ಚಾಮರಾಜನಗರ: ಪ್ರಸ್ತುತ ದೇಶದಲ್ಲಿ ಬೇರು ಬಿಟ್ಟಿರುವ ಯಥಾಸ್ಥಿತಿವಾದ ಸಂವಿಧಾನವಲ್ಲದೇ, ಪ್ರಜಾಪ್ರಭುತ್ವ ದೇಶವನ್ನೇ ನಾಶ ಮಾಡುತ್ತಿದೆ ಎಂದು ಬಹುಜನ ಚಿಂತಕ ಬಿಪಿನ್ ನಾಗರಾಜ್ ಎಚ್ಚರಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಡಿಪೋ ಆವರಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ದೇಶದಲ್ಲಿ ಸಮರ್ಪಕವಾಗಿ ಸಂವಿಧಾನ ಜಾರಿಯಾಗುವವರೆಗೂ ದೇಶದಲ್ಲಿ ಜಾತಿ ತಾರತಮ್ಯ, ಅಸಮಾನತೆ ನಾಶವಾಗುವುದಿಲ್ಲ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸದೇ ಅನುಸರಣೆ ಮಾಡಬೇಕಾಗಿದೆ. ಇಡೀ ಜಗತ್ತು ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಬುದ್ಧನನ್ನು ಅನುಸರಿಸುವ ನೂರಕ್ಕಿಂತ ಹೆಚ್ಚು ರಾಷ್ಟ್ರಗಳು ಅನುಸರಣೆ ಮಾಡುವುದರಿಂದ ಅಭಿವೃದ್ಧಿ ಹೊಂದುತ್ತಿದೆ. ಬುದ್ಧರನ್ನು ಅನುಸರಣೆ ಮಾಡದೇ ಪೂಜಿಸುವುದರಿಂದ ಈ ದೇಶ ಇಂದಿಗೂ ಮುಂದುವರಿಯುತ್ತಲೇ ಇರುವ ರಾಷ್ಟ್ರವಾಗಿದೆ ಎಂದರು.

ಈ ದೇಶದ ಜನರನ್ನು ಯಥಾಸ್ಥಿತಿವಾದ ನಾಶ ಮಾಡುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಇಂತಹ ಸಂದರ್ಭದಲ್ಲಿ ಜಗತ್ತಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರು ಅನಿವಾರ್ಯವಾಗಿದ್ದಾರೆ. ನಾವು ಅನುಭವಿಸುತ್ತಿರುವ ಬದುಕು ಅಂಬೇಡ್ಕರ್ ಅವರ ಶ್ರಮದ ಫಲವಾಗಿದೆ. ಅದನ್ನು ನಾವೆಲ್ಲರೂ ಮರೆಯದೇ ಪ್ರಬುದ್ಧ ಭಾರತ ನಿರ್ಮಾಣ ನಮ್ಮ ಕನಸಾಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಉಮೇಶ್ ಮಾತನಾಡಿ, ದೇಶದ ಮೂಲೆ ಮೂಲೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಆಚರಣೆ ಮಾಡುತ್ತಿದ್ದಾರೆ. ವರ್ಷದ 365 ದಿನಗಳೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯುತ್ತದೆ. ಪ್ರಸ್ತುತ ಹೊರ ದೇಶಗಳಲ್ಲೂ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಅವರ ಬರೆದ ಸಂವಿಧಾನ ಪ್ರತಿಯೊಬ್ಬರಿಗೂ ಆಸರೆಯಾಗಿದೆ ಎಂದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಜನಾಂಗದ ನಾಯಕರಾಗಿದ್ದಾರೆ. ಅವರು ಕೇವಲ ದಲಿತರಿಗೆ ಮಾತ್ರ ಸೀಮಿತಗೊಳಿಸಬಾರದು. ಈ ದೇಶಕ್ಕೆ ಸಂವಿಧಾನವನ್ನು ರಚಿಸಲು ಅವರು ಅಪಾರ ಶ್ರಮವನ್ನು ವಹಿಸಿದ್ದರು. ಇದಕ್ಕಾಗಿ ಹೆಂಡತಿ ಮತ್ತು ಮಕ್ಕಳನ್ನು ಕಳೆದುಕೊಂಡರು. ಅವರು ಕೊಟ್ಟ ಭಿಕ್ಷೆಯಿಂದ ನಾವೆಲ್ಲರೂ ಇಂದು ಉನ್ನತ ಹುದ್ದೆಗಳನ್ನು ಅನುಭವಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಪ್ರತಿಮೆ ಮತ್ತು ಜಯಂತಿಗಳಿಗೆ ಮಾತ್ರ ಸೀಮಿತಗೊಳಿಸದೇ, ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಕೆಎಸ್ಸಾರ್ಟಿಸಿ ನೌಕರರು ನಿವೃತ್ತರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದರು.
ಟಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಅವರು ಧಮ್ಮ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಗೌರಾಂಬ, ಆಡಳಿತಾಧಿಕಾರಿ ಎಸ್.ಬಸವರಾಜು, ಜಾಗೃತಾಧಿಕಾರಿ ಶಿವರಾಜೇಗೌಡ, ಸಂಚಲನಾಧಿಕಾರಿ ಪರಮೇಶ್ವರಪ್ಪ, ಲೆಕ್ಕಾಧಿಕಾರಿ ರುದ್ರುಮುನಿ, ಎಚ್.ಎನ್.ರಘು, ವಿ.ಎಸ್.ಶಿವಣ್ಣ, ಎಚ್.ಶ್ಯಾಮಲಾ, ಶ್ರೀಧರ್, ಕುಮಾರ್ ನಾಯ್ಕ, ಭೋಗನಾಯ್ಕ, ಸಂಘದ ಅಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಆರ್.ನಾಗರಾಜು, ಖಜಾಂಚಿ ಮೋಹನ್ ಕುಮಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.