ಚಾಮರಾಜನಗರ: ಸುತ್ತೂರು ಮಠದ ವತಿಯಿಂದ ಪ್ರತಿವರ್ಷ ಕೊಡಮಾಡುವ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಸೌಮ್ಯ ಸ್ವಭಾವದ ಹಿರಿಯ ಪತ್ರಕರ್ತ ಪ್ರಕಾಶ್ ಬೆಲ್ಲದ್ ಅವರಿಗೆ ನೀಡಿ ಗೌರವಿಸಲಾಯಿತು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಲ್ಲದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಪತ್ರಿಕಾ ರಂಗದಲ್ಲಿ ಪ್ರಕಾಶ್ ಬೆಲ್ಲದ್ ಅವರು ಸುಮಾರು 30 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರು ನನಗೂ ಕೂಡ ಅತ್ಯಂತ ಆತ್ಮೀಯರಾಗಿದ್ದಾರೆ. ನಾನು ಶಾಸಕನಾಗಿ ಬಂದ ಸಂದರ್ಭದಲ್ಲಿ ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಯಾರೇ ಆದರೂ ಪ್ರಾಮಾಣಿಕ ಸೇವೆ ಸಲ್ಲಿಸಿದರೇ ಫಲ ದೊರೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸುತ್ತೂರು ಶ್ರೀಗಳು ಪ್ರಕಾಶ್ ಬೆಲ್ಲದ್ ಅವರ ಸೇವೆಯನ್ನು ಗುರುತಿಸಿರುವುದು ನನಗೆ ವೈಯಕ್ತಿಕವಾಗಿ ಸಂತಸವನ್ನು ತಂದಿದೆ ಎಂದರು.
ಮಾಧ್ಯಮರಂಗ ರಾಜಕಾರಣಿಗಳ ತೊಡಕುಗಳನ್ನು ತಿದ್ದುಕೊಳ್ಳಲು ಅವಕಾಶ ದೊರಕಿಸಿಕೊಡುತ್ತದೆ. ಪತ್ರಕರ್ತ ಪ್ರಕಾಶ್ ಬೆಲ್ಲದ್ ಅವರು ಜಿಲ್ಲಾ ಕೇಂದ್ರದ ಹಲವಾರು ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರುತ್ತಿದ್ದರು. ಹಲವಾರು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಪ್ರಕಾಶ್ ಅವರಿಗೆ ಇನ್ನು ಹೆಚ್ಚಿನ ಅವಕಾಶ ದೊರೆಯಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಶ್ರೀ ರೂಪಾ ಮಾತನಾಡಿ, ನಮ್ಮ ಚಾಮರಾಜನಗರ ಭೌಗೋಳಿಕವಾಗಿ ಬಹಳ ವಿಸ್ತೀರ್ಣವಾಗಿದೆ. ಹಲವಾರು ಕಾಡಂಚಿನ ಪ್ರದೇಶಗಳಿಗೆ ಕೆಲವು ಪತ್ರಕರ್ತರು ಹೋಗಿ ವರದಿಗಳನ್ನು ಮಾಡುತ್ತಾರೆ. ನಾನು ಕೂಡ ಪತ್ರಿಕೆಗಳ ವರದಿ ಆಧಾರದ ಮೇಲೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ನಿಟ್ಟಿನಲ್ಲಿ ಪತ್ರಿಕಾ ರಂಗ ಆಡಳಿತ ವ್ಯವಸ್ಥೆಗೆ ಪೂರಕಶಕ್ತಿಯಾಗಿದೆ. ಅಂತಹ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ಧಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು ಹಾಗೂ ಇತರರು ಹಾಜರಿದ್ದರು.

ಪ್ರಕಾಶ್ ಬೆಲ್ಲದ್ ಅವರಿಂದ ಸುದೀರ್ಘ ಸೇವೆ: ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಪ್ರಕಾಶ್ ಬೆಲ್ಲದ್ ಅವರಿಗೆ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಿಲ್ಲೆಯ ಗಡಿಭಾಗದಲ್ಲಿರುವ ತಾಳವಾಡಿಯ ಸೊತ್ತನ್ನು ರೂಂ ಗ್ರಾಮದವರಾದ ಪ್ರಕಾಶ್ ಬೆಲ್ಲದ್ ಅವರು 1996 ರಲ್ಲಿ ಪತ್ರಿಕಾ ರಂಗವನ್ನು ಪ್ರವೇಶಿಸಿದರು. ರೇಷ್ಮೆ ನಾಡು, ಆಂದೋಲನ, ಪ್ರಜಾ ನುಡಿ, ಉಷಾಕಿರಣ, ಜನ ಮಿತ್ರ ಪತ್ರಿಕೆಗಳಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವರ್ತಮಾನ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಮಾಣಿಕತೆ, ಸೌಮ್ಯ ಸ್ವಭಾವ ಹಾಗೂ ವೃತ್ತಿ ಬದ್ಧತೆಯನ್ನು ಮೈಗೂಡಿಸಿಕೊಂಡು ಹೋಗುತ್ತಿರುವ ಪ್ರಕಾಶ್ ಬೆಲ್ಲದ್ ಅವರಿಗೆ ಪ್ರಶಸ್ತಿ ನೀಡಿರುವುದನ್ನು ಹಲವಾರು ಮುಖಂಡರು, ಗಣ್ಯರು ಸ್ವಾಗತಿಸಿ ಸನ್ಮಾನಿಸಿದರು.