ಚಾಮರಾಜನಗರ : ಭಾರತದ ಗುರು ಪರಂಪರೆ ಇಡೀ ಜಗತ್ತಿನಲ್ಲಿ ಮಾದರಿಯಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ, ಆತ್ಮವಿಶ್ವಾಸ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಗುರುಗಳಿಗೆ ಇಂದಿಗೂ ಅಪಾರ ಗೌರವವಿದೆ ಎಂದು ಸಂಸ್ಕೃತಿ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1999-20 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಾಮರಾಜನಗರ ಸಮೀಪವಿರುವ ಹರದನಹಳ್ಳಿಗೆ ಐತಿಹಾಸಿಕ, ಪೌರಾಣಿಕ, ಸಾಂಸ್ಕೃತಿಕ, ಸುದೀರ್ಘ ಇತಿಹಾಸವಿದೆ. ಹರದನಹಳ್ಳಿ ಜನ ಪ್ರೀತಿಗೆ ಹೆಸರಾದವರು. ಹರದನಹಳ್ಳಿಯ ಜನರಿಗೆ ರಕ್ತದಲ್ಲೇ ಸಾಂಸ್ಕೃತಿಕ ಮೌಲ್ಯ, ಗುರುಪರಂಪರೆಯ ಭಕ್ತಿ ಇದೆ. ಶ್ರೀ ದಿವ್ಯಲಿಂಗೇಶ್ವರ, ಶ್ರೀ ವೇಣುಗೋಪಾಲಸ್ವಾಮಿ, ಆಂಜನೇಯ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಗುರು ಪರಂಪರೆಯನ್ನು ಇದು ಕೊಡುಗೆಯಾಗಿ ನೀಡಿದೆ ಎಂದರು.
ಹರದನಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು ತಮಗೆ ಬೋಧಿಸಿದ 17 ಶಿಕ್ಷಕರನ್ನು ವಿವಿಧ ಭಾಗಗಳಿಂದ ಕರೆತಂದು ಗೌರವಿಸಿ ಆನಂದ ಪಟ್ಟ ಕ್ಷಣ ಮರೆಯಲಾಗದು. ನಿಮ್ಮ ಈ ಗುರು ಪ್ರೀತಿಗೆ ಗುರುಗಳ ಶುಭ ಹಾರೈಕೆ,ಆಶೀರ್ವಾದ ಸದಾ ಇರುತ್ತದೆ. ವಿದ್ಯಾರ್ಥಿಗಳ ಜೀವನ ಬರೀ ಶಿಕ್ಷಣ ಪಡೆಯುವುದೇ ಅಲ್ಲ. ಜೀವನವನ್ನು ಪ್ರೀತಿಸುವುದು. ಸ್ನೇಹ ಬೆಳೆಸುವುದು. ಗುರು ಪರಂಪರೆಗೆ ಗೌರವಿಸುವುದು ಹಾಗೆಯೇ ಅತ್ಯಮೂಲ್ಯವಾದ ಆತ್ಮವಿಶ್ವಾಸದ ಆನಂದವನ್ನು ಪಡೆಯುವ ಕಾರ್ಯವಾಗಿದೆ ಎಂದರು.
ಹರದನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ 80 ವರ್ಷದ ಶ್ರೀ ವೆಂಕಟರಮಣಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಬೋಧಿಸಿದ ಶಿಕ್ಷಕರನ್ನು ಕರೆತಂದು ಗೌರವಿಸುವ ಮೂಲಕ ಬಹುದೊಡ್ಡ ಕೆಲಸವನ್ನು ಮಾಡಿದ್ದಾರೆ. ಗುರುವೇ ಸರ್ವಸ್ವವಾಗಿದ್ದು, ಗುರುಗಳಿಗೆ ಧನ್ಯವಾದಗಳು ಅರ್ಪಿಸುವ ಮೂಲಕ ನಿಮ್ಮ ಗೌರವವನ್ನು ಸಲ್ಲಿಸಿರುವುದು ನಮಗೆಲ್ಲರಿಗೂ ಬಹಳ ಸಂತೋಷವನ್ನು ತಂದಿದೆ. ಹತ್ತಾರು ವರ್ಷಗಳ ಹಿಂದೆ ಬೋಧಿಸಿದ ನೆನಪು ನಮಗೆ ಮತ್ತೆ ಮತ್ತೆ ಮೆಲುಕು ಹಾಕಲು ಸಾಧ್ಯವಾಗಿದೆ ಎಂದರು.
ಚಾಮರಾಜನಗರ ಡಯಟ್ ಹಿರಿಯ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಟಿ.ವಿ ಯ.ಸಿದ್ದರಾಜಾಚಾರಿ ಮಾತನಾಡಿ, ಹರದನಹಳ್ಳಿಯ ವಿದ್ಯಾರ್ಥಿಗಳ ಗುಣ ಮರೆಯಲಾಗದು. ಬಹಳ ಭಕ್ತಿ, ಶ್ರದ್ಧೆ,ಪ್ರೀತಿ,ಪ್ರೇಮ ಹಾಗೂ ಸರಳತೆಯ ಪ್ರತಿರೂಪವಾಗಿ ವಿದ್ಯಾರ್ಥಿಗಳು ರೂಪಿತವಾಗಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಇಂದು ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾವೆಲ್ಲರೂ ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.
ಹರದನಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಗಣಿತ ಶಿಕ್ಷಕ ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳ ಈ ಮಾದರಿ ಕಾರ್ಯಕ್ರಮ ಬಹಳ ಅಚ್ಚು ಕಟ್ಟುತನದಿಂದ ಕೊಡಿದೆ. ವಿದ್ಯಾರ್ಥಿಗಳು ಗೌರವ ತರುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಹನುಮಂತ ನಾಯಕ, ಹೊಂಗನೂರು ನಂಜಯ್ಯ,ಉತ್ತುವಳ್ಳಿ ರಂಗಸ್ವಾಮಿ, ರಾಮಸಮುದ್ರದ ವೆಂಕಟೇಶ್, ಮಲ್ಲಿಕಾರ್ಜುನ್, ಜಗದೀಶ್ ಕುಮಾರ್, ಶಿಕ್ಷಕಿಯರಾದ ರಾಜೇಶ್ವರಿ, ನಾಗರತ್ನ, ಪಾರ್ವತಿ, ಪುಟ್ಟನಂಜಮ್ಮ, ನಾಗರತ್ನಮ್ಮ, ನಳಿನಿ ಮುಂತಾದ 17 ಶಿಕ್ಷಕರನ್ನು ವಿದ್ಯಾರ್ಥಿಗಳು ತುಂಬು ಹೃದಯದಿಂದ ಭಕ್ತಿ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹರದನಹಳ್ಳಿ ಲತಾ, ಬಸವರಾಜು, ವಿಶಾಲಾಕ್ಷಿ, ಲಕ್ಷಮ್ಮ, ಗಿರಿ ಗೌಡ, ಮಹೇಶ, ಇಮ್ರಾನ್, ಪಾಷಾ, ಜಹೀರ್, ಸುಜಾತ, ಮಮತಾ, ಲಕ್ಷ್ಮಮ್ಮ, ಭಾನುಮತಿ, ರಂಗಪ್ಪ, ಸುರೇಶ, ರಾಘವೇಂದ್ರ, ಕುಮಾರ್, ರಾಜೇಂದ್ರ, ಬಸವರಾಜು ಮುಂತಾದ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.