ಚಾಮರಾಜನಗರ: ಬಹುಗ್ರಾಮ ಕುಡಿಯುವ ನೀರಿಗೆ 2025-26ನೇ ಸಾಲಿನಲ್ಲಿ ಸುಮಾರು 5 ಕೋಟಿ ರೂ, ಅನುದಾನ ಬಿಡುಗಡೆಯಾಗಿದ್ದು, ಅದು ಏನಾಯಿತು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ನೂತನ ಕೆ.ಡಿ.ಪಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಸಂತೋಷ್ ಕುಮಾರ್ ಮತ್ತು ತಾಲೂಕು ಪಂಚಾಯಿತಿ ಇಓ ಗಿರಿಧರ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಬಿಡುಗಡೆಯಾದ 5 ಕೋಟಿ ರೂ, ಅನುದಾನವನ್ನು ಹೇಗೆ ಖರ್ಚು ಮಾಡಿದ್ದೀರಿ ಎಂಬ ಮಾಹಿತಿಯನ್ನು ನೀಡಿ ಎಂದು ಪಟ್ಟು ಹಿಡಿದರು.

ಆಡಳಿತ ಅನುಮೋದನೆಯನ್ನೇ ಪಡೆಯದೇ ಹೇಗೆ ಹಣವನ್ನು ಖರ್ಚು ಮಾಡಿದ್ದೀರಿ?. ಅದಲ್ಲದೇ ಭೋಗಾಪುರದಲ್ಲಿ ಬೋರ್ ವೆಲ್ ಕೊರೆಯಲಾಗಿದೆ. ಆದರೆ ನೀರು ಬರದಿದ್ದರೂ ಪೈಪ್ ಲೈನ್ ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
ಸಚಿವ ಕೆ.ವೆಂಕಟೇಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೆಲಸ ಮಾಡದೇ ಹೇಗೆ ಬಿಲ್ ಮಾಡಿ ಕೊಡುತ್ತೀರಿ? ಇಲಾಖೆಯಲ್ಲಿ ಏನು ನಡೆಯುತ್ತಿದೆ. ಅಧಿಕಾರಿಗಳು ತಪ್ಪುಗಳನ್ನು ಮಾಡುವುದರಿಂದ ನಮಗೆ ಜನರು ಬೈಯ್ಯುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಮಾತನಾಡಿ, ನೀರು ಪೂರೈಕೆ ಮಾಡಲು ಬಳಸಲಾಗಿದೆ ಎಂದು ಸಮಾಜಾಯಿಷಿ ನೀಡಲು ಮುಂದಾದರು. ಆದರೇ ಶಾಸಕರು ಮಾತನಾಡಿ, ಈ ಉತ್ತರವನ್ನು ನಿಮ್ಮಿಂದ ನಿರೀಕ್ಷೆ ಮಾಡಬೇಕಾ? ಇಂತಹ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಕುರಿತು ತನಿಖೆ ಮಾಡಿ, ಅಗತ್ಯ ಮಾಹಿತಿಯನ್ನು ನೀಡುವಂತೆ ಸಚಿವರು ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಅವರಿಗೆ ಸೂಚಿಸಿದರು.