ ಭೇದಭಾವವಿಲ್ಲದೆ ಶ್ರೀಮಠವನ್ನು ಎಲ್ಲರ ಮತವೆನ್ನುವಂತೆ ಬೆಳೆಸಿದರು ಎಂದು ಬಣ್ಣಿಸಿದ್ದಾರೆ.
1943 ಮೇ 20ರಂದು ಟಿ. ನರಸೀಪುರ ತಾಲೂಕು ಕುರುಬೂರಿನಲ್ಲಿ ಶ್ರೀಗಳು ಜನಿಸಿದರು. ಶ್ರೀ ಶಿವರುದ್ರಪ್ಪ ಎಂಬುದು ಅವರ ಪೂರ್ವಾಶ್ರಮದ ಹೆಸರು, ಕುರುಬೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಚಾಮರಾಜನಗರದಲ್ಲಿ ಪ್ರೌಢಶಿಕ್ಷಣ, ಮೈಸೂರಿನ ಶಾರದಾ ವಿಲಾಸ ಹಾಗೂ ಯುವರಾಜ ಕಾಲೇಜುಗಳಲ್ಲಿ ಬಿಎಸ್ಸಿ ಪಡೆದರು. 1968ರಲ್ಲಿ ಸೇವೆಗೂ ಸೇರಿದ್ದರು. 1971ರಲ್ಲಿ ಮರಿಯಾಲ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕವಾದುದರಿಂದ ಕೆಲಸಕ್ಕೆ ರಾಜೀನಾಮೆ ನೀಡಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ಮಾಡಿದರು. ನಂತರ ಕೆಲಕಾಲ ಮಳವಳ್ಳಿ ತಾಲೂಕು ನೆಲ್ಲಿಗೆರೆಯ ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಅನಂತರ ಕನಕಪುರ ಶ್ರೀ ದೇಗುಲ ಮಠದ ಉತ್ತರಾಧಿಕಾರಿಗಳಾದರು. ಅದೊಂದು ಯೋಗಾಯೋಗವೇ ಸರಿ ಎಂದಿದ್ದಾರೆ.
ಶ್ರೀಗಳು ಐದು ದಶಕಗಳ ಕಾಲ ಕನಕಪುರದ ಶ್ರೀ ದೇಗುಲ ಮಠವನ್ನು ತ್ರಿವಿಧ ದಾಸೋಹ ಕೇಂದ್ರವಾಗಿ ಬೆಳೆಸಿದರು. ಶ್ರೀಮಠದ ಖುಷಿ ಭೂಮಿಯನ್ನು ನೀರಾವರಿಗೊಳಪಡಿಸಿದರು. ಮಠದ ಸಮುಚ್ಚಯವನ್ನು ವಿಸ್ತಾರವಾಗಿ ಬೆಳೆಸಿದರು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರುತ್ತಿದ್ದವು. ಪ್ರಸಾದನಿಲಯ, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು, ಅನಾಥಾಲಯಗಳು ಮಠದ ಆಶ್ರಯದಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದವು.

ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಎಲ್ಲರ ಪ್ರೀತಿ ಗೌರವಗಳಿಗೆ ಭಾಜನರಾಗಿದ್ದರು. ಆ ಭಾಗದ ಎಲ್ಲ ಮಠಗಳ ಬೆಳವಣಿಗೆಗೆ ಸದಾ ಸಹಕಾರ ನೀಡುತ್ತಿದ್ದರು. ಮಠಾಧೀಶರೆಲ್ಲರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮಾತೃವಾತ್ಸಲ್ಯದ ಕರುಣಾಮಯಿಗಳಾಗಿದ್ದರು. ಶ್ರೀಮಠಕ್ಕೆ ಡಾ. ಶ್ರೀ ಚನ್ನಬಸವ ಸ್ವಾಮಿಗಳನ್ನು ಕಿರಿಯ ಶ್ರೀಗಳನ್ನಾಗಿ ಆಯ್ಕೆ ಮಾಡಿ, ಅವರಿಗೆ ಮಾರ್ಗದರ್ಶನ ನೀಡಿ ಶ್ರೀಮಠದ ಎಲ್ಲ ಚಟುವಟಿಕೆಗಳ ಮುಂದುವರಿಕೆಗೆ ಅವಕಾಶ ಕಲ್ಪಿಸಿದುದು ವಿಶೇಷವಾದುದು. ಡಾ. ಶ್ರೀ ಚನ್ನಬಸವಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕಳೆದ ವರ್ಷ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಶ್ರೀಗಳ ಆಶಯದ ಫಲವಾಗಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಭಕ್ತ ಸಮುದಾಯದ ಗೌರವಾದರಗಳಿಗೆ ಪಾತ್ರರಾಗಿದ್ದರು. ಶ್ರೀಗಳು ಲಿಂಗೈಕರಾದದ್ದು ನಿಜಕ್ಕೂ ವಿಷಾದದ ಸಂಗತಿ. ಶ್ರೀಮಠದ ಎಲ್ಲ ಸೇವಾಕಾರ್ಯಗಳು ಎಂದಿನಂತೆ ಇಂದಿನ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದುವರಿದುಕೊಂಡು ಹೋಗಲೆಂದು ಆಶಿಸುತ್ತಾ, ಶ್ರೀಗಳ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಸರ್ವರಿಗೂ ಅನುಗ್ರಹಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.