ವಿದ್ಯಾರ್ಥಿಗಳ ಪ್ರಗತಿಗೆ ‘ಅಭ್ಯುದಯ’ ಕಾರ್ಯಕ್ರಮ 

ಮಣಿಕಂಠ ಜನತಾ ರಾಯಭಾರಿ
3 Min Read

ಚಾಮರಾಜನಗರ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸ, ಧೈರ್ಯದಿಂದ ಎದುರಿಸಿ ಪ್ರಗತಿ ಸಾಧಿಸಲು ‘ಅಭ್ಯುದಯ’ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದಲ್ಲಿ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಇಂಡಿಯಾ ಫಾರ್ ಐ.ಎ.ಎಸ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮತ್ತು ತಯಾರಿಯನ್ನು ಉತ್ತೇಜಿಸಲು ‘ಅಭ್ಯುದಯ’ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದೆ. ಅಭ್ಯುದಯ ಎಂದರೇ ಪ್ರಗತಿ, ಸಮೃದ್ಧಿ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲಿದ್ದು, ಇದು ಉತ್ತಮ ಹಾಗೂ ಉನ್ನತ ಉದ್ಯೋಗಾವಕಾಶಗಳನ್ನು ಪಡೆಯಲು ವಿಳಂಬವಾಗಲಿದೆ. ಇದಕ್ಕೆ ಪರ್ಯಾಯವಾಗಿ ಪದವಿಪೂರ್ವ ಹಂತದಲ್ಲಿಯೇ ಪರಿಶ್ರಮದ ವಿಧಾನಗಳು, ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ. ಇದರ ಸದ್ಭಳಕೆಯಾಗಬೇಕು ಎಂದರು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತ, ಕ್ರಮಬದ್ಧವಾದ ಮಾರ್ಗದರ್ಶನದ ಕೊರತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಿಂದೆ ದೆಹಲಿ, ಚೆನ್ನೈನಂತಹ ದೊಡ್ಡದೊಡ್ಡ ನಗರಗಳಿಗೆ ತೆರಳಬೇಕಾಗಿತ್ತು. ಈಗ ಜಿಲ್ಲಾಡಳಿತ ನಿಮ್ಮ ಮನೆ ಬಾಗಿಲಿನಲ್ಲಿಯೇ ಈ ಸದಾವಕಾಶ ಒದಗಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಮಾರ್ಗದರ್ಶನ ಪಡೆದು ಜಿಲ್ಲೆಯ ಪ್ರತಿಹಳ್ಳಿಗೂ ಒಬ್ಬರು ಅಥವಾ ಇಬ್ಬರು ಉನ್ನತ ಹುದ್ದೆ ಪಡೆದರೆ ಆಯಾ ಗ್ರಾಮೀಣ ಪ್ರದೇಶಗಳ ಚಿತ್ರಣವೇ ಬದಲಾಗಲಿದೆ. ಇದು ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

ಪದವಿಪೂರ್ವ ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಈಗಾಗಲೇ ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಜಿಲ್ಲೆಯ 20 ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ಸದುದ್ದೇಶದೊಂದಿಗೆ ಪದವಿಪೂರ್ವ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇಂಡಿಯಾ ಫಾರ್ ಐ.ಎ.ಎಸ್ ಅಕಾಡಮಿಯ ಅಧ್ಯಕ್ಷ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಸರ್ಕಾರದ ನಿವೃತ್ತ ಅಪರ ಕಾರ್ಯದರ್ಶಿಗಳಾದ ಸಿ.ಎಸ್. ಕೇದಾರ್ ಅವರು ಸ್ವತಃ ತಮ್ಮ ಅನುಭವಗಳನ್ನು ಹಂಚಿಕೊಂಡು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳಿರಿಮೆ ಬಿಡಬೇಕು. ಪರಿಶ್ರಮಪಟ್ಟರೆ ಎಂತಹ ಪರೀಕ್ಷೆಗಳನ್ನಾದರೂ ಗೆಲ್ಲಬಹುದು. ಆತ್ಮಸ್ತೈರ್ಯ ಮೈಗೂಡಿಸಿಕೊಳ್ಳಬೇಕು. ಅಕಾಡಮಿ ವತಿಯಿಂದ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಮಾಡಲಾಗಿದೆ ಸಾಕಷ್ಟು ಮಂದಿ ಉನ್ನತ ಅಧಿಕಾರಿಗಳ ಆಗಿದ್ದಾರೆ ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಪಿ.ಯು.ಸಿ ಅಥವಾ ಪದವಿ ನಂತರ ವಿಷಯವಾರು ಆಯ್ಕೆ ಕಠಿಣವಾಗುತ್ತಿದೆ. ಅದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವಿನ ಕೊರತೆಯು ಕಾರಣವಾಗಿದೆ. ಇದರಿಂದ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅವಶ್ಯವಿದೆ ಎಂದರು.

ಶಿಕ್ಷಣವು ಬೇಕು, ಶಿಕ್ಷಣದ ಜೊತೆಗೆ ವೃತ್ತಿ ಮಾರ್ಗದರ್ಶನದ ಅರಿವು ಬೇಕಾಗಿದೆ. ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಂಶುಪಾಲರುಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹುರಿದುಂಬಿಸಬೇಕು. ವಿಶ್ವವಿದ್ಯಾಲಯವು ಸಹ ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೊಡಿಸಲಿದೆ. ಅಬ್ದುಲ್ ಕಲಾಂ ಹೇಳಿದಂತೆ ಮಕ್ಕಳು ದೊಡ್ಡದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಜ್ಞಾನಿಯಾಗಲು ಅವರ ಪರಿಶ್ರಮವೇ ಮೂಲ ಕಾರಣವಾಗಿದ್ದು, ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಜಿಲ್ಲೆಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ನೆರವಾಗುವ ಕುರಿತ ಕರಾರು ಪತ್ರಕ್ಕೆ ಜಿಲ್ಲಾಧಿಕಾರಿಗಳಾದ ಶ್ರೀರೂಪ ಹಾಗೂ ಇಂಡಿಯಾ ಫಾರ್ ಐ.ಎ.ಎಸ್ ಅಕಾಡಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ಸಹಿ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಇಂಡಿಯಾ ಫಾರ್ ಐ.ಎ.ಎಸ್ ಅಕಾಡಮಿಯ ನಾರಾಯಣಪ್ರಸಾದ್, ಸಂಪನ್ಮೂಲ ವ್ಯಕ್ತಿ ದೀಪಕ್, ವಿಷಯ ಪರಿವೀಕ್ಷಕರಾದ ಅಂಥಾಲಿ, ಕನಕ್ಷಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this Article
Leave a comment