ಚಾಮರಾಜನಗರ: ನಾವು ಅಂಬೇಡ್ಕರ್ ಅನುಯಾಯಿಗಳು ಎಂದುಕೊಂಡು ದೇವರು, ಗುಡಿ-ಗುಂಡಾರಗಳನ್ನು ಸುತ್ತುವವರು ಒಂದು ಕಡೆಯಾದರೇ, ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದ ಗ್ರಾಮಸ್ಥರು, ಅಂಬೇಡ್ಕರ್ ಚಿಂತನೆಗಳಿಂದ ಪ್ರೇರಿತರಾಗಿ ದೇವಸ್ಥಾನದ ಬದಲಾಗಿ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಚಾಮರಾಜನಗರ ಗಡಿಭಾಗದಲ್ಲಿರುವ ತಾಳವಾಡಿ ಸಮೀಪದ ಮರೂರು ಗ್ರಾಮದ ದಲಿತ ಸಮುದಾಯದವರು ಇಂತಹ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಗ್ರಾಮದ ದಲಿತ ಸಮುದಾಯದವರು ಸುಮಾರು 10 ವರ್ಷಗಳ ಹಿಂದೆ ಗ್ರಾಮದಲ್ಲಿ ಸುಂದರವಾದ ದೇವಾಲಯವನ್ನೂ ನಿರ್ಮಾಣ ಮಾಡಲು ಮುಂದಾಗಿದ್ದರು. ಅದರಂತೆ ದೇವಾಲಯದ ಕಟ್ಟಡವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣವನ್ನು ಮಾಡಿದ್ದರು. ಆದರೆ ದೇವಾಲಯವನ್ನು ಉದ್ಘಾಟನೆ ಮಾಡಲು ಕಾಲ ಕೂಡಿ ಬರಲೇ ಇಲ್ಲ.

ಪ್ರಸ್ತುತ ಗ್ರಾಮಸ್ಥರೆಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಚಿಂಚತನೆಗಳಿಂದ ಪ್ರೇರಿತರಾಗಿ ಈಗ ಇರುವ ದೇವಾಲಯವನ್ನು ಕೆಡವಿ ಅಲ್ಲಿ ಅಂಬೇಡ್ಕರ್ ಸ್ಮಾರಕ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಕ್ರಾಂತಿಕಾರಿ ಬದಲಾವಣೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣಕ್ಕೆ ಹಲವಾರು ಸಂಘ-ಸಂಸ್ಥೆಗಳ ಮುಖಂಡರು ಸಹಕಾರ ನೀಡಲು ಮನಸ್ಸು ಮಾಡಿದ್ದಾರೆ.
ಗ್ರಾಮದಲ್ಲಿ ಕನ್ನಡಿಗರೇ ಹೆಚ್ಚು: ಮರೂರು ಗ್ರಾಮ ತಮಿಳುನಾಡಿಗೆ ಸೇರಿದ್ದರೂ ಶೇ.80 ರಷ್ಟು ಜನರು ಕನ್ನಡ ಭಾಷಿಗರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ತಮಿಳು ಮಾತನಾಡಿದರೂ, ಕನ್ನಡ ಭಾಷೆಯನ್ನು ಮನೆ ಮತ್ತು ಮನದ ಮಾತಾಗಿಸಿಕೊಂಡಿದ್ದಾರೆ. ಈ ಗ್ರಾಮದಲ್ಲಿ 45 ದಲಿತ ಕುಟುಂಬಗಳು ಇದ್ದು, ಸುಮಾರು 150 ಕ್ಕೂ ಹೆಚ್ಚು ಜನರಿದ್ದಾರೆ. ಗ್ರಾಮದ ಎಲ್ಲರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೂ ಸ್ವಾಭಿಮಾನ ಮತ್ತು ಸತ್ವಯುತವಾದ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿರುವುದೇ ಸಾಕ್ಷಿಯಾಗಿದೆ.

ವಿಸಿಕೆ ಶಾಸಕಿಯಿಂದಲೂ ಬೆಂಬಲ: ಇತ್ತೀಚೆಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಾಳವಾಡಿ ಮೀಸಲು ಕ್ಷೇತ್ರದಿಂದ ಜಯಗಳಿಸಿರುವ ದಳಪತಿ ವಿಜಯ್ ನೇತೃತ್ವದ ವಿಸಿಕೆ ಪಕ್ಷದ ಶಾಸಕಿ ತಮಿಳ್ ಸೆಲ್ವಿ ಅವರು ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಚಾಮರಾಜನಗರ ತಾಲೂಕಿನ ಗಡಿ, ಕಟ್ಟೆ ಯಜಮಾನರು ಬೆಂಬಲ ನೀಡಿದ್ದಾರೆ. ನಮ್ಮ ಚಾಮರಾಜನಗರ ಭಾಗದ ಮುಖಂಡರು ಆರ್ಥಿಕ ನೆರವನ್ನು ನೀಡಿದರೇ ಗ್ರಾಮಸ್ಥರ ಬದಲಾವಣೆಗೆ ಮತ್ತಷ್ಟು ಬಲ ತುಂಬಹುದಾಗಿದೆ.
ಆರ್ಥಿಕ ಸಹಕಾರ ನೀಡುವವರು ಗ್ರಾಮದ ಯಜಮಾನರಾದ ನಾಗಯ್ಯ ಅವರ ಮೊಬೈಲ್ ಸಂಖ್ಯೆ: 9486080115 ಕ್ಕೆ ಸಂಪರ್ಕಿಸಬಹುದಾಗಿದೆ.
“ಈ ಮೊದಲು ನಿರ್ಮಾಣ ಮಾಡಿದ್ದ ದೇವಸ್ಥಾನವನ್ನು ಕೆಡವಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲರೂ ಮುಂದಾಗಿದ್ದೇವೆ. ಈಗಾಗಲೇ ನಿರ್ಮಾಣ ಕೆಲಸ ಪ್ರಾರಂಭಿಸಿದ್ದೇವೆ. ನನ್ನ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ.
|ನಾಗಯ್ಯ, ಯಜಮಾನರು, ಮರೂರು ಗ್ರಾಮ, ತಾಳವಾಡಿ