ಬುದ್ಧ ಜಯಂತಿ ಅರ್ಥಪೂರ್ಣ ಆಚರಣೆ

ಮಣಿಕಂಠ ಜನತಾ ರಾಯಭಾರಿ
2 Min Read

*ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ಬುದ್ಧ ದಮ್ಮ ಸಂದೇಶ

*ನಗರದ ವಿವಿಧೆಡೆ ಭವ್ಯ ಮೆರವಣಿಗೆ

ಚಾಮರಾಜನಗರ: ಬುದ್ಧ ವಂದನೆ, ಬುದ್ಧ ಪ್ರತಿಮೆಯ ಆಕರ್ಷಕ ಸ್ತಬ್ಧಚಿತ್ರದ ಮೆರವಣಿಗೆ, ಬುದ್ಧ ಗೀತಗಾಯನದಂತಹ ಸ್ಮರಣೀಯ ಕಾರ್ಯಕ್ರಮಗಳ ಮೂಲಕ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರ ಅವರಣದಲ್ಲಿ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮಾರಂಭದಲ್ಲಿ 2570ನೇ ಬುದ್ಧ ಪೂರ್ಣಿಮೆ ಅಂಗವಾಗಿ ನಡೆಯುತ್ತಿದ್ದ ಭಗವಾನ್ ಬುದ್ಧ ಕಾರ್ಯಕ್ರಮದ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಬುದ್ಧ ದಮ್ಮ ಸಂದೇಶ ನೀಡಲು.

ಮಹಾರಾಜ ಶುದ್ದೋಧನ ಹಾಗೂ ಮಾಯಾಮಾಯ ದಂಪತಿಗಳ ಪುತ್ರರಾದ ಬುದ್ಧ ತಮ್ಮ ವೈಭವಯುತ ಜೀವನ ತೊರೆದು ಲುಂಬಿನಿವನದ ಬೋಧಿವೃಕ್ಷದ ಕೆಳಗೆ ಧ್ಯಾನಸಕ್ತರಾಗಿ ಕುಳಿತು ಜ್ಞಾನೋದಯ ಹೊಂದಿದರು. ಮಾನವಕುಲದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯವುಳ್ಳ ವಿಚಾರಧಾರೆಗಳನ್ನು ಇಡೀ ಜಗತ್ತಿಗೆ ಪ್ರಸ್ತುತಪಡಿಸಿದರು. ಎಲ್ಲಾ ಧರ್ಮಗಳ ಸಾರವು ಒಂದೇ, ಅದೇ ಮಾನವಕುಲದ ಒಳಿತು ಆಗಿದೆ. ಸಕಲ ಜೀವರಾಶಿಗಳನ್ನು ಸಮಾನವಾಗಿ ಕಂಡ ಬೌದ್ಧ ಧರ್ಮದ ಸಾರವನ್ನು ನಾವೆಲ್ಲರೂ ಅರಿಯಬೇಕು. ಎಲ್ಲರೂ ಬುದ್ಧಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಬಳಿಕ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಬೋಧಿವೃಕ್ಷಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಅವರು ಮಾತನಾಡಿ, ಆಶಾಂತಿಯಿಂದ ಕೂಡಿರುವ ಇಂದಿನ ಪ್ರಪಂಚದಲ್ಲಿ ನೆಮ್ಮದಿ, ಶಾಂತಿಗೆ ಬುದ್ಧರ ಸಂದೇಶಗಳು, ವಿಚಾರಧಾರೆಗಳು ದಾರಿದೀಪ. ಅವರ ಆದರ್ಶ ತತ್ವಗಳನ್ನು ಇಡೀ ಸಮಾಜಕ್ಕೆ ಪಸರಿಸಬೇಕಾಗಿದೆ. ಮತ್ತೊಬ್ಬರಿಗೆ ಕೇಡು ಬಯಸದೇ ಒಳಿತು ಬಯಸುವುದೇ ಬೌದ್ಧ ಧರ್ಮದ ಸಾರವಾಗಿದೆ.

ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ದೇಶದ ಎಲ್ಲಾ ಮಹಾತ್ಮರ ಸಂದೇಶಗಳು ಒಂದೇ ಆಗಿವೆ. ಅದು ಮಾನವ ಕಲ್ಯಾಣ ಮಾತ್ರ ಆಗಿದೆ. ಪ್ರತಿಯೊಬ್ಬರು ಶಾಂತಿ, ನೆಮ್ಮದಿಗಾಗಿ ಬುದ್ಧರ ತತ್ವಾದರ್ಶಗಳನ್ನು ನಿತ್ಯ ಸ್ಮರಿಸಬೇಕಾಗಿದೆ. ಅವರನ್ನು ಆಚರಣೆ ಮಾಡುವುದಲ್ಲ, ಬದಲಿಗೆ ಓದಿ ತಿಳಿಯಬೇಕು ಎಂದು ಹೇಳಿದರು.

ಕಲಬುರ್ಗಿ ಜನಪರ ವೇದಿಕೆಯ ಬೌದ್ಧ ವಿಚಾರವಾದಿಗಳಾದ ಜೀತೇಂದ್ರ ಕೆ. ತಳವಾರ್ ಮಾತನಾಡಿ, ನಿನಗೆ ನೀನೆ ಬೆಳಕು ಎಂದು ಇಡೀ ಜಗತ್ತಿಗೆ ಸಾರಿದ ಬುದ್ಧರು ಈ ಜಗದ ಬೆಳಕಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಜಗತ್ತಿಗೆ ಬೆಳಕು ನೀಡಿವೆ. ಓದಿ ಅರಿತಾಗ ಅವರ ಸಂದೇಶಗಳು ಜೀವಂತಿಕೆ ಪಡೆಯಲಿವೆ. ಜಗತ್ತು ಇಂದು ಅಸ್ಥಿರತೆಯಿಂದ ಕೂಡಿದೆ. ಈ ಜಗತ್ತು ಬುದ್ಧನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸಾರ್ವಕಾಲಿಕವಾಗಿರುವ ಬುದ್ಧರ ಪಂಚಶೀಲ ತತ್ವಗಳನ್ನು ಈ ಜಗತ್ತು ಅರಿಯಬೇಕು. ಬುದ್ಧರ ಸಂದೇಶಗಳು, ಬಸವಣ್ಣನವರ ವಚನಗಳ ಸಾರವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕಗೊಳಿಸಿದ್ದಾರೆ. ಅದಕ್ಕಾಗಿ ನಮ್ಮ ಭಾರತ ದೃಢವಾದ ಪ್ರಜಾಪ್ರಭುತ್ವ ಸುಭದ್ರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಳ್ಳೇಗಾಲ ತಾಲೂಕು ಚೆನ್ನಲಿಂಗನಹಳ್ಳಿಯ ಜೀತವನ ಬುದ್ಧ ವಿಹಾರದ ಮನೋರಖ್ಖಿತ ತೇರಾ ಬಂತೇಜಿ ಅವರು ಬುದ್ಧರ ಧ್ಯಾನದ ಮಹತ್ವವನ್ನು ತಿಳಿಸಿ ಆಶೀರ್ವಚನ ನೀಡಿದರು.

ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ರಾಜು, ಭಾರತೀಯ ಬೌದ್ಧ ಮಹಾಸಬಾ ಅಧ್ಯಕ್ಷರಾದ ಬಸವರಾಜು, ಜನಪದ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ ಹಾಗೂ ಇತರರು ಹಾಜರಿದ್ದರು. 

 

TAGGED:
Share this Article
Leave a comment