4.5 ಕೋಟಿ ರೂ ವೆಚ್ಚದಲ್ಲಿ ಕೋಡಿಮೋಳೆ ಕೆರೆ ಅಭಿವೃದ್ಧಿ- ಶಾಸಕ ಸಿ.ಪುಟ್ಟರಂಗಶೆಟ್ಟಿ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕೋಡಿಮೋಳೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರೆವೇರಿಸಿದರು.

ನಗರದ ಹೊರವಲಯದಲ್ಲಿರುವ ಕೋಡಿಮೋಳೆ ಕೆರೆ ಆವರಣದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು 4.25 ಕೋಟಿ ರೂ. ವೆಚ್ಚದ ಕೋಡಿಮೋಳೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 4 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೋಡಿಮೋಳೆ ಕೆರೆ ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ ಸೋಮವಾರಪೇಟೆಯ ಬಳಿ ಕಟ್ಟೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಕೋಡಿಮೋಳೆ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾಕಿಂಗ್ ಪಾತ್ (ಪುಟ್ಪಾತ್), ವಿದ್ಯುತ್ ದೀಪ, ಪಾರ್ಕಿಂಗ್ ಜನರು ಕುಳಿತುಕೊಳ್ಳಲು ಕಲ್ಲುಬೆಂಚುಗಳ ವ್ಯವಸ್ಥೆ, ರಸ್ತೆ ಅಭಿವೃದ್ಧಿಯೂ ಸೇರಿವೆ ಎಂದರು.

ಸೋಮವಾರಪೇಟೆಯಿಂದ ಶ್ರೀ ಭುವನೇಶ್ವರಿ ವೃತ್ತ ಹಾಗೂ ಭುವನೇಶ್ವರಿ ವೃತ್ತದಿಂದ ಜಾಲಹಳ್ಳಿ ಹುಂಡಿವರೆಗೆ ವಿದ್ಯುತ್ ಬೀದಿದೀಪಗಳನ್ನು 80 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ, ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, 1998-99 ನೇ ಸಾಲಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವನ್ನು ಚಾಮರಾಜನಗರದಲ್ಲಿ ಅಪ್‌ಗ್ರೇಡ್‌ಗೊಳಿಸಲಾಯಿತು. 2011-12 ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಅಂದಿನಿಂದ ಈವರೆಗೆ ಬಿಡುಗಡೆಯಾದ ಅನುದಾನವನ್ನು ಕ್ರೋಢಿಕರಿಸಿ ಶಾಸಕರ ಮಾರ್ಗದರ್ಶನದಲ್ಲಿ ಕೋಡಿಮೋಳೆ ಕೆರೆ ಹಾಗೂ ಸೋಮವಾರಪೇಟೆಯ ಬಳಿ ಇರುವ ಕಟ್ಟೆ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿಗೆ ಸರ್ಕಾರದ ಅನುಮೋದನೆಯು ದೊರೆತಿದೆ ಎಂದರು.

ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ 50:50 ರ ಅನುಪಾತದಲ್ಲಿ ಲೇಔಟ್ ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ 14 ಕೋಟಿ ರೂ, ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಕೋಡಿಮೋಳೆ ಕೆರೆ ಕಾಮಗಾರಿಯಲ್ಲಿ ಜನರಿಗೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ವಾಕಿಂಗ್ ಪಾತ್, ಕೆರೆಯ ಸುತ್ತಲು ಗಿಡಗಳನ್ನು ಬೆಳೆಸಲಾಗುತ್ತದೆ. ವಿದ್ಯುತ್ ದೀಪ ಅಳವಡಿಸಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ದೋಣಿ ವಿಹಾರಕ್ಕೂ ಅನುಕೂಲ ಕಲ್ಪಿಸಲಾಗುತ್ತದೆ. ಕೋಡಿಮೋಳೆ ಕೆರೆ ಅಭಿವೃದ್ಧಿಪಡಿಸಿ ನಿರ್ವಹಣೆಗಾಗಿ ಸಂಬಂಧಪಟ್ಟ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ಅಸ್ಗರ್ ಮುನ್ನಾ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ. ಅಧಿಕಾರೇತರ ಸದಸ್ಯರಾದ ಸಯ್ಯದ್ ಮುಸಾಯಿಲ್, ತಾಲೂಕು ಪಂಚಾಯಿತಿ ಕೆ.ಡಿ.ಪಿ ಸದಸ್ಯರಾದ ಶ್ರೀನಿವಾಸ್, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪುಟ್ಟಸ್ವಾಮಿ ದ್ವಾರಕಿ, ರಾಜು, ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷರಾದ ಉಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸೀಮಾ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುಳ, ಮುಖಂಡರಾದ ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ರಮೇಶ್, ನಟರಾಜು, ಸ್ವಾಮಿ, ಇತರರು ಇದ್ದರು.

Share this Article
Leave a comment