ಚಾಮರಾಜನಗರ: ಬ್ಯಾಂಕ್ ಗಳಲ್ಲೇ ಕಳ್ಳತನ, ಎಟಿಎಂಗಳಲ್ಲೇ ಹಣ ಲೂಟಿ ಈಗೇ ನಿರಂತರವಾದ ಸುದ್ದಿಗಳನ್ನು ಒಂದಿಲ್ಲೊಂದು ಕಡೆಗಳಲ್ಲಿ ಕೇಳುತ್ತಲೇ ಇರುತ್ತೇವೆ. ಆದರೆ ಅಂತಹ ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 16 ಪೊಲೀಸ್ ಠಾಣೆಗಳು ಇದ್ದು, ಆ ಠಾಣೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಬ್ಯಾಂಕ್ ಗಳಿಗೆ ಸಿಬ್ಬಂದಿಗಳೊಂದಿಗೆ ಪೊಲೀಸರು ಸಭೆಯನ್ನು ನಡೆಸುವ ಮೂಲಕ ಬ್ಯಾಂಕ್ ಗಳಲ್ಲಿ ಅಗತ್ಯ ಭದ್ರತೆ ಮತ್ತು ಸುರಕ್ಷತೆಯ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಬ್ಯಾಂಕ್ ಗಳ ದೈನಂದಿನ ವ್ಯವಹಾರಗಳಲ್ಲಿ ಹಾಗೂ ಎಟಿಎಂಗಳಲ್ಲಿ ಭದ್ರತೆ ಹಾಗೂ ಸುರಕ್ಷತೆಯ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಬ್ಯಾಂಕ್ ಗಳಲ್ಲಿ ಸಂಭವಿಸಬಹುದಾದ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

ಅಗತ್ಯ ಸಲಹೆ, ಸೂಚನೆಗಳು:
ಬ್ಯಾಂಕ್ ಗಳ ದೈನಂದಿನ ವ್ಯವಹಾರಗಳಲ್ಲಿ ಭಾಗವಹಿಸುವ ಸಾರ್ವಜನಿಕರ ಮೇಲೆ ಸೂಕ್ತ ನಿಗಾ ವಹಿಸಬೇಕು. ಬ್ಯಾಂಕ್ ಗಳಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ರಾತ್ರಿಯ ವೇಳೆಯಲ್ಲಿ ಸಿಸಿ ಟಿವಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಭದ್ರತೆಗೆ ಸೆಕ್ಯುರಿಟಿಗಳನ್ನು ನೇಮಕ ಮಾಡಿಕೊಳ್ಳಬೇಕು. ಬ್ಯಾಂಕ್ ಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾದಾಗ ಅಲಾರಂ ವ್ಯವಸ್ಥೆ ಇರಬೇಕು. ಎಟಿಎಂಗಳಲ್ಲಿ ಅಗತ್ಯ ಭದ್ರತೆ ಹೆಚ್ಚಿಸಬೇಕು. ರಾತ್ರಿಯ ವೇಳೆಯಲ್ಲಿ ಎಟಿಎಂ ಕಾಯುವ ಸೆಕ್ಯುರಿಟಿಗಳಿಗೆ ಗನ್ ಗಳ ವ್ಯವಸ್ಥೆ ಮಾಡಬೇಕು. ಒಟ್ಟಾರೆಯಾಗಿ ಬ್ಯಾಂಕ್ ಗಳ ಸೆಕ್ಯುರಿಟಿ ಆಡಿಟಿಂಗ್ ತರಹ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸರು ಕೈಗೊಂಡಿದ್ದಾರೆ. ಆಗಾಗ ಇಂತಹ ಕಾರ್ಯಗಳನ್ನು ಕೈಗೊಂಡಾಗ ಬ್ಯಾಂಕ್ ಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯದಂತೆ ತಡೆ ಹಿಡಿಯಬಹುದಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
